ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಇಂದಿನಿಂದ: ಮೌಲ್ಯಮಾಪಕರ ಕೊರತೆ ಸಾಧ್ಯತೆ

Last Updated 9 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬುಧವಾರದಿಂದ ಆರಂಭಗೊಳ್ಳಲಿದೆ. ಆದರೆ, ಎಷ್ಟು ಮಂದಿ ಮೌಲ್ಯಮಾಪಕರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಖಾತರಿ ಇಲ್ಲ.

ಲೋಕಸಭಾ ಚುನಾವಣೆ ಕಾರಣ ರಾಜ್ಯದ ಎಲ್ಲೆಡೆ ಸಾಕಷ್ಟು ಸಂಖ್ಯೆಯ ಶಿಕ್ಷಕರು ಚುನಾವಣೆ ತರಬೇತಿಗೆ ಹೋಗಿದ್ದಾರೆ. ಹೀಗಾಗಿ ನಾಳೆಯಿಂದ ಎಷ್ಟು ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾಗುತ್ತಾರೆ ಎಂಬ ನಿಖರ ಮಾಹಿತಿ ಇಲ್ಲ ಎಂದು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ 228 ಮೌಲ್ಯಮಾಪನ ಕೇಂದ್ರಗಳಿವೆ. ಮೌಲ್ಯಮಾಪನಕ್ಕೆ 70 ಸಾವಿರ ಶಿಕ್ಷಕರಿಂದ ಅರ್ಜಿ ಸ್ವೀಕರಿಸಲಾಗಿತ್ತು. ಎಷ್ಟು ಮಂದಿ ಭಾಗವಹಿಸುತ್ತಾರೆ ಎಂಬುದು ನಾಳೆಯಿಂದಲೇ ಗೊತ್ತಾಗುತ್ತದೆ. ಮೌಲ್ಯಮಾಪಕರ ಸಂಖ್ಯೆ ಕಡಿಮೆ ಇದ್ದರೂ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆ ಅಂಕಗಳನ್ನು ಆನ್‌ಲೈನ್‌ ಮೂಲಕ ದಾಖಲಿಸಲು ಶಿಕ್ಷಕರಿಗೆ ಮೌಲ್ಯ ಮಾಪನದ ಆರಂಭಕ್ಕೆ ಮೊದಲೇ ಅರ್ಧ ಗಂಟೆಗಳ ಅವಧಿಯ ತರಬೇತಿ ನೀಡಲಾಗುವುದು. ಇದರಿಂದ ಮಂಡಳಿ ನೀಡಿರುವ ತಂತ್ರಾಂಶವನ್ನು ಬಳಸಿ ಆಯಾ ಮೌಲ್ಯಮಾಪನ ಕೇಂದ್ರದಿಂದ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದು ಮಾಡಬಹುದಾಗಿದೆ ಎಂದರು.

ಈಗಾಗಲೇ ಬಾಹ್ಯ ಪರೀಕ್ಷೆಯ ಅಂಕಗಳನ್ನು ಪ್ರಥಮ ಬಾರಿಗೆ ಆನ್‌ಲೈನ್‌ನಲ್ಲಿ ನಮೂದು ಮಾಡಲಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದರೆ, ಪರಿಹಾರ ಒದಗಿಸಲು ಮಂಡಳಿಯಲ್ಲಿ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮಂಡಳಿಯ ಜಾಲತಾಣದಲ್ಲಿ ಚಿತ್ರಸಹಿತ ಮಾರ್ಗದರ್ಶಿ ಕೈಪಿಡಿಯನ್ನೂ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT