ಮಂಗಳವಾರ, ನವೆಂಬರ್ 12, 2019
25 °C

ಸಿದ್ದರಾಮಯ್ಯ ನಿಮಗೆ ಹೃದಯ ಇದೆಯಾ? ಅನರ್ಹ ಶಾಸಕ ಸುಧಾಕರ್ ವಾಗ್ದಾಳಿ

Published:
Updated:

ಚಿಕ್ಕಬಳ್ಳಾಪುರ: ‘ಪಕ್ಷಕ್ಕಾಗಿ, ನಮ್ಮನ್ನು ನಂಬಿರುವ ನಾಯಕರಿಗಾಗಿ ನಿಮ್ಮ ನಾಯಕತ್ವವನ್ನು ಆರು ವರ್ಷಗಳ ಕಾಲ ಹೆಗಲ ಮೇಲೆ ಇಟ್ಟುಕೊಂಡು ರಕ್ಷಣೆ ಮಾಡಿ, ನಿಮ್ಮ ವಿರುದ್ಧ ಯಾರೊಬ್ಬರೂ ಒಂದೇ ಒಂದು ಮಾತನಾಡದಂತೆ ಹೋರಾಟ ಮಾಡಿದ ನಮ್ಮನ್ನೇ ನೀವು ಅನರ್ಹಗೊಳಿಸಿದಿರಲ್ಲ, ನಿಮಗೆ ಹೃದಯ, ಮನಸು ಇದೆಯಾ?’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರೌರ್ಯ ಮತ್ತು ವಿಕೃತ ಮನಸ್ಸಿನಿಂದ ಇವತ್ತು ಕಾಂಗ್ರೆಸ್ ನಾಯಕರು ರಾಜಕೀಯ ದಿವಾಳಿತನವನ್ನು ರಾಜ್ಯದ ಜನರ ಮುಂದೆ ಪ್ರದರ್ಶನ ಮಾಡುತ್ತಿದ್ದಾರೆ. ಪಕ್ಷದ ನಾಯಕತ್ವ ವಹಿಸಿಕೊಂಡವರು, ತಂದೆಯ ಸ್ಥಾನದಲ್ಲಿದ್ದಾಗ ಎಲ್ಲರೂ ಸಮಾನರು ಎಂದು ನೀವು ನೋಡಿಕೊಳ್ಳಬೇಕಾಗಿತ್ತು. ನೀವು ಅದರಲ್ಲಿ ವಿಫಲರಾಗಿರುವುದಕ್ಕೆ ಇವತ್ತು ಸರ್ಕಾರ ಬಿದ್ದಿದೆ ಎಂದು ಅರ್ಥ ಮಾಡಿಕೊಳ್ಳಿ’ ಎಂದು ಹೇಳಿದರು.

‘ನೀವು ನಮ್ಮ ಮೇಲೆ ಸಾಧಿಸುವುದು, ಹಗೆತನ ಮಾಡುವುದಲ್ಲ. ನಿಮ್ಮ ಕೈಯಲ್ಲಿ ತಾಕತ್ತು ಇದ್ದರೆ ನಿಮ್ಮನ್ನು ಮುಗಿಸಿದವರ ಮೇಲೆ ಹಗೆತನ ಮಾಡಿ. ಒಂದು ಬಾರಿ ಶಾಸಕನಾಗಿ ಗೆಲ್ಲಬೇಕಾದರೆ ಒಂದು ಜನ್ಮ ಎತ್ತಿ ಬಂದಂತೆ. ಆದ್ದರಿಂದ ಶಾಸಕರನ್ನು ಅನರ್ಹಗೊಳಿಸಬೇಡಿ ಎಂದು ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿಕೊಂಡರೂ ಕೇಳದೆ ನಮ್ಮನ್ನು ಅನರ್ಹಗೊಳಿಸಿದಿರಿ. ನಿಜವಾದ ರಾಜಕಾರಣಿಗೆ ವಿಶಾಲ ಮನೋಭಾವ ಇರುತ್ತದೆ, ಇಂತಹ ಕೀಳು ಬುದ್ಧಿ ಇರುವುದಿಲ್ಲ’ ಎಂದು ತಿಳಿಸಿದರು.

‘ನಾವು ಇಂತಹ ತೀರ್ಮಾನ ತೆಗೆದುಕೊಳ್ಳುವುದರ ಹಿಂದೆ ಎಷ್ಟು ನೋವಿದೆ ಎಂದು ನೀವು ಅರ್ಥ ಮಾಡಿಕೊಳ್ಳಲಿಲ್ಲ. ನಮ್ಮ ನಾಯಕರ ಬಗ್ಗೆ ನನಗೆ ದೊಡ್ಡ ಗೌರವವಿತ್ತು. ಅವರಿಂದ ಇಂತಹ ತೀರ್ಮಾನ ನಿರೀಕ್ಷೆ ಮಾಡಿರಲಿಲ್ಲ. ಪಕ್ಷ ಉಳಿಸುವುದಕ್ಕಾಗಿ ನಾವು ಆತ್ಮಾಹುತಿ ಮಾಡಿಕೊಂಡೆವು. ಅದು ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಗೊತ್ತಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)