ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವ : ಓದಿಸಿದವರ ಶ್ರಮ ಸಾರ್ಥಕವಾದ ಗಳಿಗೆ

ಚಿನ್ನ ಗೆದ್ದವರ ಹಿಂದಿರುವವರ ಶ್ರಮ
Last Updated 4 ಫೆಬ್ರುವರಿ 2019, 20:13 IST
ಅಕ್ಷರ ಗಾತ್ರ

ಧಾರವಾಡ: ಅಕ್ಕನ ಮಗಳ ಓದು ನಿರಾತಂಕವಾಗಿ ನಡೆಯಬೇಕು ಎಂದುಕೊಂಡು, ಸೈನಿಕನಾಗುವ ತಮ್ಮ ಕನಸನ್ನು ಬದಿಗಿಟ್ಟು ಬಟ್ಟೆ ಹೊಲಿದು ಓದಿಸಲು ಮುಂದಾದ ಸೋದರಮಾವನಿಗೆ ಚಿನ್ನದ ಪದಕ ಸಮರ್ಪಿಸಿದ್ದು ಒಂದೆಡೆ; 6ನೇ ತರಗತಿಯಲ್ಲಿ ಶಾಲೆ ಬಿಡಿಸಿದ್ದ ಬಾಲಕನನ್ನು ಪೊಲೀಸ್ ಒಬ್ಬರು ಕರೆತಂದು ಓದಿಸಿದ ಹುಡುಗ ಚಿನ್ನದ ಪದಕ ಪಡೆದ ಸಾಧನೆ ಮತ್ತೊಂದೆಡೆ...

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ಜರುಗಿದ 69ನೇ ಘಟಿಕೋತ್ಸವ ಇಂಥ ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಏಳು ಚಿನ್ನದ ಪದಕ ಪಡೆದ ಅಥಣಿ ತಾಲ್ಲೂಕಿನ ಬಣಜವಾಡಿ ಗ್ರಾಮದ ಸುಜಾತಾ ಬೋಸಗೆ, ತಮ್ಮ ಊರಿನಲ್ಲಿ ಶಾಲೆ ಇಲ್ಲ ಎಂಬ ಕಾರಣಕ್ಕಾಗಿ ಅಜ್ಜಿ ಮನೆಯಲ್ಲಿ ಇದ್ದು ಓದಿದವರು.

‘ಬಾಲ್ಯದಿಂದ ಇಂದಿನವರೆಗೂ ಅಜ್ಜಿ ಮನೆಯಲ್ಲೇ ಇದ್ದು ಓದಿದೆ. ಛಲ ಬಿಡದೆ ಅಧ್ಯಯನ ಮಾಡಿದೆ. ಆದರೆ ನಮ್ಮ ಮಾವ ರಾಜೇಂದ್ರ ಬಾಬಣ್ಣವರ ತಮ್ಮ ಓದನ್ನು ಅರ್ಧಕ್ಕೇ‌‌ ಮೊಟಕುಗೊಳಿಸಿ ಟೈಲರಿಂಗ್‌ ಆರಂಭಿಸಿದರು. ಅವರಿಗೆ ಸೈನಿಕನಾಗಬೇಕು ಎಂಬ ಕನಸಿತ್ತು. ಅವರ ತ್ಯಾಗ ವ್ಯರ್ಥವಾಗದಂತೆ ಓದಬೇಕೆನ್ನುವ ಛಲ ನನ್ನಲ್ಲಿತ್ತು. ಇಂದು ನನಗೆ ಲಭಿಸಿದ ಈ ಏಳು ಚಿನ್ನದ ಪದಕಗಳನ್ನು ನಾನು ಅವರಿಗೆ ಅರ್ಪಿಸುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿದ ಸುಜಾತಾ, ಕೆಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾರೆ.

ಯೋಗ ವಿಷಯದಲ್ಲಿ ಚಿನ್ನದ ಪದಕ ಪಡೆದ ತಾಲ್ಲೂಕಿನ ಹೆಬ್ಬಳ್ಳಿಯ ಮಂಜುನಾಥ ತುಳಜಪ್ಪನವರ ಅವರು ಆರನೇ ತರಗತಿಯಲ್ಲಿದ್ದಾಗಲೇ ಅವರ ತಂದೆ ತಾನಾಜಿ ಶಾಲೆ ಬಿಡಿಸಿದ್ದರು. ಆದರೆ, ಅದೇ ಊರಿನವರಾದ ತಿಮ್ಮಾಜಿರಾವ್ ತಲವಾಯಿ ಎಂಬುವವರು ಈ ಹುಡುಗನನ್ನು ಕರೆತಂದು ಓದಿಸಿದರು. ಮನೆಯಲ್ಲಿರುವ ಇನ್ನೂ ಇಬ್ಬರು ತಮ್ಮಂದಿರು ಅಣ್ಣನ ಹಾದಿಯನ್ನೇ ಅನುಸರಿಸಿ ತಾಂತ್ರಿಕ ಶಿಕ್ಷಣ ಪಡೆದಿದ್ದಾರೆ.

ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಸಾಧನೆ ಕಂಡು, ಪೊಲೀಸ್ ಆಗಿರುವ ತಿಮ್ಮಾಜಿರಾವ್ ಮತ್ತು ಯುವಕನ ತಂದೆ ತಾನಾಜಿ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಈ ದೃಶ್ಯ ಕಣ್ತುಂಬಿಕೊಳ್ಳಲು ಹೆಬ್ಬಳ್ಳಿಯ ಅವರ ಕುಟುಂಬದ ಎಲ್ಲಾ ಸದಸ್ಯರು ಬಂದಿದ್ದರು. ಪ್ರತಿಯೊಬ್ಬರೂ ತಿಮ್ಮಾಜಿರಾವ್ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದ ದೃಶ್ಯ ಕಂಡುಬಂತು.

ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 9 ಚಿನ್ನದ ಪದಕ ಪಡೆದ ಹೊನ್ನಾವರ ತಾಲ್ಲೂಕಿನ ಕಂಚಿಹಳ್ಳಿ ಗ್ರಾಮದ ನಿರ್ಮಲಾ ಹೆಗಡೆ ಅವರಿಗೆ ಉಪನ್ಯಾಸಕಿಯಾಗಬೇಕು ಮತ್ತು ಅಶಕ್ತರಿಗೆ ನೆರವಾಗಬೇಕು ಎಂಬ ಆಸೆ. ಅಂಗವಿಕಲೆಯಾಗಿರುವ ತಮ್ಮ ಅಕ್ಕನೊಂದಿಗೆ ಬೆಳೆದ ಇವರು ದುರ್ಬಲರು ಮತ್ತು ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಆಸೆ ಹೊಂದಿದ್ದಾರೆ. ಹಿಂದೂಸ್ತಾನಿ ಸಂಗೀತದಲ್ಲೂ ಪ್ರಾವೀಣ್ಯ ಹೊಂದಿದ್ದಾರೆ.

ಪ್ರಜಾವಾಣಿ ನೆನೆದ ‘ಚಿನ್ನದ ಹುಡುಗ’

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ನಗದು ಪುರಸ್ಕಾರದೊಂದಿಗೆ ಏಳು ಚಿನ್ನದ ಪದಕ ಪಡೆದ ಪತ್ರಿಕೋದ್ಯಮ ವಿಭಾಗದ ಕೃಷ್ಣ ಈರಗಾರ, ನಂಬಿರುವ ಆದರ್ಶ ಹಾಗೂ ತತ್ವಗಳ ಆಧಾರದಲ್ಲಿ ಸಮಾಜಕ್ಕಾಗಿ ದುಡಿಯಬೇಕೆಂಬ ಗುರಿ ಹೊಂದಿದ್ದಾರೆ.

‘ಮುಧೋಳ ತಾಲ್ಲೂಕಿನ ಬಂಟನೂರು ಗ್ರಾಮದಲ್ಲಿ ಕೇವಲ ಒಂದು ಎಕರೆ ಜಮೀನು ಹೊಂದಿರುವ ತಂದೆ, ತಾಯಿ ಕಷ್ಟಪಟ್ಟು ನನ್ನನ್ನು ಓದಿಸಿದ್ದಾರೆ. ನಂತರದ ಹಂತದಲ್ಲಿ ನನ್ನ ಬೆಳವಣಿಗೆಗೆ ಶಿಕ್ಷಕರು ನೆರವಾಗಿದ್ದಾರೆ. ಪದವಿ ಹಂತದಿಂದಲೇ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ನನ್ನ ಅಧ್ಯಯನಕ್ಕೆ ಪೂರಕವಾಗಿ ನೆರವಾದವು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನನಗೆ ಈ ಪತ್ರಿಕೆಗಳೇ ಆಸರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT