ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಸೋಲಿಸುವುದೇ ಗುರಿ: ಎಚ್‌.ಡಿ. ಕುಮಾರಸ್ವಾಮಿ ಶಪಥ

Last Updated 14 ನವೆಂಬರ್ 2019, 20:49 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ ಸರ್ಕಾರ ಕೆಡವಿ, ಉಪ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿಯಲು ನಿರ್ಧರಿಸಿರುವಎಲ್ಲ 15 ಅಭ್ಯರ್ಥಿಗಳಿಗೆ ಸೋಲುಣಿಸುವುದೇ ನನ್ನ ಗುರಿ. ಆ ನಿಟ್ಟಿನಲ್ಲಿ ರಣತಂತ್ರ ರೂಪಿಸುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಶಪಥ ಮಾಡಿದರು.

ಗುರುವಾರ ಇಲ್ಲಿ 10 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ‘ಹೊಸಕೋಟೆಯಲ್ಲಿಪಕ್ಷೇತರ ಅಭ್ಯರ್ಥಿಗೆ ಪಕ್ಷದ ಬೆಂಬಲ ಇದೆ.ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಶನಿವಾರ
ಪ್ರಕಟಿಸಲಾಗುವುದು’ ಎಂದರು.

‘ಪಕ್ಷದ ವರಿಷ್ಠ ದೇವೇಗೌಡರು ಬಿಜೆಪಿಗೆ ಬಹುಮತ ಬರಲಿದೆ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ನಾವು ಬಿಜೆಪಿಗೆ ಶರಣಾಗಿದ್ದೇವೆ ಎಂದಲ್ಲ. ಅದು ಅವರ ರಾಜಕೀಯ ಒಳನೋಟ ಅಷ್ಟೆ. ನನಗೆ ಬಿಜೆಪಿ ಮೇಲಾಗಲಿ, ಕಾಂಗ್ರೆಸ್ ಮೇಲಾಗಲಿ ವ್ಯಾಮೋಹ ಇಲ್ಲ. ಯಾವುದೇ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳುವ ಅಥವಾ ಶರಣಾಗುವ ಪ್ರಶ್ನೆಯೇ ಇಲ್ಲ. ಡಿ.9ರಂದು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಹೊಸ ರಾಜಕೀಯ ಆಟ ಶುರು ಆಗಲಿದೆ’ ಎಂದು ಭವಿಷ್ಯ ನುಡಿದರು.

‘ರಾಜಕಾರಣ ಎಂದರೆ ತಂತ್ರ ಮಾಡಲೇಬೇಕು.‌ ಯುದ್ಧವೆಂದರೆ ಸಂಸಾರ, ಸ್ನೇಹಿತರು ಯಾರನ್ನೂ ನೋಡುವಂತಿಲ್ಲವೆಂದು ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಹೀಗೆ, ಇವತ್ತಿನ ರಾಜಕೀಯ ಸಂದರ್ಭದಲ್ಲಿ ಮತ್ತು ಮುಂದಿನ ನಮ್ಮ ಪಕ್ಷದ ಹಿತದೃಷ್ಟಿಯಿಂದ ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ಘೋಷಿಸಿದ್ದೇನೆ’ ಎಂದರು.

‘ರಾಜ್ಯದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಪಕ್ಷದ ಶಾಸಕರಿದ್ದ ಕೆ.ಆರ್. ಪೇಟೆ, ಹುಣಸೂರು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಸೇರಿದಂತೆ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಪ್ರಯತ್ನಿಸುತ್ತೇವೆ. 2–3 ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಬಲ ಇಲ್ಲ. ಆದರೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಹಾಗೆಂದು ಯಾವುದೇ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಅಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ನನ್ನ ಸರ್ಕಾರ ಬೀಳಲು ಮುಖ್ಯ ಕಾರಣರಾದವರು ಈಗ ನನ್ನನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ನನಗೆ ಆತ್ಮೀಯರು ಎಂದು ಹೇಳುತ್ತಿದ್ದಾರೆ. ನನ್ನ ಬೆಂಬಲ ಬೇಕು ಎಂದು ಹಿಂದೆ ಬಿದ್ದಿದ್ದಾರೆ’ ಎಂದು ಚಿಕ್ಕಬಳ್ಳಾಪುರದ ಅನರ್ಹಶಾಸಕ ಸುಧಾಕರ್‌ ಮತ್ತು ಹುಣಸೂರಿನಿಂದ ಕಣಕ್ಕಿಳಿಯಲು ಬಯಸಿರುವ ಯೋಗೇಶ್ವರ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಪಕ್ಷದ ಶಾಸಕಾಂಗ ಸಭೆ ಶುಕ್ರವಾರ ನಡೆಯಲಿದೆ. ಈ ಸಭೆಗೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಬರುತ್ತಾರೆ. ಎಲ್ಲ 15 ಕ್ಷೇತ್ರಗಳ ಚುನಾವಣಾ ಜವಾಬ್ದಾರಿಯನ್ನು ಹಂಚಿಕೆ ಮಾಡುತ್ತೇನೆ’ ಎಂದರು.

ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿ
ವಿಧಾನಪರಿಷತ್‌ನ ನಾಲ್ಕುಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ 2020ರ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಆ ಕ್ಷೇತ್ರಗಳಿಗೂ ಅಭ್ಯರ್ಥಿ ಹೆಸರನ್ನು ಕುಮಾರಸ್ವಾಮಿ ಪ್ರಕಟಿಸಿದರು. ಆಗ್ನೇಯ ಪದವೀಧರ ಕ್ಷೇತ್ರ–ಆರ್. ಚೌಡರೆಡ್ಡಿ ತೂಪಲ್ಲಿ, ಬೆಂಗಳೂರು ಶಿಕ್ಷಕರ ಕ್ಷೇತ್ರ– ಎ.ಪಿ. ರಂಗನಾಥ್, ಪಶ್ಚಿಮ ಪದವೀಧರರ ಕ್ಷೇತ್ರ– ಶಿವಶಂಕರ ಕಲ್ಲೂರ, ಈಶಾನ್ಯ ಶಿಕ್ಷಕರ ಕ್ಷೇತ್ರ– ತಿಮ್ಮಯ್ಯ ಪುರ್ಲೆ.

ರಮೇಶ್ ಬಾಬು ಪಕ್ಷದಿಂದ ದೂರ?
ಆಗ್ನೇಯ ಪದವೀಧರ ಕ್ಷೇತ್ರದಿಂದ ಟಿಕೆಟ್‌ ಕೊಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರೂ, ಇದೀಗ ಮತ್ತೆ ಆರ್‌.ಚೌಡರೆಡ್ಡಿ ತೂಪಲ್ಲಿ ಅವರಿಗೆ ಟಿಕೆಟ್‌ ನೀಡಲು ಮುಂದಾಗಿರುವ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಪಕ್ಷದ ರಾಷ್ಟ್ರೀಯ ವಕ್ತಾರ ರಮೇಶ್‌ ಬಾಬು ಬೇಸರಗೊಂಡಿದ್ದಾರೆ ಹಾಗೂ ಪಕ್ಷದಿಂದ ದೂರ ಸರಿಯುವ ಚಿಂತನೆ ನಡೆಸಿದ್ದಾರೆಎಂದು ಹೇಳಲಾಗಿದೆ. ಇದರ ಸಂಕೇತ ಎಂಬಂತೆ ತಮ್ಮ ಟ್ವಿಟರ್‌ ಖಾತೆಯಲ್ಲಿದ್ದ ಜೆಡಿಎಸ್‌ ಪದವನ್ನು ತೆಗೆದು ‘ಮಾಜಿ ಶಾಸಕ’ ಎಂದು ಬದಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT