ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು ‘ಕೈ’ ಜಾರಿದ ಬಳಿಕ ಕಾರ್ಯತಂತ್ರ

ಅತೃಪ್ತರ ಮನವೊಲಿಕೆ ಯತ್ನ ವಿಫಲ * ದೆಹಲಿಯಿಂದ ದೌಡಾಯಿಸಿದ ಕಾಂಗ್ರೆಸ್ ‘ಉಸ್ತುವಾರಿ’ ವೇಣುಗೋಪಾಲ್
Last Updated 6 ಜುಲೈ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಅತೃಪ್ತ ಶಾಸಕರು ‘ಕೈ’ ಜಾರುತ್ತಿದ್ದಂತೆ ದೆಹಲಿಯಿಂದ ನಗರಕ್ಕೆ ದೌಡಾಯಿಸಿದ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಪಕ್ಷದ ಮುಂದಿನ ರಾಜಕೀಯ ನಡೆ ಕುರಿತಂತೆ ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಿದರು.

ಸಿದ್ದರಾಮಯ್ಯ ನಿವಾಸ ‘ಕಾವೇರಿ’ಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ಅವರು, ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಸಭಾಧ್ಯಕ್ಷರು ತೆಗೆದುಕೊಳ್ಳಬಹುದಾದ ನಡೆಗಳ ಬಗ್ಗೆಯೂ ಚರ್ಚೆ ನಡೆಸಿದರು.

ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂದು ಸಿದ್ದರಾಮಯ್ಯ ಮೇಲೆ ವೇಣುಗೋಪಾಲ್ ಅತೃಪ್ತಿ ವ್ಯಕ್ತಪಡಿಸಿದರು. ಅದಕ್ಕೆ ‘ಎಷ್ಟೂಂತ ಸಮಾಧಾನ ಹೇಳಲು ಸಾಧ್ಯ. ಪ್ರತಿ ಬಾರಿ ಸಂಪುಟ ಪುನರ್‌ ರಚನೆ ಸಾಧ್ಯವೇ? ಒಬ್ಬರನ್ನು ಸಮಾಧಾನಪಡಿಸಿದರೆ ಮತ್ತೊಬ್ಬರು ಅಸಮಾಧಾನಗೊಳ್ಳುತ್ತಾರೆ. ಈಗ ಪರಿಸ್ಥಿತಿ ಕೈ ಮೀರಿದೆ’ ಎಂದು ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

‘ತಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಕೆಲವು ಶಾಸಕರಿಗೆ ಅಸಮಾಧಾನವಿದೆ. ಬೆಂಗಳೂರಿನ ಶಾಸಕರು, ಹಲವು ಬಾರಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಗಮನಕ್ಕೂ ಈ ವಿಷಯವನ್ನು ತಂದಿದ್ದೆ’ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.

ಬಿರುಸಿನ ಚಟುವಟಿಕೆ: ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದು ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್‌ ಪಾಳಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆದವು. ಬೆಳಿಗ್ಗೆ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಧಾವಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಮನವಿ ಮಾಡಿದರು.

ಇತರ ಅತೃಪ್ತ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್‌ ನಾಯಕರು ಮಾಡಿದರು. ಕೆಲವು ಶಾಸಕರನ್ನು ಕರೆದು ಮಾತನಾಡಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನವೂ ವಿಫಲವಾಯಿತು.

ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿರುವ ಪಕ್ಷದ ಕೊಠಡಿಯಲ್ಲಿ ಸಭೆ ಸೇರಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಗೃಹ ಸಚಿವ ಎಂ.ಬಿ. ಪಾಟೀಲ ಸಮಾಲೋಚನೆ ನಡೆಸಿದರು.

ಡಿಕೆಶಿ ಸಂಧಾನ ವಿಫಲ: ರಾಜೀನಾಮೆಗೆ ಮುಂದಾದ ಪಕ್ಷದ ಅತೃಪ್ತ ಶಾಸಕರನ್ನು ವಿಧಾನಸೌಧದಿಂದ ಕ್ರೆಸೆಂಟ್‌ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ನಿವಾಸಕ್ಕೆ ಕರೆದುಕೊಂಡು ಹೋಗಿ ಸಚಿವ ಡಿ.ಕೆ. ಶಿವಕುಮಾರ್‌ ನಡೆಸಿದ ಸಂಧಾನ ಕೂಡಾ ವಿಫಲವಾಯಿತು.

ಆದರೆ, ಮಾತುಕತೆ ಬಳಿಕ ಅಲ್ಲಿಂದ ತೆರಳಿದ ರಾಮಲಿಂಗಾರೆಡ್ಡಿ, ‘ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಅತೃಪ್ತರ ಗುಂಪಿನಲ್ಲಿ ನಾನಿಲ್ಲ. ಒಬ್ಬಂಟಿಯಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಅದನ್ನು ವಾಪಸ್ ಪಡೆಯುವ ಮಾತೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಮುನಿರತ್ನ ಪ್ರತಿಕ್ರಿಯಿಸಿ, ‘ನಮ್ಮ ನಾಯಕ ರಾಮಲಿಂಗಾರೆಡ್ಡಿ’ ಎಂದಷ್ಟೆ ಹೇಳಿದರು. ಅತೃಪ್ತ ಶಾಸಕರು ಅಲ್ಲಿಂದ ತೆರಳಿದ ನಂತರ ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಅತೃಪ್ತರಿಗೆ ಭದ್ರತೆ ನೀಡಲು ವಾಲಾ ಸೂಚನೆ
ಅತೃಪ್ತ ಶಾಸಕರು ರಾಜಭವನಕ್ಕೆ ಬರುತ್ತಿದ್ದಂತೆ, ಬೆಂಗಳೂರು ನಗರ ಪೊಲೀಸ್ ಕಮೀಷನರ್‌ ಅಲೋಕ್ ಕುಮಾರ್ ಅವರನ್ನು ಕರೆಸಿಕೊಂಡ ರಾಜ್ಯಪಾಲ ವಜುಭಾಯಿ ವಾಲಾ, ರಾಜೀನಾಮೆ ನೀಡಿರುವ ಶಾಸಕರಿಗೆ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿದರು. ಟೆಂಪೊ ಟ್ರಾವೆಲರ್‌ನಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ರಾಜಭವನದಿಂದ ಶಾಸಕರು ತೆರಳಿದರು.

ಸೋನಿಯಾಗೆ ದೇವೇಗೌಡ ಕರೆ?
ಕಾಂಗ್ರೆಸ್‌ನ ಅತೃಪ್ತ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಕರೆ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

‘ಸದ್ಯದ ರಾಜಕೀಯ ಬೆಳವಣಿಗೆಗಳಿಗೆ ಸಿದ್ದರಾಮಯ್ಯ ಅವರೇ ಕಾರಣ. ಅತೃಪ್ತರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಆಪ್ತರು. ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಪತ್ರ ಬರೆದು ನಿಮ್ಮ ಜೊತೆ ಎಲ್ಲ ವಿಷಯವನ್ನು ಹಂಚಿಕೊಂಡಿದ್ದೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಷರತ್ತು ವಿಧಿಸಿದ ರಾಮಲಿಂಗಾರೆಡ್ಡಿ
ಅತೃಪ್ತ ಶಾಸಕ ರಾಮಲಿಂಗಾರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ಹೋಟೆಲ್‌ ವಿಂಡ್ಸರ್ ಮ್ಯಾನರ್‌ಗೆ ಕರೆಸಿಕೊಂಡ ಕಾಂಗ್ರೆಸ್‌ ‘ಉಸ್ತುವಾರಿ’ ಕೆ.ಸಿ.ವೇಣುಗೋಪಾಲ್ ಮಾತುಕತೆ ನಡೆಸಿದರು.

‘ಯಾವುದೇ ಕಾರಣಕ್ಕೂ ಪಕ್ಷ ತೊರೆಯಬೇಡಿ. ರಾಜೀನಾಮೆ ವಾಪಸು ಪಡೆಯಿರಿ’ ಎಂದು ವೇಣುಗೋಪಾಲ್‌ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅದಕ್ಕೆ ರಾಮಲಿಂಗಾರೆಡ್ಡಿ, ‘ನಾನು ಪಕ್ಷದಲ್ಲಿಯೇ ಉಳಿಯುತ್ತೇನೆ. ಆದರೆ, ಪರಮೇಶ್ವರ ಅವರನ್ನು ಬೆಂಗಳೂರು ಉಸ್ತುವಾರಿಯಿಂದ ಕೆಳಗಿಳಿಸಬೇಕು. ಅವರಿಂದಲೇ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಅವರ ಕಾರಣದಿಂದಲೇ ನಮ್ಮ ಶಾಸಕರು ರಾಜೀನಾಮೆ ನೀಡಿದ್ದಾರೆ’ ಎಂದು ಷರತ್ತು ಹಾಕಿದ್ದಾರೆ ಎಂದು ಗೊತ್ತಾಗಿದೆ.

ಸಚಿವರಾದ ಜಮೀರ್ ಅಹಮದ್, ಎಂ.ಬಿ. ಪಾಟೀಲ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡಾ ಹೋಟೆಲ್‌ಗೆಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT