ವಿಜ್ಞಾನ ಉತ್ಸವ ಅರಿವಿನ ಪರಿಧಿ ಹೆಚ್ಚಿಸಿತು: ರಾಜ್ಯದ ಶಿಕ್ಷಕರ ಅಭಿಮತ

7
ರಾಜ್ಯ, ಜಿಲ್ಲಾ ಮಟ್ಟದಲ್ಲೂ ವಿಜ್ಞಾನ ಉತ್ಸವಗಳು ನಡೆಯಲಿ

ವಿಜ್ಞಾನ ಉತ್ಸವ ಅರಿವಿನ ಪರಿಧಿ ಹೆಚ್ಚಿಸಿತು: ರಾಜ್ಯದ ಶಿಕ್ಷಕರ ಅಭಿಮತ

Published:
Updated:

ಲಖನೌ: ‘ದೇಶದ ಪ್ರತಿಷ್ಠಿತ ಐಐಟಿಗಳು ಮತ್ತು ವಿಜ್ಞಾನದ ಸಂಸ್ಥೆಗಳಿಗೆ ನಮ್ಮ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಹೇಗೆ ಕಳಿಸಬೇಕು, ಅದರ ಮಾರ್ಗ ಯಾವುದು ಎಂಬುದು ಗೊತ್ತಿಲ್ಲ. ಸಿಇಟಿ, ಎಂಜಿನಿಯರಿಂಗ್ ಮತ್ತು ಮೆಡಿಕಲ್‌ ಬಿಟ್ಟು ಆಚೆಗೆ ಏನಿದೆ ಎಂಬುದೇ ತಿಳಿಯದು’.

ಹೀಗೆಂದು ಹೇಳುವಾಗ ಕರ್ನಾಟಕದ 18 ಜನರ ಶಿಕ್ಷಕರ ಕಣ್ಣುಗಳಲ್ಲಿ ನೋವಿತ್ತು. ‘ಈ ದಿಸೆಯಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಆಸ್ಥೆ ವಹಿಸಿದರೆ, ನಮ್ಮ ರಾಜ್ಯದ ವಿದ್ಯಾರ್ಥಿಗಳು ವಿಜ್ಞಾನದ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಸಾಧ್ಯ’ ಎಂಬುದು ಅವರ ಒಮ್ಮತದ ಅಭಿಪ್ರಾಯವಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಒಳಗೊಂಡ ಈ ತಂಡ ‘ಅಂತರ ರಾಷ್ಟ್ರೀಯ ವಿಜ್ಞಾನ ಉತ್ಸವ’ದಲ್ಲಿ ಶಿಕ್ಷಕರ ಸಮ್ಮೇಳನದಲ್ಲಿ ಭಾಗಹಿಸಲು ಬಂದಿತ್ತು. ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿತ್ತು.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆ ಸಂಖ್ಯೆ ಉತ್ಸವದಲ್ಲಿ ಕಡಿಮೆ ಇತ್ತು. ತಮಿಳುನಾಡು, ಕೇರಳ, ಆಂಧ್ರದಿಂದ ತಲಾ 150– 200 ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೆ, ಕರ್ನಾಟಕದಿಂದ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆ ರಾಜ್ಯಗಳಿಂದ ಬಂದ ಮಕ್ಕಳೆಲ್ಲಾ ಸರ್ಕಾರಿ ಶಾಲೆಗಳ ಮಕ್ಕಳೇ ಆಗಿದ್ದರು.

ನಮ್ಮ ಆಸಕ್ತಿಯಿಂದಲೇ ಬಂದಿದ್ದು: ‘ಅಂತರ ರಾಷ್ಟ್ರೀಯ ವಿಜ್ಞಾನ ಉತ್ಸವದ ಬಗ್ಗೆ ಎರಡು ವರ್ಷಗಳ ಹಿಂದೆಯಷ್ಟೇ ನಮಗೆ ಗೊತ್ತಾಯಿತು. ಕಳೆದ ವರ್ಷ ಚೆನ್ನೈನಲ್ಲಿ ಆದಾಗ ಇಬ್ಬರು ಮಾತ್ರ ಹೋಗಿದ್ದೆವು. ಈ ಬಾರಿ 18 ಜನ ಬಂದಿದ್ದೇವೆ. ವಿಜ್ಞಾನ ಉತ್ಸವಗಳಲ್ಲಿ ಭಾಗವಹಿಸಲಾರಂಭಿಸಿದ ಬಳಿಕ ವಿಜ್ಞಾನದ ಕುರಿತ ನಮ್ಮ ಅರಿವಿನ ವಿಸ್ತಾರ ಬದಲಾಯಿತು. ನಮಗೆ ಗೊತ್ತೇ ಇಲ್ಲದ ಎಷ್ಟೋ ಸಂಗತಿಗಳನ್ನು ತಿಳಿದುಕೊಂಡಿದ್ದೂ ಅಲ್ಲದೆ, ಅವುಗಳನ್ನು  ಕಲಿಕೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಮೈಸೂರು ಜಿಲ್ಲೆ ನಂಜನಗೂಡು ಹೆಡತಲೆ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಎಸ್‌.ಹರ್ಷ ತಿಳಿಸಿದರು.

‘ಸರಳವಾಗಿ ಮತ್ತು ಮಕ್ಕಳಿಗೆ ಅರ್ಥವಾಗುವಂತೆ ಬೋಧನೆ ಮಾಡುವುದು ಹೇಗೆ, ಥಿಯರಿಗಿಂತ, ಪ್ರಯೋಗಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಬಗ್ಗೆ ನಾವು ಕಲಿತುಕೊಂಡೆವು. ಇದನ್ನು ಶಾಲೆಯಲ್ಲಿ ಮಕ್ಕಳಿಗೆ ಕಟ್ಟಿಕೊಡಲು ಸಾಧ್ಯ. ಬೇರೆ ಬೇರೆ ರಾಜ್ಯಗಳ ಶಿಕ್ಷಕರು ತಾವು ಹೇಗೆ ಕಲಿಸುತ್ತೇವೆ ಎಂಬುದನ್ನು ವಿವರಿಸುತ್ತಾರೆ, ಇದರಿಂದ ಉತ್ತಮ ಬೋಧನಾ ಕ್ರಮವನ್ನೂ ನಾವು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿದೆ’ ಎಂದರು.

‘ನಮ್ಮ ರಾಜ್ಯದ ಮಕ್ಕಳು ದೇಶ– ವಿದೇಶಗಳ ವಿಜ್ಞಾನದ ಬೆಳವಣಿಗೆಯ ಬಗ್ಗೆ  ತಿಳಿದುಕೊಳ್ಳಬೇಕಿದ್ದರೆ, ಇದೇ ಮಾದರಿಯ ಉತ್ಸವಗಳನ್ನು ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟಗಳಲ್ಲೂ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಲು ಸಹಾಯವಾಗುತ್ತದೆ. ಪಶ್ಚಿಮಬಂಗಾಳಕ್ಕೆ ಹೋಲಿಸಿದರೆ, ನಮ್ಮ ರಾಜ್ಯದ ಕಲಿಕೆ ಮಟ್ಟ ಹಿಂದಿದೆ ಎಂದು ಹೇಳಬಹುದು. ಅಲ್ಲಿ ಕಲಿಕೆ ವಿಧಾನ ಸರಳ ಮತ್ತು ಭಿನ್ನವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಅವರು ತಿಳಿಸಿದರು.

ವಿಜ್ಞಾನ ಕಲಿಕೆಗೆ ತಂತ್ರಜ್ಞಾನ ಬಳಕೆ

ರಾಜ್ಯದಲ್ಲಿ ವಿಜ್ಞಾನ ಕಲಿಕೆಗೆ ಬಳಕೆ ಆಗುತ್ತಿರುವ ಬಗ್ಗೆ ತಂತ್ರಜ್ಞಾನ ಬರಹಗಾರ  ಟಿ.ಜಿ.ಶ್ರೀನಿಧಿ ಮತ್ತು ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ಉಪನ್ಯಾಸ ನೀಡಿದರು.


ಉಪನ್ಯಾಸ ನೀಡುತ್ತಿರುವ ಟಿ.ಜಿ.ಶ್ರೀನಿಧಿ

‘ಈಗ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಒಟ್ಟು ಮಕ್ಕಳಲ್ಲಿ ಶೇ 60 ರಷ್ಟು ಜನಕ್ಕೆ ಓದುವ ಮತ್ತು ಸ್ವತಂತ್ರವಾಗಿ ಬರೆಯುವ ಕೌಶಲವಿಲ್ಲ ಎಂಬುದಾಗಿ ಎನ್‌ಸಿಇಆರ್‌ಟಿ ನಡೆಸಿರುವ ಸಮೀಕ್ಷೆ ತಿಳಿಸಿದೆ. ಇದು ನಿಜಕ್ಕೂ ಆತಂಕಕಾರಿ. ಇವರು ವಿಜ್ಞಾನ ಮತ್ತು ಇತರ ವಿಷಯಗಳನ್ನು ಓದುವ ಮತ್ತು ಬರೆಯುವಂತೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ’ ಎಂದು ಶರ್ಮ ತಿಳಿಸಿದರು.

ಶ್ರೀನಿಧಿ ಮಾತನಾಡಿ, ಸ್ಥಳೀಯ ಭಾಷೆಗಳಲ್ಲಿ ವಿಜ್ಞಾನ ಸಂವಹನವನ್ನು ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಕನ್ನಡ ಭಾಷೆಯಲ್ಲಿ ನಡೆದಿರುವ ಪ್ರಯತ್ನಗಳು ಉಲ್ಲೇಖನೀಯ. ಇಂತಹ ಹಲವು ಪ್ರಯತ್ನಗಳಲ್ಲಿ (ಜಾಲತಾಣ, ವಾಟ್ಸ್ ಆಪ್, ಫೇಸ್ ಬುಕ್ ಹಾಗೂ ವಿದ್ಯುನ್ಮಾನ ಪುಸ್ತಕಗಳ ಮೂಲಕ ವಿಜ್ಞಾನ ಸಂವಹನ) ಇಜ್ಞಾನ ಟ್ರಸ್ಟ್ ತೊಡಗಿಕೊಂಡಿದೆ ಎಂದರು.


ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿದ್ದ ರಾಜ್ಯದ ಶಿಕ್ಷಕರು

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !