ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾವೇರಿ | ಬಿರುಕು; ಬ್ರಹ್ಮಗಿರಿ ಕುಸಿಯುವ ಆತಂಕ

ನದಿಗಳಲ್ಲಿ ತಗ್ಗಿದ ಪ್ರವಾಹ, ವಾಹನ ಸಂಚಾರ ಆರಂಭ
Last Updated 8 ಸೆಪ್ಟೆಂಬರ್ 2019, 1:36 IST
ಅಕ್ಷರ ಗಾತ್ರ

ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಳವಾದ ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ದೊಡ್ಡ ಪ್ರಮಾಣದ ಬಿರುಕಿನಿಂದ ಒಂದು ಭಾಗದ ಬೆಟ್ಟವೇ ಕುಸಿಯುವ ಆತಂಕ ಎದುರಾಗಿದೆ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಾಲ್ಕು ದಿನ ಗಾಳಿ ಸಹಿತ ಭಾರೀ ಮಳೆ ಸುರಿದಿತ್ತು. ಇದರಿಂದಾಗಿಯೇ ಬಿರುಕು ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಮಾರು 20 ಅಡಿ ಆಳಕ್ಕೆ ಕಂದಕ ಸೃಷ್ಟಿಯಾಗಿದೆ. ಅಲ್ಲಲ್ಲಿ ಕಲ್ಲುಗಳು ಉರುಳಿವೆ. ಭೂಕುಸಿತವಾದರೆ ಆಪತ್ತು ಎದುರಾಗುವ ಸಾಧ್ಯತೆಯಿದೆ.

ನಾಲ್ಕು ದಿನ ಸುರಿದ ಧಾರಾಕಾರ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿತ್ತು. ಮಳೆಯ ಅಬ್ಬರ ತಗ್ಗಿದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಇಳಿದಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನಮಟ್ಟ ಇಳಿದಿದ್ದು, ಮೂರ್ನಾಡು – ನಾಪೋಕ್ಲು, ಭಾಗಮಂಡಲ – ನಾಪೋಕ್ಲು, ಮಡಿಕೇರಿ– ಭಾಗಮಂಡಲ– ತಲಕಾವೇರಿ ನಡುವೆ ವಾಹನ ಸಂಚಾರ ಆರಂಭವಾಗಿದೆ. ಕೊಡಗು ಸಹಜ ಸ್ಥಿತಿಯತ್ತ ಮರಳುತ್ತಿದೆ.

ಮಡಿಕೇರಿ, ಸೋಮವಾರಪೇಟೆ, ಶಾಂತಳ್ಳಿ ಸುತ್ತಮುತ್ತ ಮಾತ್ರ ಜೋರು ಶನಿವಾರ ಬಿರುಸಿನ ಮಳೆಯಾಗಿದೆ. ನಾಪೋಕ್ಲು, ತಲಕಾವೇರಿ, ಬೇತ್ರಿ, ಚೇರಂಬಾಣೆ, ಬಕ್ಕ, ಪಾಲೂರು, ಕೋರಂಗಾಲ, ಹೊದ್ದೂರು, ಕಕ್ಕಬ್ಬೆ, ನೆಲಜಿ, ಕೊಟ್ಟಂಮುಡಿ, ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಸಿದ್ದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಮಾದಾ‍ಪುರ, ಸುಂಟಿಕೊಪ್ಪ ಹಾಗೂ ಕುಶಾಲನಗರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಮೈಸೂರಿನಲ್ಲಿ ಶನಿವಾರ ಮಧ್ಯಾಹ್ನ ಅರ್ಧತಾಸು ಬಿರುಸಿನ ಮಳೆಯಾಗಿದೆ. ಮಂಡ್ಯ ಸೇರಿದಂತೆ ಜಿಲ್ಲೆಯ ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ಸಂಜೆ ಧಾರಾಕಾರ ಮಳೆಯಾಗಿದೆ. ಹಾಸನ ಸೇರಿದಂತೆ ಜಿಲ್ಲೆಯ ಸಕಲೇಶಪುರ, ಅರಕಲಗೂಡು ಸುತ್ತಮುತ್ತ ಬಿಡುವು ನೀಡಿ ಆಗಾಗ್ಗೆ ಮಳೆಯಾಗಿದೆ.

24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸುರಿದ ಮಳೆ ವಿವರ (ಸೆಂ.ಮೀಗಳಲ್ಲಿ)

ಶಾಂತಳ್ಳಿ 14
ಸೋಮವಾರಪೇಟೆ 6
ಭಾಗಮಂಡಲ 3.46
ಸಂಪಾಜೆ 3.72
ನಾಪೋಕ್ಲು 4.2
ಶ್ರೀಮಂಗಲ 6.5
ಹುದಿಕೇರಿ 4.8

ನದಿಯಲ್ಲಿ ಕೊಚ್ಚಿ ಹೋದ ಮಹಿಳೆ

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ, ತೀರದಲ್ಲಿದ್ದ ಮಹದೇವಮ್ಮ (55) ಎಂಬುವವರು ಶುಕ್ರವಾರ ಸಂಜೆ ಕೊಚ್ಚಿ ಹೋಗಿದ್ದಾರೆ.

ಈ ಮಹಿಳೆಯು, ಪಾತ್ರೆ ತೊಳೆಯಲು ನದಿ ತೀರದ ಸೋಪಾನಕಟ್ಟೆಗೆ ತೆರಳಿದ್ದರು. ಆಗ, ಒಮ್ಮೆಲೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ವೇಗವಾಗಿ ನೀರು ಹರಿಯುತ್ತಿರುವ ಕಾರಣ ಮೃತದೇಹ ಹುಡುಕುವ ಪ್ರಯತ್ನ ನಡೆದಿಲ್ಲ. ಈ ಕುರಿತು ಮಹದೇವಮ್ಮ ಅವರ ಪುತ್ರ ಸತೀಶ್‌, ಅರಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡುತ್ತಿರುವ ಕುರಿತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನದಿ ತೀರದ ಗ್ರಾಮಗಳ ಜನರಿಗೆ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಜನರ ಪ್ರಾಣಕ್ಕೆ ಅಪಾಯ ಎದುರಾಗಿದೆ’ ಎಂದು ಮಹದೇವಪುರ ಗ್ರಾಮಸ್ಥರು ದೂರಿದ್ದಾರೆ.

ಶುಕ್ರವಾರ 52,807 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿತ್ತು.

ಇಳಿದ ನೀರಿನ ಹರಿವು: ಶನಿವಾರ ಕೆಆರ್‌ಎಸ್‌ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಹೊರಹರಿವನ್ನೂ ಕಡಿತಗೊಳಿಸಲಾಗಿದೆ. ಶನಿವಾರ ಸಂಜೆಯ ವೇಳೆಗೆ 41,980 ಕ್ಯುಸೆಕ್‌ ಒಳಹರಿವು, 41,755 ಹೊರಹರಿವು ದಾಖಲಾಗಿತ್ತು. ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT