ಮತ್ತೆ ಬಿರುಸು ಪಡೆದ ಮಳೆ: ರಾಜ್ಯದ ವಿವಿಧೆಡೆ ಸಂಚಾರ ಸ್ಥಗಿತ

7
ಕೇರಳದಲ್ಲಿ ಭೂಕುಸಿತಕ್ಕೆ 22 ಸಾವು: ರಾಜ್ಯದ ವಿವಿಧೆಡೆ ಸಂಚಾರ ಸ್ಥಗಿತ

ಮತ್ತೆ ಬಿರುಸು ಪಡೆದ ಮಳೆ: ರಾಜ್ಯದ ವಿವಿಧೆಡೆ ಸಂಚಾರ ಸ್ಥಗಿತ

Published:
Updated:

ಬೆಂಗಳೂರು: ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಂದ ಸತತವಾಗಿ ಮಳೆಯಾಗುತ್ತಿದೆ. ನೆರೆಯ ಕೇರಳದಲ್ಲಿಯೂ ಕೆಲವು ದಿನಗಳಿಂದ ಮಳೆ ಧಾರಾಕಾರವಾಗಿದೆ. ತೀವ್ರ ಮಳೆ ಮತ್ತು ಭೂಕುಸಿತಕ್ಕೆ ಇಲ್ಲಿ 22 ಮಂದಿ ಮೃತಪಟ್ಟಿದ್ದಾರೆ. 

ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ 80,000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಎರಡು ಸೇತುವೆಗಳು ಮುಳುಗಡೆಯಾಗಿವೆ. ಜಲಾಶಯ ನಿರ್ಮಾಣವಾದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಯಾವತ್ತೂ ಹೊರಗೆ ಬಿಟ್ಟಿರಲಿಲ್ಲ.  ಈ ಹಿಂದೆ 1992ರಲ್ಲಿ 70,300 ಕ್ಯುಸೆಕ್ ನೀರು ಬಿಟ್ಟಿದ್ದೇ ಮಾಡಿದ್ದು ಈವರೆಗಿನ ದಾಖಲೆ.

ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಿನ ಜಲಾಶಯಗಳು ಭರ್ತಿಯಾಗಿ ಹೆಚ್ಚಿನ ನೀರು ಹರಿದು ಬರುತ್ತಿದೆ.  ಹೊರ ಹರಿವು ಮತ್ತಷ್ಟು ಏರಿಕೆಯಾದರೆ ಇನ್ನಷ್ಟು ಸೇತುವೆಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. 

ಮಡಿಕೇರಿ, ಮಾದಾಪುರ, ಸೋಮವಾರಪೇಟೆಯಲ್ಲಿ ಸುರಿದ ಮಳೆಯಿಂದ ಹಾರಂಗಿ ಜಲಾಶಯದ ಒಳಹರಿವು ಏರಿಕೆಯಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲೂ ಮಳೆ ಅಬ್ಬರ ಜೋರಾಗಿದೆ.

ಮಂಗಳೂರು ರಸ್ತೆಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಸಂಪಾಜೆ– ಕುಶಾಲನಗರದ ನಡುವೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಡಿಕೇರಿ, ಸಂಪಾಜೆ ನಡುವೆ ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಕೆಎಸ್‌ಆರ್‌ಟಿಸಿ ಬಸ್‌, ಶಾಲಾ ವಾಹನ ಹಾಗೂ ಸರ್ಕಾರಿ ಕೆಲಸಕ್ಕೆ ಬಳಕೆ ಮಾಡುವ ವಾಹನ ಸಂಚಾರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ.

ಭಾಗಮಂಡಲ ರಸ್ತೆಯ ತಾಳತ್ತಮನೆ, ಮೇಕೇರಿ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಸೆ.29ರ ತನಕ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ. 

ತುಂಗಾ ಜಲಾನಯನ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದೆ. ಗಾಜನೂರಿನ ಜಲಾಶಯಕ್ಕೆ 39,325 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹತ್ತು ಕ್ರಸ್ಟ್‌ ಗೇಟ್‌ಗಳ ಮೂಲಕ 37,162 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಮಂಗಳೂರು ರೈಲು ಬಂದ್‌

ಸಕಲೇಶಪುರ– ಕುಕ್ಕೆ ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದ ಎಡಕುಮೇರಿ ಹಾಗೂ ಅರೆಬೆಟ್ಟ ನಡುವೆ ರೈಲು ಹಳಿ ಮೇಲೆ ಎರಡು ಕಡೆ ಮಣ್ಣು ಕುಸಿದಿದ್ದು, ಗುರುವಾರವೂ ರೈಲು ಸಂಚಾರ ಸ್ಥಗಿತಗೊಂಡಿತು.

ಹೆದ್ದಾರಿ ಸಂಚಾರ ಸ್ಥಗಿತ

ಘಟ್ಟ ಪ್ರದೇಶದಲ್ಲಿ ಸತತ ಎರಡನೇ ದಿನವೂ ಭಾರಿ ಮಳೆ ಸುರಿದಿರುವುದರಿಂದ ಗುಂಡ್ಯ ಹೊಳೆ ಉಕ್ಕಿ ಹರಿಯುತ್ತಿದ್ದು, ಉದನೆಯಲ್ಲಿ ಪ್ರವಾಹ ನೀರು ಹೆದ್ದಾರಿಯನ್ನೂ ವ್ಯಾಪಿಸಿತು. ಇದರಿಂದ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಗುರುವಾರ 7 ಗಂಟೆ ಸ್ಥಗಿತವಾಯಿತು.

ಕೇರಳದ ಜಲಾಶಯಗಳು ಭರ್ತಿ

ಕೇರಳದ ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗಿವೆ. 22 ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿ, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಪಾಲಕ್ಕಾಡ್‌ ಪಟ್ಟಣದ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.

ಇಡುಕ್ಕಿ ಮತ್ತು ಚೆರುತೋನಿ ಜಲಾಶಯಗಳಿಂದಲೂ ನೀರು ಹೊರ ಬಿಡಲಾಗುತ್ತಿದೆ. ಏಷ್ಯಾದ ಅತಿ ದೊಡ್ಡ ಕಮಾನು ಅಣೆಕಟ್ಟೆ ಎನಿಸಿದ ಚೆರುತೋನಿ 1992ರಿಂದ ಭರ್ತಿಯಾಗಿರಲಿಲ್ಲ. ಎರ್ನಾಕುಲಂ ಜಿಲ್ಲೆಯ ಇದಮಲಯಾರ್‌ ಜಲಾಶಯದಿಂದಲೂ ನೀರು ಬಿಡಲಾಗಿದೆ.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !