ಮಂಗಳವಾರ, ಜನವರಿ 28, 2020
29 °C
ನಗರದಲ್ಲಿ ವಾಹನ ಸಂಚಾರ ವಿರಳ, ಎಲ್ಲೆಡೆ ಪೊಲೀಸ್ ಬಂದೋಬಸ್ತ್

‘ಸಾಗರಮಾಲಾ’ ಯೋಜನೆ ಖಂಡಿಸಿ ಕಾರವಾರ ಬಂದ್‌: ಅಷ್ಟಕ್ಕೂ ಯಾಕೆ ವಿರೋಧ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಸಾಗರಮಾಲಾ’ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ವಿಸ್ತರಣೆ ಕಾಮಗಾರಿಯನ್ನು ವಿರೋಧಿಸಿ ಮೀನುಗಾರರು ಕರೆ ನೀಡಿರುವ ಕಾರವಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಡೀ ನಗರದಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಮುಚ್ಚಿದ್ದು, ನಗರವಿಡೀ ಸ್ತಬ್ಧಗೊಂಡಿದೆ. ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ನಗರದ ಎಲ್ಲೆಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಗರದಿಂದ ಬೇರೆ ಊರುಗಳಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಬೆಳಿಗ್ಗೆ 8ರವರೆಗೆ ಸಂಚರಿಸಿವೆ. ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಅವುಗಳ ಸಂಚಾರವನ್ನೂ ನಿಲ್ಲಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಸಂಜೆ 4ರ ನಂತರ ಬಸ್ ಸಂಚಾರ ಆರಂಭಿಸುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಆಟೊ ರಿಕ್ಷಾಗಳು, ಟೆಂಪೊ ಸಂಚಾರವೂ ಸ್ಥಗಿತವಾಗಿದೆ. ಖಾಸಗಿ ವಾಹನಗಳ ಓಡಾಟವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸರ್ಕಾರಿ ಶಾಲಾ ಕಾಲೇಜುಗಳು ತೆರೆದಿದ್ದು, ಯೋಜನಾ ಪ್ರದೇಶದ ಸಮೀಪದ ಕೆಲವು ಖಾಸಗಿ ಶಾಲೆಗಳಿಗೆ ಆಡಳಿತ ಮಂಡಳಿಯವರು ರಜೆ ಪ್ರಕಟಿಸಿದ್ದಾರೆ. 

ಯೋಜನೆಯ ಕಾಮಗಾರಿಯನ್ನು ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಧರಣಿಗೆ ಗುರುವಾರ ನಾಲ್ಕನೇ ದಿನವಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದು, ಯೋಜನೆಯಿಂದ ಹಿಂದೆ ಸರಿಯುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಕಾರವಾರ ಬಂದ್‌ಗೆ ವಿವಿಧ ಸ್ಥಳೀಯ ಸಂಘಟನೆಗಳು, ಹಾಸನದಿಂದ ಕಾರವಾರಕ್ಕೆ ಬಂದಿರುವ ರೈತ ಸಂಘದ (ನಂಜುಂಡಸ್ವಾಮಿ ಬಣ) ಪದಾಧಿಕಾರಿಗಳು, ಸದಸ್ಯರು ಬೆಂಬಲ ಸೂಚಿಸಿದ್ದಾರೆ.

ಏನಿದು ಯೋಜನೆ?: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಾಗರಮಾಲಾ’ದ ಅಡಿಯಲ್ಲಿ ಕಾರವಾರದ ವಾಣಿಜ್ಯ ಬಂದರಿನ ವಿಸ್ತರಣೆ ಮಾಡಲಾಗುತ್ತದೆ. ಮೊದಲ ಹಂತದ ಕಾಮಗಾರಿಗಳಿಗೆ ₹ 276 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ 880 ಮೀಟರ್ ಉದ್ದದ ಒಂದು ಹೊಸ ಅಲೆ ತಡೆಗೋಡೆ ನಿರ್ಮಾಣ ಹಾಗೂ ಹಾಲಿ ಇರುವ ಅಲೆತಡೆಗೋಡೆಯನ್ನು 125 ಮೀಟರ್ ವಿಸ್ತರಿಸಲಾಗುತ್ತದೆ. ಜೊತೆಗೇ ಜೆಟ್ಟಿಗಳ ವಿಸ್ತರಣೆಯೂ ಆಗಲಿದೆ. ಈ ಮೂಲಕ ಬೃಹತ್ ಹಡಗುಗಳು ಲಂಗರು ಹಾಕಲು ಅವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.

ಯಾಕೆ ವಿರೋಧ?: ಕಾರವಾರದ ಮೀನುಗಾರಿಕಾ ಬಂದರಿಗೆ ವಾಣಿಜ್ಯ ಬಂದರನ್ನು ದಾಟಿಕೊಂಡೇ ಸಾಗಬೇಕು. ಬಂದರು ವಿಸ್ತರಣೆಯಾದರೆ ಮೀನುಗಾರಿಕಾ ದೋಣಿಗಳಿಗೆ ಸಂಚರಿಸಲು ಸಮಸ್ಯೆಯಾಗಬಹುದು. ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ಮಾಡುತ್ತಿರುವ ಜಾಗದಲ್ಲೇ ಅಲೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂಬುದು ಮೀನುಗಾರರ ಆತಂಕವಾಗಿದೆ. ಜೊತೆಗೇ ಅಲೆ ತಡೆಗೋಡೆಯಿಂದ ಕಾರವಾರದ ಏಕೈಕ ಕಡಲತೀರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ವಾದವೂ ಹಲವರದ್ದಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು