ಗುರುವಾರ , ನವೆಂಬರ್ 14, 2019
19 °C

ಬಿಜೆಪಿ ಗೆಲ್ಲಿಸಿದರೆ ಮಹಾರಾಷ್ಟ್ರಕ್ಕೆ ನೀರು: ಹೇಳಿಕೆಗೆ ಅಪಾರ್ಥ ಬೇಡವೆಂದ ಸಿಎಂ

Published:
Updated:

ಕಲಬುರ್ಗಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದರೆ ರಾಜ್ಯದ ತುಬಚಿ, ಬಬಲೇಶ್ವರ ಏತನೀರಾವರಿ ಯೋಜನೆಯಿಂದ ನೀರು ಹರಿಸಲಾಗುವುದು ಎಂಬ ತಮ್ಮ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಬೇಕಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಗುರುವಾರ ಕರ್ನಾಟಕಕ್ಕೆ ಹಿಂದಿರುಗಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇಸಿಗೆ ದಿನಗಳಲ್ಲಿ ಕೃಷ್ಣಾ ಮತ್ತು ಭೀಮಾ ನದಿಗೆ ಮಹಾರಾಷ್ಟ್ರದಿಂದ ನಾಲ್ಕು ಟಿಎಂಸಿ ನೀರನ್ನು ಬಿಡುವಂತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದರ ಬದಲಾಗಿ ನಮ್ಮಲ್ಲಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದೇನೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು,’ ಎಂದರು. 

‘ನಾನು ನನ್ನ ಜೀವನದಲ್ಲಿ ಚುನಾವಣೆ ಗಿಮಿಕ್ ಮಾಡಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕ ದಾಯಾದಿಗಳಲ್ಲ. ಒಟ್ಟಾಗಿ ಕುಳಿತು ಚರ್ಚೆ ಮಾಡುವುದಾಗಿ ಹೇಳಿದ್ದೇನೆ,’ ಎಂದು ಸ್ಪಷ್ಟಪಡಿಸಿದರು. 

ಏನು ಹೇಳಿದ್ದರು ಯಡಿಯೂರಪ್ಪ? 

ಮಹಾರಾಷ್ಟ್ರದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ, ಅಲ್ಲಿನ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ‘ ತುಬಚಿ, ಬಬಲೇಶ್ವರ ಏತ ನೀರಾವರಿ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ವರೆಗೆ ತಲುಪಿದೆ. ಅಲ್ಲಿಂದ 8–10 ಕಿ.ಮೀ ದೂರದಲ್ಲಿ ಹರಿಯುವ ಬೋರಾ ನದಿಗೆ ತುಬಚಿ, ಬಬಲೇಶ್ವರ ಏತನೀರಾವರಿ ಮೂಲಕ ನೀರು ಹರಿಸಿದರೆ ಮಹಾರಾಷ್ಟ್ರದ 30–40 ಗ್ರಾಮಗಳ ಒಂದು ಲಕ್ಷ ಮಂದಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆಯಲ್ಲ. ಆದರೆ, ನಾನು ಇಲ್ಲಿ ಬಂದಿದ್ದಕ್ಕೆ, ಈ ಸಭೆಯನ್ನು ಉದ್ದೇಶಿ ಮಾತನಾಡಿದಕ್ಕೆ ನಮ್ಮ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕು,’ ಎಂದು ಅವರು ಹೇಳಿದ್ದರು. 

ಪ್ರತಿಕ್ರಿಯಿಸಿ (+)