ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ಸಿಡಿಮಿಡಿ: ಮುನಿಯಪ್ಪ, ಹರಿಪ್ರಸಾದ್‌ ಕೋಪ–ತಾಪ

ಕಾಂಗ್ರೆಸ್ ಮುಖಂಡರ ಸಭೆ
Last Updated 26 ಸೆಪ್ಟೆಂಬರ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಾಧಿಪತ್ಯ ನಡೆಸುತ್ತಿದ್ದಾರೆ’ ಎಂದು ಅತೃಪ್ತಿ ವ್ಯಕ್ತ‍ಪಡಿಸುತ್ತಿದ್ದ ಹಿರಿಯ ಮುಖಂಡರು ಈಗ ಒಟ್ಟಾಗಿದ್ದು, ಗುರುವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ರಾಜ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿಲ್ಲ. ಅದಕ್ಕೆ ಬದಲಾಗಿ ಗುಂಪುಗಾರಿಕೆಯಲ್ಲಿ ನಿರತರಾಗಿದ್ದು, ಕಾಂಗ್ರೆಸ್ ನಿರ್ನಾಮ ಮಾಡುವ ಕಾರ್ಯದಲ್ಲಿ ತೊಡಗಿದ್ದೀರಿ. ಇನ್ನೂ ಏನು ಉಳಿಸಿದ್ದೀರಿ’ ಎಂದು ಹಾರಿಹಾಯ್ದರಲ್ಲದೇ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧವೂ ಕಿಡಿಕಾರಿದ್ದಾರೆ.

ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಅಧ್ಯಕ್ಷತೆಯಲ್ಲಿ ಮುಖಂಡರ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯರನ್ನು ಗುರಿಯಾಗಿಸಿ ಮುಖಂಡ ರಾದ ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿ ಯಪ್ಪ, ರೆಹಮಾನ್‌ ಖಾನ್ ವಾಗ್ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.

‘ಅಭ್ಯರ್ಥಿ ಪಟ್ಟಿ ಸಿದ್ಧಪಡಿಸುವ ಮುನ್ನ ಚರ್ಚಿಸಬೇಕು. ತಮಗೆ ಬೇಕಾದವರ ಹೆಸರನ್ನು ಪಟ್ಟಿ ಮಾಡಿಕೊಂಡು ಬಂದು, ಒಪ್ಪಿಗೆ ಕೊಡಿ ಎನ್ನುತ್ತಿದ್ದೀರಿ. ಈವರೆಗೂ ನಡೆಸಿದ ಸಭೆಗಳಿಗೆ ನನ್ನನ್ನು ಆಹ್ವಾನಿಸಿಲ್ಲ. ಯಾರೋ ಒಬ್ಬರು ಹೇಳಿದಂತೆ ನಡೆಯುವುದಾದರೆ ಏಕೆ ಕರೆದಿದ್ದೀರಿ’ ಎಂದು ದಿನೇಶ್ ಅವರನ್ನುಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.

ಶಿವಾಜಿನಗರಕ್ಕೆ ರಿಜ್ವಾನ್ ಅರ್ಷದ್ ಹೆಸರು ಪ್ರಸ್ತಾಪಿಸಿದ್ದಕ್ಕೂ ಸಿಟ್ಟಾದಅವರು, ‘ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದು, ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದಾರೆ. ವಿಧಾನಸಭೆಗೂ ಟಿಕೆಟ್ ಕೊಡಿ, ಸೋತ ನಂತರ ಬಿಬಿಎಂಪಿ ಚುನಾವಣೆಗೂ ಟಿಕೆಟ್ ಮೀಸಲಿರಿಸಿ’ ಎಂದು ವ್ಯಂಗ್ಯವಾಡಿದರು.

ಕೆ.ಎಚ್‌.ಮುನಿಯಪ್ಪ ಕೂಡ, ಸಿದ್ದರಾಮಯ್ಯ ಗುಂಪಿನ ಏಕ ಪಕ್ಷೀಯ ನಿರ್ಧಾರದ ಬಗ್ಗೆ ಕಿಡಿ ಕಾರಿದರು.ಶಾಸಕ ಜಿ.ಪರಮೇಶ್ವರ ಸಭೆಯಿಂದ ಹೊರಗುಳಿದಿದ್ದರು.

‘ನೀವು ಏನ್ ಮಾಡ್ತಿರೋ ಮಾಡ್ಕಳಿ’
‘ರಮೇಶ್ ಕುಮಾರ್ ಜತೆಯಲ್ಲೇ ಓಡಾಡುತ್ತೇನೆ. ನೀವು ಏನು ಮಾಡ್ತೀರೋ, ಮಾಡ್ಕಳಿ’ ಎಂದು ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಟೀಕಿಸಿದವರಿಗೆ ಸವಾಲು ಹಾಕಿದರು ಎನ್ನಲಾಗಿದೆ.

‘ನನ್ನ ಸೋಲಿಗೆ ರಮೇಶ್ ಕುಮಾರ್ ಕಾರಣರಾಗಿದ್ದು, ಕ್ರಮ ಕೈಗೊಳ್ಳುವಂತೆ ಕೋರಿದರೆ ಅವರ ಪಕ್ಕದಲ್ಲೇ ಕುಳಿತು, ಜತೆಯಲ್ಲೇ ಓಡಾಡುತ್ತೀದ್ದೀರಿ’ ಎಂದು ಮುನಿಯಪ್ಪ ಪ್ರಶ್ನಿಸುತ್ತಿದ್ದಂತೆ ಸಿಟ್ಟಾದ ಸಿದ್ದರಾಮಯ್ಯ, ‘ನಾನು ಇರುವುದು ಹೀಗೆ, ಅದಕ್ಕೇನು ಮಾಡುವುದು’ ಎಂದು ತುಸು ಖಾರವಾಗಿಯೇ ಪ್ರಶ್ನಿಸಿದರು.

ರಾಜೀನಾಮೆಗೆ ಮುಂದಾದ ದಿನೇಶ್
ಸಭೆಯಲ್ಲಿ ಹಿರಿಯ ಮುಖಂಡರಿಂದ ತೀವ್ರ ವಾಗ್ದಾಳಿ ಎದುರಾಗುತ್ತಿದ್ದಂತೆ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು. ‘ರಾಜೀನಾಮೆ ಪರಿಹಾರ ಅಲ್ಲ. ಒಗ್ಗೂಡಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡಿ’ ಎಂದು ಹರಿಪ್ರಸಾದ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT