ಮಿತ್ರರ ಮೇಲು‘ಕೈ’: ಬಿಜೆಪಿಗೂ ಜೈ

ಬೆಂಗಳೂರು: ಮೂರು ಮಹಾನಗರ ಪಾಲಿಕೆಗಳು ಮತ್ತು 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಅತಂತ್ರ ಫಲಿತಾಂಶ ಬಂದಿರುವ 27 ಕಡೆಗಳಲ್ಲಿ ಚುಕ್ಕಾಣಿ ಹಿಡಿಯಲು ಜೆಡಿಎಸ್ ಜತೆ ಕಾರ್ಯತಂತ್ರ ಹೆಣೆದಿವೆ.
22 ಜಿಲ್ಲೆಗಳ ವಿವಿಧ ಹಂತಗಳ ನಗರ ಸ್ಥಳೀಯ ಸಂಸ್ಥೆಗೆ ಆಗಸ್ಟ್ 31 ರಂದು ಮತದಾನ ನಡೆದಿದ್ದು, ಸೋಮವಾರ ಫಲಿತಾಂಶ ಹೊರಬಿದ್ದಿದೆ.
ನಗರ ಪ್ರದೇಶಗಳ ಮತದಾರರು ಸಮ್ಮಿಶ್ರ ಸರ್ಕಾರದ ವಿರುದ್ಧ ಜನಾದೇಶ ನೀಡಿಲ್ಲ ಎಂಬ ಕಾರಣಕ್ಕೆ ‘ದೋಸ್ತಿ ಪಕ್ಷ’ಗಳ ನಾಯಕರು ನಿಟ್ಟುಸಿರು ಬಿಡುವಂತಾಗಿದೆ. ಸಮ್ಮಿಶ್ರ ಸರ್ಕಾರ ವಿಧಾನಸಭಾ ಚುನಾವಣೆಯ ಜನಾದೇಶಕ್ಕೆ ವಿರುದ್ಧ ಎಂದು ಪ್ರಚಾರ ಮಾಡಿದ್ದ ಬಿಜೆಪಿಗೆ ಈ ಫಲಿತಾಂಶ ನಿರಾಸೆ ಮೂಡಿಸಿದೆ.
ಅತಂತ್ರ ಫಲಿತಾಂಶ ಬಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ‘ಮೈತ್ರಿ’ ಮಾಡಿಕೊಂಡು ಅಧಿಕಾರ ಹಿಡಿಯಲು ಚುನಾವಣೆ ಬಳಿಕ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಮೈತ್ರಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಪಾಲಿಕೆಗಳ ಪೈಕಿ ಮೈಸೂರು ಮತ್ತು ತುಮಕೂರು ಪಾಲಿಕೆಗಳ ಫಲಿತಾಂಶ ಅತಂತ್ರವಾಗಿದ್ದು, ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆಗಿದೆ. ಹಾಸನದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಒಟ್ಟು ಸ್ಥಾನಗಳ ಪೈಕಿ ಜೆಡಿಎಸ್ 91, ಬಿಜೆಪಿ 20 ಮತ್ತು ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿವೆ. ಅಚ್ಚರಿ ಎಂದರೆ, ಈ ಜಿಲ್ಲೆಗಳಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ 64 ಮತ್ತು ಕಾಂಗ್ರೆಸ್ 35 ಮತ್ತು ಬಿಜೆಪಿ 4 ಸ್ಥಾನಗಳನ್ನು, ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ 51, ಕಾಂಗ್ರೆಸ್ 32 ಮತ್ತು ಬಿಜೆಪಿ 24 ಸ್ಥಾನಗಳನ್ನು ಗೆದ್ದಿವೆ. ಎಚ್.ಡಿ.ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ಪುರಸಭೆಯಲ್ಲಿ ಎಲ್ಲ 23 ಸ್ಥಾನಗಳನ್ನೂ ಜೆಡಿಎಸ್ ಬುಟ್ಟಿಗೆ ಹಾಕಿಕೊಂಡಿದೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಕೊರಟಗೆರೆ ಪುರಸಭೆ
ಯಲ್ಲೂ ಜೆಡಿಎಸ್ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಸರಿದಿದೆ. ಇಲ್ಲಿನ ಒಟ್ಟು 343 ವಾರ್ಡ್ಗಳ ಪೈಕಿ ಬಿಜೆಪಿ 104, ಪಕ್ಷೇತರರು 144, ಕಾಂಗ್ರೆಸ್ 85 ಮತ್ತು ಜೆಡಿಎಸ್ 10 ಸ್ಥಾನಗಳನ್ನು ಗೆದ್ದುಕೊಂಡಿವೆ. ಆಂತರಿಕ ಕಚ್ಚಾಟ ಕಾಂಗ್ರೆಸ್ ಹಿನ್ನಡೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೊಂಚ ಚೇತರಿಸಿಕೊಂಡಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ 42, ಕಾಂಗ್ರೆಸ್ 30, ಉತ್ತರ ಕನ್ನಡದಲ್ಲಿ ಬಿಜೆಪಿ 85, ಕಾಂಗ್ರೆಸ್ 87 ಮತ್ತು ಉಡುಪಿಯಲ್ಲಿ ಬಿಜೆಪಿ 66, ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದುಕೊಂಡಿವೆ.
ಅಧಿಕಾರ ಹಿಡಿಯುವ ಲೆಕ್ಕಾಚಾರ
*ರಾಜ್ಯದಲ್ಲಿ ಆಡಳಿತ ಹಿಡಿದಿರುವ ದೋಸ್ತಿ ಪಕ್ಷಗಳ ಶಾಸಕರು ತಮ್ಮ ವ್ಯಾಪ್ತಿಯ ನಗರಸಭೆ, ಪುರಸಭೆಗಳಲ್ಲಿ ಪಕ್ಷೇತರರನ್ನು ಸೆಳೆದು ಅಧಿಕಾರ ಹಿಡಿಯಬಹುದು
*ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಆಧರಿಸಿ, ಯಾವ ಪಕ್ಷದ ಸದಸ್ಯರಿಗೆ ಮೀಸಲಾತಿ ಅನ್ವಯ ಅಧಿಕಾರ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ತಂತ್ರಗಾರಿಕೆ ಆರಂಭ
*ಮೀಸಲಾತಿ ಪಟ್ಟಿ ಅನ್ವಯ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್–ಜೆಡಿಎಸ್ನಲ್ಲಿ ಅರ್ಹರಿಲ್ಲದಿದ್ದರೆ ಬಿಜೆಪಿ ಸದಸ್ಯರನ್ನೇ ಸೆಳೆದು ಅಧಿಕಾರ ಹಿಡಿಯಬಹುದು ಅಥವಾ ಬಿಜೆಪಿ ತನ್ನ ಎದುರಾಳಿ ಪಕ್ಷದ ಸದಸ್ಯರನ್ನು ಸೆಳೆದು ಅಧಿಕಾರದ ಗದ್ದುಗೆಗೆ ಏರಬಹುದು
*ರಾಜ್ಯದಲ್ಲಿ ದೋಸ್ತಿ ಇದ್ದರೂ ಸ್ಥಳೀಯ ರಾಜಕೀಯ ಲೆಕ್ಕಾಚಾರ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಳ್ಳಬಹುದು. ಆಗ ಕಾಂಗ್ರೆಸ್–ಜೆಡಿಎಸ್, ಬಿಜೆಪಿ–ಜೆಡಿಎಸ್ ಪಕ್ಷಗಳ ಸದಸ್ಯರು ಅಧಿಕಾರ ಹಿಡಿಯಬಹುದು
****
ಆ್ಯಸಿಡ್ ದಾಳಿ
ತುಮಕೂರು: ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಬಳಿಕ 16ನೇ ವಾರ್ಡ್ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಉಲ್ಲಾ ಖಾನ್ ಅವರ ಮೆರವಣಿಗೆ ವೇಳೆ ನಡೆದ ಆ್ಯಸಿಡ್ ರೂಪದ ರಾಸಾಯನಿಕ ದಾಳಿಯಲ್ಲಿ 30 ಜನರು ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳೂ ಅಪಾಯದಿಂದ ಪಾರಾಗಿದ್ದಾರೆ.
ಅಬು ಮತ್ತು ವಸೀಮ್ ಕಣ್ಣಿನ ರೆಪ್ಪೆಯ ಮೇಲೆ ರಾಸಾಯನಿಕ ಬಿದ್ದಿದ್ದು, ಕಣ್ಣಿಗೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
****
ಸಮ್ಮಿಶ್ರ ಸರ್ಕಾರಕ್ಕೆ ಜನ ಸಹಮತ ವ್ಯಕ್ತಪಡಿಸಿದ್ದಾರೆ. ಅತಂತ್ರ ಇರುವಲ್ಲಿ ಗೊಂದಲದ ನಿಲುವು ಇಲ್ಲ. ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಮುಖಂಡರು ನಿರ್ಧರಿಸುತ್ತಾರೆ
-ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ
ಕಾಂಗ್ರೆಸ್ ದುರ್ಬಲವಾಗಿದೆ ಎಂದು ಟೀಕಿಸುವವರಿಗೆ ಫಲಿತಾಂಶ ಉತ್ತರ ಕೊಟ್ಟಿದೆ. ಅಗತ್ಯ ಇರುವಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ</p>
-ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್– ಜೆಡಿಎಸ್ ಭದ್ರಕೋಟೆಗಳಲ್ಲೂ ಬಿಜೆಪಿ ಬಲ ವೃದ್ಧಿಸಿಕೊಂಡಿರುವುದು ಫಲಿತಾಂಶದಿಂದ ಗೊತ್ತಾಗಿದೆ. ಆ ಪಕ್ಷಗಳ ಹಣ ಬಲದಿಂದಾಗಿ ಸಮಾನವಾಗಿ ನಿಲ್ಲಲು ನಮಗೆ ಸಾಧ್ಯವಾಗಿಲ್ಲ
–ಬಿ.ಎಸ್. ಯಡಿಯೂರಪ್ಪ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಸಾಗಲಿವೆ. ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಧರ್ಮ ಪಾಲನೆಯಾಗಲಿದೆ
–ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.