ಸೋಮವಾರ, ಡಿಸೆಂಬರ್ 9, 2019
20 °C

ಅನರ್ಹರ ಹಣೆಬರಹ ಸುಪ್ರೀಂ ಕೋರ್ಟ್‌ ತೀರ್ಪು ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ 17 ಜನರ ಭವಿಷ್ಯ ನಿರ್ಧರಿಸಲಿರುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್‌ ಬುಧವಾರ ಪ್ರಕಟಿಸಲಿದೆ. ರಾಜ್ಯ ರಾಜಕೀಯದ ಮೇಲೆ ನಾನಾ ರೀತಿಯ ಪರಿಣಾಮ ಬೀರಲಿರುವ ಈ ತೀರ್ಪು ಎಲ್ಲರ ಕುತೂಹಲದ ಕೇಂದ್ರವೂ ಆಗಿದೆ.

ರಾಜೀನಾಮೆಯಿಂದ ತೆರವಾಗಿರುವ 17 ಕ್ಷೇತ್ರಗಳ ಪೈಕಿ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಿಗೆ ಡಿ.5ರಂದು ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಕೆಗೆ ಇದೇ 18 ಕೊನೆ ದಿನ.

ಬಿಜೆಪಿಯ ‘ಆಪರೇಷನ್ ಕಮಲ’ದ ಸುಳಿಗೆ ಸಿಲುಕಿದ್ದ ಕಾಂಗ್ರೆಸ್‌ 13, ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡಿದ್ದರಿಂದ ಹಾಗೂ ಒಬ್ಬ ಪಕ್ಷೇತರ ಬೆಂಬಲ ವಾಪಸ್ ಪಡೆದಿದ್ದರಿಂದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ರಾಗಿದ್ದಾರೆ ಎಂಬ ಆಪಾದನೆ ಮೇಲೆ ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, 17 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಳಿಸಿದ್ದರು. ಈ ಕ್ರಮ ಪ್ರಶ್ನಿಸಿ ಅನರ್ಹರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. 

ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿ, ಕಾಯ್ದಿರಿಸಿರುವ ತೀರ್ಪನ್ನು ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿದೆ.

ತೀರ್ಪಿನತ್ತ ಚಿತ್ತ: ಸಭಾಧ್ಯಕ್ಷರು ನೀಡಿದ್ದ ತೀರ್ಪಿನ ಅನ್ವಯ ಅನರ್ಹ ಶಾಸಕರು 15ನೇ ವಿಧಾನಸಭೆಯ ಅವಧಿ ಮುಗಿ ಯುವ 2023ರವರೆಗೆ ಚುನಾ ವಣೆಗೆ ಸ್ಪರ್ಧಿಸುವಂತಿಲ್ಲ. ಇದು ಅನರ್ಹ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅನರ್ಹತೆಯನ್ನು ಸಿಂಧುಗೊಳಿಸಿ, ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದರೆ ಮಾತ್ರ ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿ ಸುವ ಹಾದಿ ಸುಗಮವಾಗಲಿದೆ. ಆದರೆ, ಸಚಿವರಾಗಿ ಚುನಾವಣೆ ಎದುರಿಸಬೇಕು ಎಂಬ ಅವರ ಅಪೇಕ್ಷೆಗೆ ಭಂಗ ಬರಲಿದೆ.

ರಾಜೀನಾಮೆ ಸಂಬಂಧ ಹಿಂದಿನ ಸಭಾಧ್ಯಕ್ಷರು ಕೈಗೊಂಡ ಕ್ರಮ ಸರಿ ಇಲ್ಲ. ಶಾಸಕರು ಸಭಾಧ್ಯಕ್ಷರಿಗೆ ಮತ್ತೊಮ್ಮೆರಾಜೀನಾಮೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೋರ್ಟ್‌ ತೀರ್ಪು ನೀಡಿದರೆ ಪರಿಸ್ಥಿತಿ ಬದಲಾಗಲಿದೆ. ಹೀಗಾದಲ್ಲಿ, ಅನರ್ಹಗೊಂಡವರು ಮತ್ತೆ ಶಾಸಕರಾಗಿ ಮುಂದುವರಿಯಲಿದ್ದಾರೆ. ಈಗಿನ ಸಭಾಧ್ಯಕ್ಷರಿಗೆ ಹೊಸದಾಗಿ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಮತ್ತೆ ಅವರ ರಾಜೀನಾಮೆ ಅಂಗೀಕಾರಗೊಂಡು, ವಿಧಾನಸಭಾ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಈ ಸ್ಥಾನಗಳು ಖಾಲಿಯಾಗಿವೆ ಎಂದು ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿ, ಉಪಚುನಾವಣೆಗೆ ಮತ್ತೆ ಹೊಸ ಪ್ರಕ್ರಿಯೆ ಆರಂಭಿಸಬೇಕಾ ಗುತ್ತದೆ. ಹಾಗಾದಲ್ಲಿ, ಉಪ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು