ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತರು ದೂರ: ರಮೇಶ ಯತ್ನಕ್ಕೆ ಹಿನ್ನಡೆ?

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಪರಮೇಶ್ವರ, ಡಿ.ಕೆ. ಶಿವಕುಮಾರ್‌ ಸಮಾಲೋಚನೆ
Last Updated 25 ಏಪ್ರಿಲ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಪಕ್ಷದ ಅತೃಪ್ತರನ್ನು ಸೆಳೆದು ಬಣ ಬಲ‍ಪಡಿಸಿಕೊಳ್ಳಲು ಮುಂದಾಗಿದ್ದ ಗೋಕಾಕ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ‘ಆಪ್ತ’ರು ಕೈಕೊಟ್ಟಿದ್ದು, ಅವರ ಯತ್ನಕ್ಕೆ ಹಿನ್ನಡೆಯಾಗಿದೆ.

ತಮ್ಮ ಸರ್ಕಾರಿ ನಿವಾಸದಲ್ಲಿ ಕೆಲವು ಆಪ್ತರ ಜೊತೆ ಗುರುವಾರ ಕೂಡಾ ಮಾತುಕತೆ ನಡೆಸಿದ ರಮೇಶ ಅವರು, ಹಿಂದೆ ತಮ್ಮ ಜತೆಗೆ ಗುರುತಿಸಿ
ಕೊಂಡಿದ್ದ ಶಾಸಕರನ್ನು ಸಂಪರ್ಕಿಸುವ ಯತ್ನ ನಡೆಸಿದರು.

ಆದರೆ, ಅವರ ಜೊತೆ ‘ಕೈ’ ಜೋಡಿಸಲು ಸಿದ್ಧರಾಗಿದ್ದ ಕೆಲವು ಶಾಸಕರು ಕಾಂಗ್ರೆಸ್‌ ತ್ಯಜಿಸಲು ಹಿಂದೇಟು ಹಾಕಿದ್ದಾರೆ.

ಈ ಪಟ್ಟಿಯಲ್ಲಿದ್ದ ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ, ‘ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ರಾಜೀನಾಮೆ ಕೊಡುವ ಯೋಚನೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಮಹೇಶ ಕುಮಠಳ್ಳಿ, ಭೀಮಾನಾಯ್ಕ ಕೂಡ ಅದೇ ಧಾಟಿಯಲ್ಲಿ ಮಾತನಾಡಿದ್ದಾರೆ.

ಈ ನಡುವೆ, ರಮೇಶ್‌ ಅವರನ್ನು ಮನವೊಲಿಸಲು ಉಭಯ ಪಕ್ಷಗಳ ನಾಯಕರು ಪ್ರತಿ ಸೂತ್ರ ಸಿದ್ಧಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಗುರುವಾರ ಭೇಟಿ ಮಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಚಿವ ಡಿ.ಕೆ. ಶಿವಕುಮಾರ್, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು.

ಜಿ. ಪರಮೇಶ್ವರ ಮತ್ತು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಶ್ರೀಮಂತ ಪಾಟೀಲ, ‘ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಈ ಬಗ್ಗೆ ಸಚಿವರ ಜೊತೆ ಚರ್ಚಿಸಲು ಬಂದಿದ್ದೆ. ಅದು ಬಿಟ್ಟು ಬೇರೆ ಯಾವುದೇ ವಿಚಾರ ಚರ್ಚಿಸಿಲ್ಲ’ ಎಂದು ತಿಳಿಸಿದರು.

ಡಿಎನ್ಎ ಕಾಂಗ್ರೆಸ್ಸಿನದ್ದು: ‘ರಮೇಶ ಅವರ ಶರೀರದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಅವರ ಡಿಎನ್ಎ ಕೂಡಾ ಕಾಂಗ್ರೆಸ್. ವೈಯಕ್ತಿಕವಾಗಿ ನೋವಾಗಿದೆ ಎಂದು ಬಿಜೆಪಿಯವರ ಮಾತು ಕೇಳಿ ತಪ್ಪು ನಿರ್ಧಾರ ತೆಗೆದುಕೊಂಡರೆ ಮುಂದೆ ಅವರಿಗೆ ತೊಂದರೆಯಾಗಲಿದೆ’ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದರು.

’ಸರ್ಕಾರ ಬೀಳಿಸುವಷ್ಟು ಸಂಖ್ಯಾ ಬಲ ರಮೇಶ ಬಳಿ ಇಲ್ಲ‘
ಬೆಳಗಾವಿ: ‘ಸಮ್ಮಿಶ್ರ ಸರ್ಕಾರ ಬೀಳಿಸುವಷ್ಟು ಸಂಖ್ಯಾ ಬಲ ಶಾಸಕ ರಮೇಶ ಜಾರಕಿಹೊಳಿ ಬಳಿ ಇಲ್ಲ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

‘ಸರ್ಕಾರ ಕೆಡವಲು ಈಗಾಗಲೇ 3-4 ಬಾರಿ ಈ ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಸರ್ಕಾರ ಉಳಿಸಿಕೊಳ್ಳಲು ಎರಡೂ ಪಕ್ಷದವರು ಸಮರ್ಥರಿದ್ದೇವೆ' ಎಂದು ಹೇಳಿದರು.

‘ಅವನಿಗೆ ಯಾವುದೇ ಬದ್ಧತೆ ಇಲ್ಲ. ಬೆಳಿಗ್ಗೆ ಒಂದು, ಸಂಜೆ ಇನ್ನೊಂದು ಹೇಳುತ್ತಾನೆ. ರಾಜೀನಾಮೆ ಕೊಡುತ್ತೇನೆ ಎಂದು ಬೆಳಗಾವಿಯಲ್ಲಿ ಹೇಳಿದ್ದ. ಆದರೆ, ಬೆಂಗಳೂರಿಗೆ ಹೋಗಿ ಯೂಟರ್ನ್‌ ತೆಗೆದುಕೊಂಡಿದ್ದಾನೆ. ರಮೇಶ ಖಾಲಿ ಇದ್ದಾನೆ. ಅವನಿಗೆ ಕೆಲಸವಿಲ್ಲ. ಹೀಗಾಗಿ ಏನೇನೋ ಮಾತಾಡ್ತಾನೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ’ ಎಂದರು.

‘ಅವನಿಗಷ್ಟೇ ತೊಂದರೆ ಆಗಿರಬಹುದು. ಉಳಿದ ಶಾಸಕರಿಗೆ ಯಾವುದೇ ತೊಂದರೆ ಆಗಿಲ್ಲ. ಸಮಸ್ಯೆ ಏನಾಗಿದೆ ಎನ್ನುವುದನ್ನು ಅವನನ್ನೇ ಕೇಳಬೇಕು. ಜನರಿಗೂ ಆ ಬಗ್ಗೆ ಕುತೂಹಲ ಇದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ರಮೇಶ ಬಿಜೆಪಿ ಸೇರಲು 10 ಕಾರಣಗಳಿವೆ. ಅಳಿಯ ಅಂಬಿರಾವ್ ಪಾಟೀಲಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸಬೇಕು ಎನ್ನುವುದು ಕಾರಣಗಳಲ್ಲಿ ಒಂದು. ಉಳಿದ 9 ಕಾರಣಗಳನ್ನು ಅವನನ್ನೇ ಕೇಳಿ’ ಎಂದರು.

'ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪಕ್ಷದ ವೀಕ್ಷಕರು ರಮೇಶ ವಿರುದ್ಧ ವರದಿ‌ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಉದಾಹರಣೆ ಇವೆ. ಸದ್ಯದಲ್ಲೇ ಪಕ್ಷ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಅಥಣಿ ಶಾಸಕ ಮಹೇಶ ಕುಮಠಳ್ಳಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಕೆಲಸ ಮಾಡಿದ್ದಾರೆ. ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಮುಂದಿನ ಬೆಳವಣಿಗೆಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಗೆ ವಿಶ್ವಾಸವಿಲ್ಲ
ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬೇಕಾದ ಸಂಖ್ಯಾಬಲ ರಮೇಶ ಜಾರಕಿಹೊಳಿ ಬಳಿ ಸದ್ಯ ಇಲ್ಲ. ಹೀಗಾಗಿ, ರಮೇಶ್‌ ಅವರನ್ನು ನಂಬಿಕೊಂಡು ಈಗ ಅಖಾಡಕ್ಕೆ ಇಳಿಯುವುದು ಬೇಡ ಎಂಬ ತೀರ್ಮಾನಕ್ಕೆ ಬಿಜೆಪಿ ರಾಜ್ಯ ಘಟಕ ಬಂದಿದೆ. ಕಾದು ನೋಡುವ ತಂತ್ರಕ್ಕೆ ಪಕ್ಷ ಶರಣಾಗಿದೆ.

ಪಕ್ಷದ ಮೊದಲ ಗುರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು. ಅಲ್ಲಿಯವರೆಗೆ ಯಾವುದೇ ಗಡಿಬಿಡಿಯ ತೀರ್ಮಾನ ಕೈಗೊಳ್ಳುವುದು ಬೇಡ ಎಂಬ ನಿರ್ದೇಶನವನ್ನು ಕೇಂದ್ರ ನಾಯಕರು ನೀಡಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.

‘ರಮೇಶ ಬಣದಲ್ಲಿ ಈ ಹಿಂದೆ ಐದಾರು ಮಂದಿ ಇದ್ದರು. ಈ ಹಿಂದೆ ಜತೆಗಿದ್ದವರು ಈಗ ಅತೃಪ್ತರ ಬಣವನ್ನು ಸೇರಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಫಲಿತಾಂಶ ಬರುವವರೆಗೆ ಕಾದು ನೋಡುವುದು ಉತ್ತಮ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿದೆ’ ಎಂದು ಅವರು ಮಾಹಿತಿ ನೀಡಿದರು.

ಸಿ.ಎಂ ಜತೆ ಸಂಪರ್ಕ?
ಕಾಂಗ್ರೆಸ್ ನಾಯಕರ ಬಗ್ಗೆ ಕಿಡಿಕಾರುತ್ತಿರುವ ರಮೇಶ ಜಾರಕಿಹೊಳಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಜತೆ ಗುರುವಾರ ಬೆಳಿಗ್ಗೆ ದೂರವಾಣಿಯಲ್ಲಿ ಮಾತನಾಡಿದ ರಮೇಶ, ‘ಕೆಲವು ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಹಾಗೂ ಬೆಳಗಾವಿಯಲ್ಲಿ ಪ್ರಭಾವಿಯಾಗಿರುವವರ ಬಗ್ಗೆ ತಮಗೆ ಆಕ್ರೋಶವಿದೆ. ಹಾಗಂತ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮೈತ್ರಿ ಸರ್ಕಾರಕ್ಕೆ ತಮ್ಮಿಂದ ತೊಂದರೆಯಾಗುವುದಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಗಮನಕ್ಕೆ ತಂದು, ನಿಮ್ಮ ಸಲಹೆ ಮೇರೆಗೆ ಹೆಜ್ಜೆ ಇಡುತ್ತೇನೆ’ ಎಂದು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.

*
ರಮೇಶ ಅವರ ನೋವಿಗೆ ಪಕ್ಷ ಕಾರಣವಲ್ಲ.‌ ಹೀಗಾಗಿ, ಸಂಧಾನ ಮಾತುಕತೆ ಅಗತ್ಯ ಇಲ್ಲ. ಆದರೆ, ಅವರು ಎಚ್ಚರಿಕೆಯಿಂದ ಇರಬೇಕು. ಮುಂದೆಯೂ ಅವರನ್ನು ಗೌರವದಿಂದ ನೋಡಿಕೊಳ್ಳುತ್ತೇವೆ
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

*
ರಮೇಶ ನಮ್ಮ ಗೆಳೆಯ. ನಾವು ಸ್ವಂತ ಮನೆ ಮಕ್ಕಳು. ಒಂದೊಂದು ಸಾರಿ ಜಗಳವಾಗುತ್ತೆ. ಏನ್ ಮಾಡೋಕೆ ಆಗುತ್ತೆ. ಅಣ್ಣ-ತಮ್ಮಂದಿರು ಜಗಳ ಆಡಿದ್ವಿ ಅಂತ ಅವ್ರನ್ನ ಬಿಡೋಕೆ ಆಗುತ್ತಾ?
–ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT