ಗುರುವಾರ , ನವೆಂಬರ್ 21, 2019
22 °C
ಅವೈಜ್ಞಾನಿಕವಾಗಿ ನಿರ್ಮಾಣ * ಮಲಪ್ರಭಾದಿಂದ ಕೊಣ್ಣೂರು ಸುತ್ತಲಿನ ಗ್ರಾಮಗಳು ಜಲಾವೃತ

ಬಾಗಲಕೋಟೆ: ಹೆದ್ದಾರಿ ಸೇತುವೆಯೇ ಸ್ಥಳೀಯರಿಗೆ ದುಃಸ್ವಪ್ನ!

Published:
Updated:
Prajavani

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳನ್ನು ಸಂಪರ್ಕಿಸಲು ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೃಹತ್ ಸೇತುವೆಯೇ ಈಗ ಸ್ಥಳೀಯರ ಪಾಲಿಗೆ ದುಃಸ್ವಪ್ನವಾಗಿದೆ.

ಬ್ರಿಟಿಷರ ಕಾಲದಲ್ಲಿ ಕಟ್ಟಲಾಗಿದ್ದ ಹಳೆಯ ಸೇತುವೆ ಪದೇ ಪದೇ ಮುಳುಗಡೆಯಾಗುತ್ತಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ವರ್ಷಗಳ ಹಿಂದೆ ನರಗುಂದ ತಾಲ್ಲೂಕಿನ ಕೊಣ್ಣೂರು– ಗೋವನಕೊಪ್ಪ ನಡುವೆ ₹30.98 ಕೋಟಿ ವೆಚ್ಚದಲ್ಲಿ 1.5 ಕಿ.ಮೀ ಹೊಸ ರಸ್ತೆ ನಿರ್ಮಾಣ ಮಾಡಿದೆ. ಅದರಲ್ಲಿ 100 ಮೀಟರ್‌ನಷ್ಟು ಉದ್ದದ ಸೇತುವೆ ಕೂಡ ಇದೆ.

ರಾಮದುರ್ಗ ಕಡೆಯಿಂದ ಹರಿದುಬರುವ ಪ್ರವಾಹದ ನೀರು ಸೇತುವೆ ಕೆಳಗೆ ಸರಾಗವಾಗಿ ಹರಿದುಹೋಗದೇ ಬಲಕ್ಕೆ ತಿರುವು ಪಡೆದು ಸೀದಾ ಕೊಣ್ಣೂರಿನತ್ತ ನುಗ್ಗಿ ಪಟ್ಟಣ ಜಲಾವೃತಗೊಳ್ಳುತ್ತಿದೆ. ಸುತ್ತಲಿನ ವಾಸನ, ಬೆಳ್ಳೇರಿ, ಲಖಮಾಪುರ, ಸಂಗಳ, ಬೂದಿಹಾಳ, ಗೋವನಕೊಪ್ಪ, ಬೀರನೂರು, ತಳಕವಾಡ ಗ್ರಾಮಗಳು ಜಲಾವೃತಗೊಂಡು, ಸಾವಿರಾರು
ಎಕರೆ ಹೊಲ–ಗದ್ದೆ, ತೋಟ ನೀರು ಪಾಲಾಗಿದೆ.

ಅವೈಜ್ಞಾನಿಕ ನಿರ್ಮಾಣ?: ‘ಇಲ್ಲಿ ನದಿಯ ಪಾತ್ರ ಅಗಲವಾಗಿದೆ. ಆದರೆ ಸೇತುವೆ ಕಿರಿದಾಗಿದೆ. ಹೀಗಾಗಿ ನೀರು ಸರಾಗವಾಗಿ ಮುಂದೆ ಹರಿಯಲು ಸಾಧ್ಯವಾಗದೇ ತಿರುವು ಪಡೆದು ಇಳಿಜಾರಿನಲ್ಲಿರುವ ನಮ್ಮೂರಿನತ್ತ ನುಗ್ಗುತ್ತಿದೆ. ಸೇತುವೆ ಸಂಪರ್ಕಿಸುವ ರಸ್ತೆಯೂ ಎತ್ತರವಾಗಿದ್ದು, ಅದು ಅಣೆಕಟ್ಟೆಯಂತಾಗಿ ನೀರು ಹಿಂದಕ್ಕೆ ಸರಿದು ಹಾನಿ ಮಾಡುತ್ತಿದೆ’ ಎಂದು ಕೊಣ್ಣೂರಿನ ವರ್ತಕ ವಿ.ಜಿ.ಚೌಡರಡ್ಡಿ ಹೇಳುತ್ತಾರೆ.

‘ಹಳೆಯ ಸೇತುವೆ ಇದ್ದಾಗಲೇ ಅರಾಮ ಇತ್ತು. ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆಯೇ ಖುಲ್ಲಾ ಆಗುತ್ತಿತ್ತು. ನನಗೀಗ 54 ವರ್ಷ. ಇಷ್ಟೊಂದು ಭಯಾನಕವಾಗಿ ಲುಕ್ಸಾನ ಎಂದೂ ಆಗಿರಲಿಲ್ಲ. ಈ ಸೇತುವೆ ಕಟ್ಟಿಯೂ ಉಪಯೋಗವಿಲ್ಲದಂತಾಗಿದೆ’ ಎಂದು ಸಮೀಪದ ಕುಳಗೇರಿಯ ವಿಠ್ಠಲ ದ್ಯಾವನಗೌಡ್ರ ಅವರು ಹೇಳಿದರು.

ಹೆದ್ದಾರಿ ಕಿತ್ತರು: ಪ್ರವಾಹದ ನೀರು ಊರಿನೊಳಗೆ ರಭಸವಾಗಿ ನುಗ್ಗಿ ಹಾನಿ ಉಂಟು ಮಾಡುವುದನ್ನು ತಪ್ಪಿಸಲು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯನ್ನೇ ಜೆಸಿಬಿಯಿಂದ ಕಿತ್ತು ತಗ್ಗು ಮಾಡಿ ನೀರು ಎಡಕ್ಕೆ ತಿರುವು ಪಡೆಯುವಂತೆ ಮಾಡಿದರು. ಇದರಿಂದ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.

2 ತಿಂಗಳಲ್ಲಿ 3 ಬಾರಿ ಬಂದ್

ನೀರು ಹೆದ್ದಾರಿ ಮೇಲೂ ಹರಿಯುತ್ತಿರುವುದರಿಂದ ಮಹಾರಾಷ್ಟ್ರ– ಕರ್ನಾಟಕ ನಡುವಿನ
ಸಂಪರ್ಕಕೊಂಡಿ ಎನಿಸಿದ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಪದೇ ಪದೇ ಸಂಚಾರ ಬಂದ್ ಆಗುತ್ತಿದೆ.

ಆಗಸ್ಟ್ 6ರಿಂದ 14ರವರೆಗೆ ಒಂದು ವಾರ ಕಾಲ, ಸೆಪ್ಟೆಂಬರ್‌ನಲ್ಲಿ ಮೂರು ದಿನ ಬಂದ್ ಆಗಿತ್ತು. ಕಳೆದ ಎರಡು ದಿನಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ದೆಹಲಿ, ಲೂಧಿಯಾನ, ಇಂದೋರ್ ಸೇರಿದಂತೆ ಉತ್ತರ ಭಾರತದ ವಿವಿಧ ನಗರಗಳಿಂದ ಹುಬ್ಬಳ್ಳಿ, ಮಂಗಳೂರಿನತ್ತ ಸರಕು ಸಾಗಣೆ ಮಾಡುವ ಸಾವಿರಾರು ಟ್ರಕ್‌ಗಳು ಪ್ರವಾಹ ಇಳಿಯುವ ನಿರೀಕ್ಷೆಯಲ್ಲಿ ಹೆದ್ದಾರಿಯಲ್ಲಿಯೇ ಕಾದುನಿಂತಿವೆ.

***

ನೀರು ಕೊಣ್ಣೂರಿನತ್ತ ನುಗ್ಗುವುದನ್ನು ತಡೆಯಲು ₹2.3 ಕೋಟಿ ವೆಚ್ಚದಲ್ಲಿ ಇನ್ನೊಂದು ಕಮಾನು ನಿರ್ಮಿಸುತ್ತೇವೆ

ಪಿ.ರಾಜೇಂದ್ರ,ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನರಗುಂದ ವಿಭಾಗ

ಪ್ರತಿಕ್ರಿಯಿಸಿ (+)