ಕರ್ನಾಟಕದ ಪಡಿತರ ವ್ಯವಸ್ಥೆ ಗೋವಾಕ್ಕೆ ಮಾದರಿ: ಗೋವಿಂದ ಎಸ್.ಗಾವಡೆ

7
ಅಧಿಕಾರಿಗಳಿಂದ ಮಾಹಿತಿ ಪಡೆದ ಅಲ್ಲಿನ ಸಚಿವ

ಕರ್ನಾಟಕದ ಪಡಿತರ ವ್ಯವಸ್ಥೆ ಗೋವಾಕ್ಕೆ ಮಾದರಿ: ಗೋವಿಂದ ಎಸ್.ಗಾವಡೆ

Published:
Updated:

ಬೆಳಗಾವಿ: ‘ಕರ್ನಾಟಕದ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೊಮೆಟ್ರಿಕ್ ಅಳವಡಿಕೆ, ಪಡಿತರ ಚೀಟಿಗಳಿಗೆ ಆಧಾರ್‌ ಜೋಡಣೆ ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾದರಿಯಾಗಿದೆ. ಅದನ್ನು ಗೋವಾದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ಅಲ್ಲಿನ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಗೋವಿಂದ ಎಸ್. ಗಾವಡೆ ಇಲ್ಲಿ ಸೋಮವಾರ ತಿಳಿಸಿದರು.

ಆಹಾರ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕರ್ನಾಟಕ ಸರ್ಕಾರವು, ಪಡಿತರ ವಿತರಣೆಯಲ್ಲಿ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಇದನ್ನು ಗೋವಾದಲ್ಲಿ ಅಳವಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಶೇ. 90ರಷ್ಟು ಅನುಷ್ಠಾನಗೊಂಡಿದೆ. ಆದರೆ, ಗೋವಾದ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಶೇ. 70ರಷ್ಟು ಆನ್‌ಲೈನ್ ಸೌಲಭ್ಯಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಸರ್ಕಾರದ ಯೋಜನೆಗಳ ಲಾಭ ಜನರಿಗೆ ನಿಗದಿತ ಸಮಯದಲ್ಲಿ ತಲುಪುತ್ತಿಲ್ಲ’ ಎಂದು ಮಾಹಿತಿ ನೀಡಿದರು.

‘ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 10 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿದ್ದರೂ ಸಮಸ್ಯೆ ಉಂಟಾಗದಂತೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಗೋವಾದ 15 ಲಕ್ಷ ಜನಸಂಖ್ಯೆಯಲ್ಲಿ 3 ಲಕ್ಷ ಜನರು ಪಡಿತರ ಚೀಟಿ ಹೊಂದಿದ್ದರೂ, ಆನ್‌ಲೈನ್ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಗೋವಾದ 15 ಲಕ್ಷ ಜನಸಂಖ್ಯೆಯಲ್ಲಿ 9 ಲಕ್ಷ ಮಾತ್ರ ಮೂಲ ನಿವಾಸಿಗಳು. ಉಳಿದವರು ವಲಸಿಗರು. ಅಲ್ಲಿ ಆಹಾರ ಉತ್ಪಾದನೆ ಮಾಡುತ್ತಿಲ್ಲ. ನೆರೆ ರಾಜ್ಯಗಳ ಮೇಲೆ ಅವಲಂಬಿತರಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಎಸ್.ಎಸ್. ಬಳ್ಳಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !