ಕಾರವಾರ: 316 ಕ್ಯಾನ್ಸರ್ ರೋಗಿಗಳು

7
ಟಾಟಾ ಮೆಮೊರಿಯಲ್ ಆಸ್ಪತ್ರೆಯ ಅಧ್ಯಯನ ವರದಿಯಲ್ಲಿ ಬಹಿರಂಗ

ಕಾರವಾರ: 316 ಕ್ಯಾನ್ಸರ್ ರೋಗಿಗಳು

Published:
Updated:

ಕಾರವಾರ: ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಟ್ಟು 316 ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಮುಂಬೈನ ಟಾಟಾ ಮೆಮೊರಿಯಲ್ ಆಸ್ಪತ್ರೆ ನಡೆಸುತ್ತಿರುವ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ. ಇವರಲ್ಲಿ 187 ಮಹಿಳೆಯರು, 129 ಪುರುಷರು ಸೇರಿದ್ದಾರೆ.

ಈ ಅಂಕಿ– ಅಂಶಗಳು ಇತರ ನಗರಗಳಿಗೆ ಹೋಲಿಸಿದರೆ ಅತಿ ಕಡಿಮೆಯಾಗಿದೆ. ವರದಿಯಲ್ಲಿ ಉಲ್ಲೇಖಿಸಲಾಗಿರುವ 17 ನಗರಗಳ ಪೈಕಿ ಕಾರವಾರ 16ನೇ ಸ್ಥಾನದಲ್ಲಿದೆ.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಮನವಿ ಮೇರೆಗೆ ಈ ವರದಿ ಸಿದ್ಧಪಡಿಸಲಾಗುತ್ತಿದೆ. 2010ರಿಂದ 2013ರವರೆಗೆ ನಡೆಸಿದ ಅಧ್ಯಯನದ ಮಧ್ಯಂತರ ವರದಿ ಇದಾಗಿದೆ. ಟಾಟಾ ಮೆಮೊರಿಯಲ್ ಆಸ್ಪತ್ರೆಯ ನಾಲ್ವರು ತಜ್ಞ ವೈದ್ಯರು, ಸ್ಥಳೀಯ ವೈದ್ಯಕೀಯ ವ್ಯವಸ್ಥೆಯ ನೆರವಿನೊಂದಿಗೆ ವಿವಿಧ ಹಳ್ಳಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧ 26 ಪುಟಗಳ ವಿಸ್ತೃತ ವರದಿಯನ್ನು ತಂಡದ ಮುಖ್ಯಸ್ಥ ಡಾ. ಬಿ.ಗಣೇಶ, ಮಾರ್ಚ್‌ನಲ್ಲಿಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.

ರೋಗಿಗಳ ಪೈಕಿ ಮಹಿಳೆಯರಲ್ಲಿ 25ರಿಂದ 54 ವಯೋಮಾನದವರು, ಪುರುಷರಲ್ಲಿ 60ರಿಂದ 64ರ ನಡುವಿನ ವಯಸ್ಸಿನವರು ಹೆಚ್ಚಿದ್ದಾರೆ. ಪುರುಷರಲ್ಲಿ ಬಾಯಿ, ನಾಲಿಗೆ, ಶ್ವಾಸಕೋಶ, ಅನ್ನನಾಳ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿವೆ. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠ ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ಅಧಿಕವಾಗಿವೆ. 14 ವರ್ಷದೊಳಗಿನ ಆರು ಮಕ್ಕಳಲ್ಲಿ ರೋಗ ಕಂಡುಬಂದಿದೆ ಎಂದು ಹೇಳಿದೆ.

ಅನೇಕರು ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡವರಿದ್ದಾರೆ. ಸ್ಥಳೀಯ ಹಾಗೂ ಹೊರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆದವರೂ ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ರೋಗಿಗಳು ಚಿಕಿತ್ಸೆ ಪಡೆದಿರುವ 28 ಆಸ್ಪತ್ರೆಗಳ ಹೆಸರುಗಳನ್ನು ದಾಖಲಿಸಲಾಗಿದೆ.

ಫಿನ್‌ಲ್ಯಾಂಡ್, ಶಾಂಘೈ, ಕನೆಕ್ಟಿಕಟ್, ದೆಹಲಿ, ಚೆನ್ನೈ, ಬೆಂಗಳೂರು ನಗರಗಳಿಗೆ ಹೋಲಿಸಿದರೆ ಕಾರವಾರದಲ್ಲಿ ರೋಗಿಗಳ ಪ್ರಮಾಣ ಕಡಿಮೆ ಇದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಕಾರವಾರ ತಾಲ್ಲೂಕಿನಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದ ವಿಕಿರಣದಿಂದಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಎಲ್ಲಿ, ಎಷ್ಟು ರೋಗಿಗಳು?: ವರದಿಯ ಪ್ರಕಾರ ಕಾರವಾರ ತಾಲ್ಲೂಕಿನ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ 55 ಮಹಿಳೆಯರು ಹಾಗೂ 40 ಪುರುಷರಲ್ಲಿ ಕ್ಯಾನ್ಸರ್‌ ಇದೆ. ಪಟ್ಟಿಯಲ್ಲಿ ಮಿಜೋರಾಂನ ರಾಜಧಾನಿ ಐಜ್ವಾಲ್‌ ಮೊದಲ ಸ್ಥಾನದಲ್ಲಿದ್ದು, 189 ಜನರಿಗೆ ಕ್ಯಾನ್ಸರ್ ದೃಢಪಟ್ಟಿದೆ. ಉಳಿದಂತೆ, ದೆಹಲಿಯಲ್ಲಿ 149, ಚೆನ್ನೈನಲ್ಲಿ 116, ಮುಂಬೈನಲ್ಲಿ 113, ಬೆಂಗಳೂರಿನಲ್ಲಿ 105 ಜನರಿಗೆ ಕ್ಯಾನ್ಸರ್ ಪತ್ತೆಯಾಗಿದೆ ಎಂದು ತಿಳಿಸಿದೆ.

ಭಯ ಪಡಬೇಕಿಲ್ಲ: ಜಿಲ್ಲಾಧಿಕಾರಿ

‘ತಾಲ್ಲೂಕಿನ ಜನರು ಭಯಪಡುವ ರೀತಿಯ ಮಾಹಿತಿಗಳು ವರದಿಯಲ್ಲಿಲ್ಲ. ನಮ್ಮ ದೇಶದ ಬೇರೆ ನಗರಗಳಿಗೆ ಹೋಲಿಸಿದರೆ, ಇಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕಡಿಮೆಯೇ ಇದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕ್ಯಾನ್ಸರ್ ಪೀಡಿತರ ಕುರಿತು ಈವರೆಗೆ ಸಮಗ್ರ ಮಾಹಿತಿ ಲಭ್ಯವಿರಲಿಲ್ಲ. ಟಾಟಾ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ನವರು ಸಿದ್ಧಪಡಿಸುತ್ತಿರುವ ಈ ವರದಿಯು ಪ್ರಾಥಮಿಕ ಮಾಹಿತಿಗಳನ್ನು ಒಳಗೊಂಡಿದೆ. ಸಮಗ್ರ ವರದಿ ಸಲ್ಲಿಕೆಯಾದ ಬಳಿಕ ಒಟ್ಟು ರೋಗಿಗಳ ಸಂಖ್ಯೆ ಸ್ಪಷ್ಟವಾಗಿ ತಿಳಿಯಲಿದೆ’ ಎಂದು ತಿಳಿಸಿದರು.

ಸಂಸ್ಥೆಯವರು ಜಿಲ್ಲೆಯ ಉಳಿದ ತಾಲ್ಲೂಕುಗಳ ಅಧ್ಯಯನ ವರದಿಯನ್ನೂ ಸಿದ್ಧಪಡಿಸುತ್ತಿದ್ದಾರೆ. ಅದು ಈ ವರ್ಷದ ಕೊನೆಗೆ ಪೂರ್ಣಗೊಳ್ಳಲಿದೆಎಂದೂ ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿನಿಧಿ ಡಾ.ಚೇತನಾ ಉಪಸ್ಥಿತರಿದ್ದರು.

ಮುಖ್ಯಾಂಶಗಳು

* ಜಿಲ್ಲಾಡಳಿತಕ್ಕೆ ಮಧ್ಯಂತರ ವರದಿ ಸಲ್ಲಿಕೆ

* ಬಾಯಿ, ನಾಲಿಗೆ, ಶ್ವಾಸಕೋಶ ಕ್ಯಾನ್ಸರ್ ಹೆಚ್ಚಳ

* ಈ ವರ್ಷದ ಕೊನೆಯಲ್ಲಿ ಸಂಪೂರ್ಣ ವರದಿ ಸಿದ್ಧ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !