ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ಗೆ ರಾಜೀನಾಮೆ ಶಾಕ್‌

ಶಾಸಕ ಸ್ಥಾನ ತೊರೆದ ವಿಜಯನಗರದ ಆನಂದ್‌ ಸಿಂಗ್‌, ಗೋಕಾಕ್‌ನ ರಮೇಶ್‌ ಜಾರಕಿಹೊಳಿ
Last Updated 1 ಜುಲೈ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್‌ ಅತೃಪ್ತ ಶಾಸಕರ ಅಸಮಾಧಾನ ಸೋಮವಾರವಿಜಯನಗರ ಶಾಸಕ ಆನಂದ್‌ ಸಿಂಗ್‌ ಮತ್ತು ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸ್ಫೋಟಗೊಂಡಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಇದರಿಂದ ಮೈತ್ರಿ ಸರ್ಕಾರದ ತಳಪಾಯ ಅಲುಗಾಡಲು ಆರಂಭವಾಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ವರಿಷ್ಠರು ಸರ್ಕಾರದ ಪತನವನ್ನು ತಡೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಬಿಜೆಪಿ ಸದ್ದಿಲ್ಲದೆ ‘ಆಪರೇಷನ್‌ ಕಮಲ’ ಕಾರ್ಯಾಚರಣೆಗೆ ಕೈಹಾಕಿದೆ.

ಆನಂದ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ, ಕಾಂಗ್ರೆಸ್ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ಘೋಷಿಸಿದ್ದಾರೆ. ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿರುವುದಾಗಿ ಅವರು ಹೇಳಿದ್ದು, ಆ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಮಂಗಳವಾರ ಅಮಾವಾಸ್ಯೆ ಇರುವುದರಿಂದ ಸೋಮವಾರವೇ ರಾಜೀನಾಮೆ ಸಲ್ಲಿಸಿದ್ದು, ವಿಧಾನಸಭಾ ಅಧ್ಯಕ್ಷರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇಬ್ಬರುಶಾಸಕರು ರಾಜೀನಾಮೆ ಪ್ರಕಟಿಸುತ್ತಿದ್ದಂತೆ ‘ಮೈತ್ರಿ’ ಪಕ್ಷಗಳಲ್ಲಿ ಸಂಚಲನ ಉಂಟಾಗಿದ್ದು, ಇಡೀ ದಿನ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ರಾಜ್ಯ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜತೆಗೂ ಕುಮಾರಸ್ವಾಮಿ ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ, ಸರ್ಕಾರದ ಕಡೆಯಿಂದ ಆಗುವ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪತನಕ್ಕೆ ಮುನ್ನುಡಿ: ‘ಆಪರೇಷನ್ ಕಮಲ’ಕ್ಕೆ ಕೈ ಹಾಕುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದರೂ, ಸಮಯ ನೋಡಿ
ಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ. ‘ಗುಂಪಾಗಿ ರಾಜೀನಾಮೆ ಕೊಡಿಸಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಒಬ್ಬೊಬ್ಬರಾಗಿ ರಾಜೀನಾಮೆ ಕೊಡುವಂತೆ ಮಾಡಿದರೆ ನಮ್ಮನ್ನು ಯಾರೂ ದೂರುವುದಿಲ್ಲ. ಮೈತ್ರಿ ಪಕ್ಷಗಳು ಕಿತ್ತಾಡಿಕೊಂಡು ಸರ್ಕಾರ ಪತನಗೊಂಡಿತು ಎಂದು ಜನರೇ ಹೇಳುವಂತೆ ಮಾಡಬೇಕು’ ಎಂಬ ತಂತ್ರಗಾರಿಕೆಯನ್ನು ಬಿಜೆಪಿ ಮುಖಂಡರು ರೂಪಿಸಿದ್ದಾರೆ ಎಂದು ಹೇಳಲಾಗಿದೆ.

ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ಕಾಂಗ್ರೆಸ್ ಮುಖಂಡರು ನಿರೀಕ್ಷಿಸಿದ್ದರು. ಆದರೆ, ಆನಂದ್ ಸಿಂಗ್ ರಾಜೀನಾಮೆ ಅನಿರೀಕ್ಷಿತ. ಇದೇ ರೀತಿ ಅತೃಪ್ತ ಶಾಸಕರ ರಾಜೀನಾಮೆ ಮುಂದುವರಿದರೆ ಸರ್ಕಾರ ಬೀಳುವ ಹಂತಕ್ಕೂ ಹೋಗಬಹುದು. ಕೆಲವರು ಬೆದರಿಕೆ ತಂತ್ರವಾಗಿಯೂ ರಾಜೀನಾಮೆಗೆ ಮುಂದಾಗಿದ್ದು, ಅದು ಬಿಜೆಪಿಗೆ ವರವಾಗಿಯೂ ಪರಿಣಮಿಸಬಹುದು. ಈ ಬೆಳವಣಿಗೆಯನ್ನು ರಾಜಕೀಯವಾಗಿಬಿಜೆಪಿ ಮುಖಂಡರು ಬಳಸಿಕೊಳ್ಳಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಅತೃಪ್ತ ಶಾಸಕರು ರಾಜೀನಾಮೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸುತ್ತಿದ್ದರೂ, ಒಂದೆರಡು ದಿನಗಳಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ.

ಬಳ್ಳಾರಿ ಭಾಗದ ಕಾಂಗ್ರೆಸ್ ಶಾಸಕರು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಸಂಪರ್ಕದಲ್ಲಿ ಇದ್ದು, ಸಮಯ ನೋಡಿಕೊಂಡು ರಾಜೀನಾಮೆ ಕೊಡಿಸಿ, ಸರ್ಕಾರಕ್ಕೆ ಪೆಟ್ಟು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ತುರ್ತುಸಭೆ: ಶಾಸಕರು ರಾಜೀನಾಮೆ ಪ್ರಕಟಿಸುತ್ತಿದ್ದಂತೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಿವಾಸ ‘ಕಾವೇರಿ’ಯಲ್ಲಿ ಪಕ್ಷದ ಮುಖಂಡರು ಚರ್ಚಿಸಿದರು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದರು.

ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಸಿದ್ದರಾಮಯ್ಯ ತಂದಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವಂತೆ ಅವರು ಸಲಹೆ ಮಾಡಿದ್ದಾರೆ. ಅಗತ್ಯಬಿದ್ದರೆ ಪಕ್ಷ ನಿಷ್ಠರಾದ ನಾಲ್ಕೈದು ಸಚಿವರ ರಾಜೀನಾಮೆ ಕೊಡಿಸಿ, ಬಂಡಾಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಮನೆಯಲ್ಲೇ ಮಾಹಿತಿ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪದ್ಮನಾಭನಗರದ ಮನೆಯಲ್ಲೇ ಕುಳಿತು ಮಾಹಿತಿ ಪಡೆದುಕೊಂಡರು. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅವರು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.

ಕಾದು ನೋಡುವ ತಂತ್ರ

ಕೆಲವು ಅತೃಪ್ತ ಶಾಸಕರು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಈಗ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಮುಂದಿನ ಎರಡು ದಿನಗಳ ರಾಜಕೀಯ ಬೆಳವಣಿಗೆ ಗಮನಿಸಲಿದ್ದಾರೆ. ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ ಎಂಬುದು ಖಚಿತವಾದರೆ ಮತ್ತಷ್ಟು ಶಾಸಕರು ರಾಜೀನಾಮೆಗೆ ಮುಂದಾಗಬಹುದು.

ಶಾಸಕರ ರಾಜೀನಾಮೆ ಪರ್ವ ಮುಂದುವರಿಯದಿದ್ದರೆ ಹಾಗೂಇಬ್ಬರ ರಾಜೀನಾಮೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ವಿಚಾರ ಮನದಟ್ಟಾದರೆ ಉಳಿದವರು ರಾಜೀನಾಮೆಗೆಮುಂದಾಗುವ ಸಾಧ್ಯತೆಗಳು ಕಡಿಮೆ. ರಾಜೀನಾಮೆ ನೀಡುತ್ತೇವೆ ಎಂದು ಬೆದರಿಸಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲೂಬಹುದು ಎಂದು ಹೇಳಲಾಗುತ್ತಿದೆ.

ಮನವೊಲಿಕೆಗೆ ಎಚ್‌ಡಿಕೆ ಯತ್ನ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿದೇಶದಿಂದಲೇ ದೂರವಾಣಿ ಕರೆ ಮಾಡಿ ಅತೃಪ್ತ ಶಾಸಕರ ಜತೆಗೆ ಮಾತುಕತೆ ನಡೆಸಿದ್ದಾರೆ. ತಾವು ರಾಜ್ಯಕ್ಕೆ ಬರುವವರೆಗೆ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಮನವೊಲಿಸಿದ್ದಾರೆ. ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿರುವುದರಿಂದ ಪ್ರವಾಸ ಮೊಟಕುಗೊಳಿಸಿ, ವಾಪಸಾಗುವ ಸಾಧ್ಯತೆಯೂ ಇದೆ.

ಇನ್ನೂ 13 ಶಾಸಕರು ರಾಜೀನಾಮೆ ನೀಡಿದರೆ ಪತನ

ಈಗಿನ ಸ್ಥಿತಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ವಿಧಾನಸಭೆಯ ಒಟ್ಟು ಶಾಸಕರ ಬಲವನ್ನು 209ಕ್ಕೆ ಇಳಿಯುವಂತೆ ಮಾಡಬೇಕು. ಇದಕ್ಕಾಗಿ ಒಟ್ಟು 15 ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ.

ವಿಧಾನಸಭೆಯಲ್ಲಿ ‘ಮೈತ್ರಿ’ ಪಕ್ಷಗಳ (ಕಾಂಗ್ರೆಸ್, ಜೆಡಿಎಸ್‌, ಬಿಎಸ್‌ಪಿ ಮತ್ತು ಪಕ್ಷೇತರರು) ಬಲ 119. ಬಿಜೆಪಿ 105 ಸ್ಥಾನಗಳನ್ನು ಹೊಂದಿದೆ. ಈಗ ಆನಂದ್‌ಸಿಂಗ್‌ ಮತ್ತು ರಮೇಶ್‌ ಜಾರಕಿಹೊಳಿ ರಾಜೀನಾಮೆಯಿಂದ ಮೈತ್ರಿ ಪಕ್ಷಗಳ ಬಲ 117ಕ್ಕೆ ಇಳಿದಿದೆ. ಮೈತ್ರಿ ಪಕ್ಷಗಳ ಬಲ 102ಕ್ಕೆ ಇಳಿದರೆ ಬಿಜೆಪಿಗೆ ಲಾಭ. ಕರ್ನಾಟಕ ವಿಧಾನಸಭೆಯ ಒಟ್ಟು ಬಲ 224. ಅಧಿಕಾರ ಹಿಡಿಯಲು ಬೇಕಾದ ಸಂಖ್ಯೆ 113.

ಮೈತ್ರಿ ಪಕ್ಷಗಳ ಇನ್ನೂ 13 ಶಾಸಕರು ರಾಜೀನಾಮೆ ನೀಡಿದರಷ್ಟೇ ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಇಳಿದು, ಬಿಜೆಪಿ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ. ಶಾಸಕರ ರಾಜೀನಾಮೆ ಪರ್ವ ಮುಂದುವರಿದರೆ, ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಬಿಜೆಪಿ ಒತ್ತಾಯಿಸುತ್ತದೆ. ಆ ಸಂದರ್ಭದಲ್ಲಿ ಕೆಲವು ಶಾಸಕರು ಗೈರಾಗುವ ಸಾಧ್ಯತೆಯೂ ಇದೆ. ಇದೂ ಕೂಡ ಬಿಜೆಪಿಯ ಕಾರ್ಯತಂತ್ರದ ಭಾಗ ಎಂದು ಹೇಳಲಾಗಿದೆ.

ವಿಧಾನಸಭಾಧ್ಯಕ್ಷರಲ್ಲದೇ, ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕರು ರಾಜೀನಾಮೆ ನೀಡುವ ಮೂಲಕ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರು ಕೇಳುವಂತೆ ಮಾಡುವುದೂ ಬಿಜೆಪಿ ತಂತ್ರದ ಒಂದು ಭಾಗ ಎಂದೂ ವ್ಯಾಖ್ಯಾನಿಸಲಾಗಿದೆ.

ಕಾಂಗ್ರೆಸ್‌ನಿಂದ ಅಮಾನತ್ತಿಗೆ ಒಳಗಾಗಿರುವ ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಕೂಡ ಮೈತ್ರಿಗೆ ಕೈಕೊಡುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ಹುದ್ದೆಗಳು ಸಿಗದೇ ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ ಕೆಲವು ಹಿರಿಯ ಶಾಸಕರ ನಡೆಯೂ ನಿಗೂಢವಾಗಿದೆ. ಬಹುಮತ ಸಾಬೀತಿನ ಸಂದರ್ಭದಲ್ಲಿ ಇವರು ಗೈರಾದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತದೆ.

ವಿಧಾನಸಭೆಯಲ್ಲಿ ಬಲಾ ಬಲ

ಮೈತ್ರಿ ಪಕ್ಷ 119 (ಸ್ಪೀಕರ್‌ ಸೇರಿ)

ಬಿಜೆಪಿ 105

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT