ಮಂಗಳವಾರ, ಆಗಸ್ಟ್ 3, 2021
26 °C
ಕೊರೊನಾ ಸಮಸ್ಯೆ ಬಗೆಹರಿಸುವಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ: ಸಿಎಂ

ಅತೃಪ್ತರ ಸಭೆ: ಬಿಎಸ್‌ವೈ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಅತೃಪ್ತರ ಸಭೆ ಮತ್ತು ತಮ್ಮ ನಾಯಕತ್ವವನ್ನು ಪ್ರಶ್ನಿಸಿದ ಶಾಸಕರ ನಡೆಯ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದರು.

ನರೇಂದ್ರಮೋದಿ ಪ್ರಧಾನಿಯಾಗಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ರಾಜಕೀಯದ ಬಗ್ಗೆ ಉತ್ತರಿಸಲು ನಿರಾಕರಿಸಿದರು. ‘ನಾನೀಗ ಕೊರೊನಾ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವುದಿಲ್ಲ. ಆ ಎಲ್ಲ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇತ್ತೀಚೆಗೆ ಅತೃಪ್ತ ಶಾಸಕರ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ‘ನನಗೆ ಮೋದಿ, ಶಾ ಮತ್ತು ನಡ್ಡಾ ಮಾತ್ರ ನಾಯಕರು, ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ’ ಎಂಬ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿತ್ತು.

ಕೋವಿಡ್‌ ತಡೆಗಟ್ಟುವ ವಿಷಯದಲ್ಲಿ ಹೆಚ್ಚು ಸಕ್ರಿಯರಾಗಿರುವ ಪಕ್ಷದ ವರಿಷ್ಠರು ಕರ್ನಾಟಕ ಬಿಜೆಪಿ ಘಟಕದಲ್ಲಿನ ಆಂತರಿಕ ಸಮಸ್ಯೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ತಮ್ಮ ವಿರುದ್ಧ ಯಾರೂ ಒಟ್ಟಾಗಿಲ್ಲ: ಎಲ್ಲರೂ ತಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಯಡಿಯೂರಪ್ಪ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ದಿನ ನಿತ್ಯ ನಡೆಸುತ್ತಿದ್ದಾರೆ. ಸೋಮವಾರ ನಡೆಸಿದ  ಪತ್ರಿಕಾಗೋಷ್ಠಿಯಲ್ಲಿ ಹಲವು ನಾಯಕರನ್ನು ಜತೆಯಲ್ಲಿ ಕೂರಿಸಿಕೊಂಡಿದ್ದ ಅವರು ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನವನ್ನೂ ನಡೆಸಿದರು.

**

‘ಬದಲಾವಣೆಯ ಚರ್ಚೆ ನಡೆದಿರಬಹುದು’
‘ಅಧಿಕಾರದ ಅಪೇಕ್ಷೆ ಇರುವುದು ಸಹಜ. ಅದರ ಕುರಿತು ಮತ್ತು ರಾಜಕೀಯ ಬದಲಾವಣೆ ಬಗ್ಗೆ ಕೆಲವು ಶಾಸಕರು ಚರ್ಚೆ ಮಾಡಿರಬಹುದು. ಚರ್ಚೆ ಮಾಡಿದ ಮಾತ್ರಕ್ಕೆ ಅದು ಭಿನ್ನಮತವಲ್ಲ’ ಎಂದು ಉಪಮುಖ್ಯಮಂತ್ರಿ ಸಚಿವ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಹೇಳಿದರು.

‘ಮುರುಗೇಶ ನಿರಾಣಿ ಅವರ ಮನೆಯಲ್ಲಿ ಎಲ್ಲರೂ ಸೇರಿ ಭೋಜನ ಕೂಟ ಮಾಡಿದ್ದು ನಿಜ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಹೋಟೆಲ್‌ಗಳು ಬಂದ್ ಆಗಿದ್ದವು. ಎಲ್ಲೂ ಊಟ ಸಿಗುತ್ತಿರಲಿಲ್ಲ. ನಮ್ಮೂರಿಗೆ ಬಂದಾಗ ಶಾಸಕರಿಗೆ ನಾನೂ ಕೂಡ ಭೂಜನ ಕೂಟ ಏರ್ಪಡಿಸಿದ್ದೆ. ಅದು ಭಿನ್ನಮತವಲ್ಲ. ಯಡಿಯೂರಪ್ಪ ಅವರೇ ನಮ್ಮ ನಾಯಕರು’ ಎಂದರು.

‘ಬಸನಗೌಡ ಪಾಟೀಲ ಯತ್ನಾಳ, ಉಮೇಶ‌ ಕತ್ತಿ ಅವರ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಹೋದರ ರಮೇಶ ಕತ್ತಿ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕೆಂದು ಬೇಡಿಕೆ ಇಟ್ಟಿರುವುದು ತಪ್ಪಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ವರಿಷ್ಠರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಲ್ಲವೂ ಮಾತುಕತೆ ಮೂಲಕ ಸರಿಪಡಿಸಲಾಗುತ್ತದೆ’ ಎಂದರು.

*

ಯಾವುದೇ ಬಂಡಾಯ ಮತ್ತು ಗುಂಪುಗಾರಿಕೆ ಇಲ್ಲ. ರಾಜ್ಯಸಭೆಗೆ ಟಿಕೆಟ್‌ ನೀಡುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ, ರಾಜಕಾರಣದಲ್ಲಿ ಇವೆಲ್ಲ ಸಹಜ
-ಎಸ್‌.ಟಿ.ಸೋಮಶೇಖರ್, ಸಹಕಾರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು