ಕರುನಾಡ ಜತೆಗೆ ಕಾರುಣ್ಯದ ‘ನಿಧಿ’

7

ಕರುನಾಡ ಜತೆಗೆ ಕಾರುಣ್ಯದ ‘ನಿಧಿ’

Published:
Updated:

ಬೆಂಗಳೂರು: ತಮಿಳಿನ ಅಸ್ಮಿತೆಯ ಬಗ್ಗೆ ಅಪಾರ ಬದ್ಧತೆ, ಅತೀವ ಎನ್ನಿಸುವಷ್ಟು ಭಾಷಾಭಿಮಾನ ಹೊಂದಿದ್ದ ಎಂ. ಕರುಣಾನಿಧಿ, ತಮಿಳುನಾಡು ಮತ್ತು ಕನ್ನಡ ನಾಡಿನ ಮಧ್ಯೆ ಸದಾ ವಿವಾದದ ತಿದಿಯೊತ್ತುವ ಕಾವೇರಿ ನೀರಿನ ವ್ಯಾಜ್ಯ ಹಾಗೂ ಭಾಷಾ ಬಾಂಧವ್ಯ ವಿಷಯ ಬಂದಾಗ ಮಾತ್ರ ‘ಕಾರುಣ್ಯದ ನಿಧಿ’ಯಂತೆ ವರ್ತಿಸುತ್ತಿದ್ದರು.

‘ತಮಿಳುನಾಡು ಕಾವೇರಿ ಕ್ಯಾತೆ ತೆಗೆಯುತ್ತದೆ’ ಎಂಬ ಟೀಕೆಯನ್ನೂ ಮರೆಸುವಷ್ಟು ಅವರು ಉದಾರಿಯಾಗಿ ನಡೆದುಕೊಂಡಿದ್ದುಂಟು. ಉಭಯ ರಾಜ್ಯಗಳ ನಡುವೆ ಸೌಹಾರ್ದ ವಾತಾವರಣ ರೂಪಿಸುವತ್ತ ಅವರು ಕಾಳಜಿ ಹೊಂದಿದ್ದರು.

ಅಕ್ಕಪಕ್ಕದ ರಾಜ್ಯಗಳ ಬಾಂಧವ್ಯಕ್ಕೆ 2009ರಲ್ಲಿ ಹೊಸ ಸ್ವರೂಪ ನೀಡಲು ಮುಂದಾದವರು ಕರುಣಾನಿಧಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು. ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳವರ್‌ ಪ್ರತಿಮೆ ಸ್ಥಾಪನೆಯಾಗಬೇಕು ಎಂಬುದು ಕನ್ನಡ ನೆಲದಲ್ಲಿ ನೆಲೆಸಿರುವ ತಮಿಳರ ಎರಡು ದಶಕಗಳ ಬಯಕೆಯಾಗಿತ್ತು. ಹಲವು ತಿಂಗಳುಗಳ ಮಾತುಕತೆಯ ನಂತರ ಯಡಿಯೂರಪ್ಪ ಅವರು ಕರುಣಾನಿಧಿ ಅವರನ್ನು 2009ರಲ್ಲಿ ಪ್ರತಿಮೆ ಸ್ಥಾಪನೆಗೆ ಆಹ್ವಾನಿಸಿದ್ದರು. ಆ ವರ್ಷದ ಆಗಸ್ಟ್‌ 9ರಂದು ಪ್ರತಿಮೆ ಅನಾವರಣಗೊಂಡಿತ್ತು. ‘ರಾಜ್ಯಗಳ ಸ್ನೇಹಸಂಬಂಧಕ್ಕೆ ಹೊಸ ಸೇತು ನಿರ್ಮಾಣವಾಗಿದೆ’ ಎಂದೂ ಕರುಣಾನಿಧಿ ಹೇಳಿದ್ದರು.

‘ಯಡಿಯೂರಪ್ಪ ನನ್ನ ಚಿನ್ನತಂಬಿ (ಕಿರಿಯ ಸಹೋದರ). ಇಬ್ಬರು ಸಹೋದರರು ಜತೆಗೂಡಿ ಮೇಲ್ಪಂಕ್ತಿ ಹಾಕಿದ್ದೇವೆ. ಇದರಲ್ಲಿ ರಾಜಕಾರಣ ಇಲ್ಲ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಇದನ್ನು ಅನುಸರಿಸಬೇಕು’ ಎಂದು ಕಿವಿಮಾತು ಹೇಳಿದ್ದರು. ‘ನಾವು ಪ್ರತಿಮೆಯನ್ನಷ್ಟೇ ಅನಾವರಣ ಮಾಡಿಲ್ಲ, ಎರಡೂ ರಾಜ್ಯಗಳ ಜನರ ಹೃದಯವನ್ನು ತೆರೆದಿದ್ದೇವೆ’ ಎಂದಿದ್ದರು.

ಅದರ ಬೆನ್ನಲ್ಲೇ, ಕನ್ನಡದ ಕವಿ ಸರ್ವಜ್ಞ ಪ್ರತಿಮೆ  ಆಗಸ್ಟ್‌ 13ರಂದು ತಮಿಳುನಾಡಿನಲ್ಲಿ ಅನಾವರಣಗೊಂಡಿತ್ತು. ಕನ್ನಡ ಸಂಘದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಸಾವಿರಾರು ಮಂದಿ ಈ ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಕಾವೇರಿ ಜಲವಿವಾದದಲ್ಲಿ ಎಚ್ಚರಿಕೆಯ ನಡೆ ಇಟ್ಟವರು ಕರುಣಾನಿಧಿ. 1996ರಲ್ಲಿ ಜೆ.ಎಚ್‌.ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಜಲವಿವಾದವನ್ನು ಸ್ನೇಹಮಯವಾಗಿ ಬಗೆಹರಿಸಲು ಎರಡು ರಾಜ್ಯಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ದೆಹಲಿಯಲ್ಲಿ ಎರಡು ದಿನ ಸಭೆ ನಡೆದಿತ್ತು. ಕರ್ನಾಟಕ ಹಾಗೂ ತಮಿಳುನಾಡಿನ ಪ್ರಮುಖರು ಪಾಲ್ಗೊಂಡಿದ್ದರು. ‘ಮಾತುಕತೆಯ ಮೂಲಕವೇ ವಿವಾದ ಬಗೆಹರಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ವಿವಾದ ಇತ್ಯರ್ಥಕ್ಕೆ ಕರುಣಾನಿಧಿ ಮುಕ್ತ ಮನಸ್ಸು ಹೊಂದಿದ್ದರು’ ಎಂದು ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ನೆನಪಿಸಿಕೊಂಡರು.

ಪಟೇಲರನ್ನು ಭೇಟಿಯಾಗಲು ಕರುಣಾನಿಧಿ ಬೆಂಗಳೂರಿಗೆ ಬಂದಿದ್ದರು. ಆಗ ಪಟೇಲರು, ‘ಮೊದಲು ಕಾಫಿ ಕುಡಿಯಿರಿ. ಮತ್ತೆ ಮಾತುಕತೆ ನಡೆಸೋಣ’ ಎಂದಿದ್ದರು. ಆಗ ಕರುಣಾನಿಧಿ, ‘ನನಗೆ ಕಾಫಿ– ಗೀಫಿ ಏನೂ ಬೇಡ. ಕಾವೇರಿ ನೀರು ಕೊಡಿ ಸಾಕು’ ಎಂದು ಹೇಳಿದ್ದರು ಎಂದು ಹಿರಿಯರೊಬ್ಬರು ನೆನಪಿಸಿಕೊಂಡರು.

ಬೆಂಗಳೂರು ನೆಚ್ಚಿನ ತಾಣ: ಕರುಣಾನಿಧಿ ಹೃದಯದಲ್ಲಿ ಬೆಂಗಳೂರು ವಿಶೇಷ ಸ್ಥಾನ ಪಡೆದಿತ್ತು. ಅವರ ಪುತ್ರಿ ಸೆಲ್ವಿ ಕುಟುಂಬ ಇಲ್ಲೇ ನೆಲೆಸಿದೆ. ಈ ನಗರದ ಮೇಲಿನ ಪ್ರೀತಿಗೆ ಇದೊಂದೇ ಕಾರಣ ಅಲ್ಲ; ಇಲ್ಲಿನ ಹವಾಮಾನವೂ ಅವರಿಗೆ ಇಷ್ಟವಾಗಿತ್ತು. ‘ರಜಾದಿನಗಳಲ್ಲಿ ಕರುಣಾನಿಧಿ ಅವರು ಮಗಳ ಮನೆಗೆ ಬರುತ್ತಿದ್ದರು. ಇಲ್ಲಿನ ವಾತಾವರಣ ಹಿಡಿಸಿತ್ತು. ಇಲ್ಲಿ ಉಳಿಯಲು ಇಷ್ಟಪಡುತ್ತಿದ್ದರು’ ಎಂದು ಡಿಎಂಕೆಯ ಹಿರಿಯ ನಾಯಕರೊಬ್ಬರು ಹೇಳಿದರು.

ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗಲೂ ವಿಶ್ರಾಂತಿಗಾಗಿ ಬೆಂಗಳೂರಿಗೆ ಬರುತ್ತಿದ್ದರು. ಮಗಳ ಮಾಲೀಕತ್ವದ ಫಾರ್ಮ್‌ ಹೌಸ್‌ನಲ್ಲಿ ಉಳಿಯುತ್ತಿದ್ದರು. 2010ರಲ್ಲಿ ಅವರು ಅನಾರೋಗ್ಯಕ್ಕೆ ಈಡಾಗಿದ್ದರು. ಆಗ ಕುಟುಂಬ ಸದಸ್ಯರು ವಿಶ್ರಾಂತಿಗಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.

2007ರಲ್ಲಿ ಅವರು ‘ಶ್ರೀರಾಮ’ನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಇಲ್ಲಿನ ಸೆಲ್ವಿ ಮನೆ ಮೇಲೆ ದಾಳಿ ನಡೆದಿತ್ತು.

ತಮಿಳು ಪ್ರೀತಿ: ನಟ ರಾಜ್‌ ಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿಕೊಂಡು ಹೋಗಿದ್ದ. ಎಸ್‌.ಎಂ.ಕೃಷ್ಣ ಹಾಗೂ ಕರುಣಾನಿಧಿ ಸರ್ಕಾರಕ್ಕೆ ಸಂಕಷ್ಟದ ಸಮಯವಾಗಿತ್ತು. ಜನರ ಸಂಶಯಗಳನ್ನು ನಿವಾರಿಸುವುದೇ ಎರಡು ಸರ್ಕಾರಗಳಿಗೆ ದೊಡ್ಡ ಸವಾಲಾಗಿತ್ತು. ಇಂಥ ವೇಳೆಯಲ್ಲಿ ಬೆಂಗಳೂರಿನಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಕೃಷ್ಣ ಅವರ ಮಾತು ಬಹುತೇಕ ಇಂಗ್ಲಿಷ್‌ನಲ್ಲಿತ್ತು. ಕರುಣಾನಿಧಿ ತಮಿಳಿನಲ್ಲೇ ಮಾತನಾಡಿದ್ದರು.
***
ಇದನ್ನೂ ಓದಿರಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿಗೆ ಉಂಟು ರಾಮನಗರದ ನಂಟು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !