ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶ ಕಾಣದ ಶತಮಾನೋತ್ಸವ ಭವನದ ಕಾಮಗಾರಿ.

Last Updated 14 ಮೇ 2018, 10:38 IST
ಅಕ್ಷರ ಗಾತ್ರ

ಸೋಮವಾರಪೇಟೆ: 1938 ರಲ್ಲಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಾರಂಭದೊಂದಿಗೆ ಶತಮಹನೋತ್ಸವ ಕಂಡ ಸವಿನೆನಪಿಗಾಗಿ ಕಳೆದ 12 ವರ್ಷಗಳ ಹಿಂದೆ ಶತಮಾನೋತ್ಸವ ಭವನ ಕಾಮಗಾರಿ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಶೇಕಡ 50 ರಷ್ಟು ಕಾಮಗಾರಿ ಮುಗಿದ್ದಿದ್ದು ಹಣದ ಮುಗ್ಗಟ್ಟು ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಜನರ ಉಪಯೋಗಕ್ಕೆ ಸಿಗುವ ಲಕ್ಷಣ ಮಾತ್ರ ಇನ್ನೂ ಅಗೋಚರವಾಗಿದೆ.

ಈ ಶಾಲೆಯಲ್ಲಿ ಓದಿದ ನೂರಾರು ಮಂದಿ ರಾಜಕೀಯ, ಕ್ರೀಡಾ, ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಗಳಾದ  ಆರ್.ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದರು. ಬಿ.ಎ.ಜೀವಿಜಯ ಅರಣ್ಯ ಸಚಿವರಾಗಿದ್ದರು. ಬಿ.ಪಿ. ಗೋವಿಂದ, ಎಸ್.ವಿ ಸುನೀಲ್‌ರಂತಹ ಹತ್ತಾರು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ ಕೀರ್ತಿ ಈ ಶಾಲೆಗೆ ಸಲ್ಲಬೇಕು. ಬಿ.ಎ.ಜೀವಿಜಯ ಶಾಸಕರಾಗಿದ್ದ ಸಂದರ್ಭ 2007 ರಲ್ಲಿ ಈ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಅಂದಾಜು ₹1.75 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಉದ್ದೇಶಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಬಿ.ಎ.ಜೀವಿಜಯರವರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಶಾಸಕರ ನಿಧಿಯಿಂದ ₹18 ಲಕ್ಷ, ಮಲೆನಾಡು ಅಭಿವೃದ್ದಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ₹15 ಲಕ್ಷ , ರಾಜ್ಯ ಸಭಾ ಸದಸ್ಯ ರೆಹಮಾನ್‌ ಖಾನ್‌ ಅವರು ಕ್ಷೇತ್ರಾಭಿವೃದ್ದಿ ನಿಧಿಯಿಂದ ₹ 4 ಲಕ್ಷ, ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ತಮ್ಮ ಅಭಿವೃದ್ದಿ ನಿಧಿಯಿಂದ ₹ 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ₹ 3 ಲಕ್ಷ ಒದಗಿಸಿದ್ದರು. ₹ ಒಂದು ಕೋಟಿಗೂ ಹೆಚ್ಚಿನ ಹಣ ಇನ್ನೂ ಭವನದ ಕಾಮಗಾರಿಗೆ ಅವಶ್ಯಕತೆಯಿದ್ದು, ಈ ಸಂದರ್ಭ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗೂ ಧಾನಿಗಳಿಂದ ಸಂಗ್ರಹಿಸುವ ಯೋಜನೆ ರೂಪಿಸಲಾಗಿತ್ತು.

ಭವನ ನಿರ್ಮಾಣಕ್ಕೆ ಸುಮಾರು 30 ಸೆಂಟ್ ಸ್ಥಳದಲ್ಲಿ 80 ಚದರ ವಿಸ್ತೀರ್ಣದ ಭೃಹತ್ ಭವನದಲ್ಲಿ 1500 ರಿಂದ 2000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಬಹು ಉದ್ದೇಶದ ಕಾಮಗಾರಿ ಪ್ರಾರಂಭಗೊಂಡಿತು. ಕಟ್ಟಡದ ನೆಲಮಾಳಿಗೆಯಲ್ಲಿ ಅಡುಗೆ ಮನೆ ಹಾಗೂ ಊಟದ ಸಭಾಂಗಣಕ್ಕೆ ವ್ಯವಸ್ಥೆ ಮಾಡಿ, ಮೊದಲ ಅಂತಸ್ಥಿಗೆ ಆರ್‌ಸಿಸಿ ಹಾಕುವ ಹಂತಕ್ಕೂ ತಲುಪಿತ್ತು. ಈ ಯೋಜನೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಮೀಪದ ಪ್ರಾಂಶುಪಾಲರ ಹಳೆಯ ವಸತಿ ಗೃಹವನ್ನು ತೆರವುಗೊಳಿಸಿ ಈ ಕಟ್ಟಡದ ನಿರ್ಮಾಣವನ್ನು ಕೈಗೊಂಡಿದ್ದರು.

ಯೋಜನೆಯು ಹೆಚ್ಚಿನ ಮುತುವರ್ಜಿಯಿಂದ ಪ್ರಾರಂಭವಾದರೂ ಆ ಸಮಯದಲ್ಲಿ ವಿಧಾನ ಸಭೆ ವಿಸರ್ಜನೆಯಾಗಿದ್ದು, ಅಂದಿನ ಶಾಸಕ ಬಿ.ಎ. ಜೀವಿಜಯರವರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿ, ಭವನ ನಿರ್ಮಾಣಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಯಿತು. ನಂತರ ಬಂದ ಯಾವುದೇ ಜನಪ್ರತಿನಿಧಿಗಳು ಈ ಭವನದ ನಿರ್ಮಾಣಕ್ಕೆ ಆಸಕ್ತಿ ತೋರದ ಕಾರಣ ಕಾಮಗಾರಿ ಅರ್ಧಕ್ಕೆ ನಿಲ್ಲಬೇಕಾಯಿತು.

ಈಗಾಗಲೇ ಶಾಸಕರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪ್ಪಚ್ಚು ರಂಜನ್‌ ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು. ಅದು ಸಾಧ್ಯವಾಗಲಿಲ್ಲ. ನಂತರ ಕಾಂಗ್ರೇಸ್‌ ಸರ್ಕಾರದ ಅವಧಿಯಲ್ಲಿ ಕಟ್ಟಡಕ್ಕೆ ದಿನೇಶ್ ಗುಂಡೂರಾವ್‌ ಆಹಾರ ಮತ್ತು ನಾಗರೀಕ ಖಾತೆ ಸಚಿವರಾಗಿದ್ದ ಸಂದರ್ಭ ಭೇಟಿ ನೀಡಿ ಎಲ್ಲ ದಾಖಲಾತಿಗಳನ್ನು ನೀಡುವಂತೆ ತಿಳಿಸಿದ್ದರೂ, ಪ್ರಯೋಜನವಾಗಲಿಲ್ಲ.

ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಕಟ್ಟಡದ ಸುತ್ತಲೂ ಕಾಡು ಬೆಳೆದಿದ್ದು, ದೂಮಪಾನಿಗಳಿಗೆ, ಮದ್ಯವ್ಯಸನಿಗಳಿಗೂ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಇದರೊಂದಿಗೆ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ. ಒಟ್ಟಿನಲ್ಲಿ ಸೋಮವಾರಪೇಟೆ ಸುತ್ತ ಮತ್ತಲಿನ ಜನತೆಗೆ ವರದಾನವಾಗಬೇಕಾಗಿದ್ದ ಶತಮಾನೋತ್ಸವ ಭವನ, ನಿರ್ಮಾಣ ಸಮಿತಿ ಮತ್ತು ಜನಪ್ರತಿನಿಧಿಗಳ ಬದ್ಧತೆಯ ಕೊರತೆಯಿಂದಾಗಿ ಮೂಲೆಗುಂಪಾಗಿದೆ.


ಡಿ.ಪಿ. ಲೋಕೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT