ಭಾನುವಾರ, ಅಕ್ಟೋಬರ್ 20, 2019
27 °C
ಈರುಳ್ಳಿ ರಫ್ತಿನ ಮೇಲೆ ಕೇಂದ್ರದ ನಿರ್ಬಂಧ l ವಿನಾಯಿತಿಗೆ ರೈತರ ಆಗ್ರಹ

‘ಕೆಂಪು ಗುಲಾಬಿ’ ಬೆಳೆಗಾರರು ಕಂಗಾಲು

Published:
Updated:

ಚಿಕ್ಕಬಳ್ಳಾಪುರ: ಪ್ರಕೃತಿ ವಿಕೋಪದಿಂದ ಗಗನಮುಖಿಯಾದ ಈರುಳ್ಳಿ ಬೆಲೆ ಒಂದೆಡೆ ವರ್ತಕರು ಮತ್ತು ಬೆಳೆಗಾರರಲ್ಲಿ ಸಂತಸ ಮೂಡಿಸಿದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿರುವುದು ರಾಜ್ಯದ 'ಬೆಂಗಳೂರು ಕೆಂಪು ಗುಲಾಬಿ ಈರುಳ್ಳಿ' ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರಫ್ತು ಆಧಾರಿತ ಬೆಳೆಯಾಗಿರುವ ಗುಲಾಬಿ ಈರುಳ್ಳಿಯನ್ನು ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲದೇ, ನೆರೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿ ಬೆಳೆಯಲಾಗುತ್ತದೆ.

ಗುಲಾಬಿ ಈರುಳ್ಳಿಯನ್ನು ಸ್ಥಳೀಯ ಕೆಲ ವ್ಯಾಪಾರಿಗಳು ಖರೀದಿಸಿ ಚೆನ್ನೈನ ಸಗಟು ವರ್ತಕರಿಗೆ ಮಾರುತ್ತಾರೆ. ಚೆನ್ನೈನಿಂದ ವಿದೇಶಗಳಿಗೆ ಈರುಳ್ಳಿ ರಫ್ತಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಗುಲಾಬಿ ಈರುಳ್ಳಿ ಬೆಳೆ ಕೊಯ್ಲು ಆರಂಭವಾಗಿದೆ.

ವಾರದ ಹಿಂದೆ 50 ಕೆ.ಜಿ ಈರುಳ್ಳಿ ಬ್ಯಾಗ್‌ವೊಂದಕ್ಕೆ ಸುಮಾರು ₹2,000 ವರೆಗೆ ಬೆಲೆ ಸಿಕ್ಕು ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಸೆ.29 ರಂದು ಈರುಳ್ಳಿ ರಫ್ತು ನಿರ್ಬಂಧಿಸಿದ ಬೆನ್ನಲ್ಲೇ ಗುಲಾಬಿ ಈರುಳ್ಳಿ ಕೇಳುವವರಿಲ್ಲದಂತಾಗಿದೆ.

‘ಆಗಸ್ಟ್ ಮೊದಲ ವಾರದಿಂದ ಸೆಪ್ಟೆಂಬರ್ ಕೊನೆಯ ವಾರದ ವರೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು ನಾಲ್ಕು ಸಾವಿರ ಮೆಟ್ರಿಕ್ ಟನ್ ಈರುಳ್ಳಿ ರಫ್ತಾಗಿದೆ. ಇನ್ನೂ ಏಳು ಸಾವಿರ ಟನ್‌ಗಿಂತ ಹೆಚ್ಚು ಈರುಳ್ಳಿ ರಫ್ತಾಗಬೇಕಿದೆ’ ಎನ್ನುತ್ತಾರೆ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ.

‘ಸತತ ಬರಗಾಲ, ಅಂತರ್ಜಲ ಕುಸಿತ, ನೀರಿನ ಕೊರತೆ ನಡುವೆಯೂ ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿ ಕೊಯ್ಲು ಮುಗಿದು ಒಂದು ತಿಂಗಳಲ್ಲಿ ರಫ್ತಾಗದಿದ್ದರೆ ಕೊಳೆತು ಹೋಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ಗುಲಾಬಿ ಈರುಳ್ಳಿ ರಫ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

* ರಾಜ್ಯ ಸರ್ಕಾರ ತುರ್ತಾಗಿ ಬೆಳೆಗಾರರ ನಿಯೋಗದೊಂದಿಗೆ ಹೋಗಿ ಗುಲಾಬಿ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು

-ಕಾಪ್ಪಲ್ಲಿ ಶ್ರೀನಿವಾಸ್, ಗುಲಾಬಿ ಈರುಳ್ಳಿ ಬೆಳೆಗಾರ

Post Comments (+)