ಕಾರವಾರ: 10, 11ಕ್ಕೆ ಮೆರವಣಿಗೆ, ಬಹಿರಂಗ ಘೋಷಣೆಗೆ ನಿರ್ಬಂಧ

7

ಕಾರವಾರ: 10, 11ಕ್ಕೆ ಮೆರವಣಿಗೆ, ಬಹಿರಂಗ ಘೋಷಣೆಗೆ ನಿರ್ಬಂಧ

Published:
Updated:

ಕಾರವಾರ: ಟಿಪ್ಪು ಸುಲ್ತಾನ್ ಜಯಂತಿಯ ಆಚರಣೆಯ ವೇಳೆ ಯಾವುದೇ ಮೆರವಣಿಗೆ, ಬಹಿರಂಗ ಘೋಷಣೆ ಕೂಗುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

ರಾಜ್ಯದಾದ್ಯಂತ ಟಿಪ್ಪು ಜಯಂತಿಯನ್ನು ಸರಳವಾಗಿ, ಯಾವುದೇ ರೀತಿಯ ಮೆರವಣಿಗೆ ಇಲ್ಲದೇ ಆಚರಿಸಲು ಸರ್ಕಾರ ಆದೇಶಿಸಿದೆ. ಈ ಹಿಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಘಟನಾವಳಿಗಳು, ಪ್ರಸ್ತುತ ಟಿಪ್ಪು ಜಯಂತಿ ವಿಚಾರದಲ್ಲಿ ಕೇಳಿಬರುತ್ತಿರುವ ವಿರೋಧಾಭಾಸಗಳ ಹಿನ್ನೆಲೆಯಲ್ಲಿ ಮತ್ತು ಸೂಕ್ಷ್ಮ ಸಂದರ್ಭಕ್ಕೆ ಅನುಸಾರವಾಗಿ ಶಾಂತಿ ಪಾಲನೆಯನ್ನು ಕಾಪಾಡುವುದು ಅತಿ ಅವಶ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಟಿಪ್ಪು ಜಯಂತಿ ಆಚರಣೆ ಮಾಡುವ ಸಮಯದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ನ.10ರ ಬೆಳಿಗ್ಗೆ 6ರಿಂದ ನ.11ರ ಸಂಜೆ 6ರವರೆಗೆ ಕಲಂ 34 (3), ಕರ್ನಾಟಕ ಪೊಲೀಸ್ ಆ್ಯಕ್ಟ್ 1963 ಕಾಯ್ದೆಯಂತೆ, ಒಳಾಂಗಣ ಕಾರ್ಯಕ್ರಮ ಮತ್ತು ದೈನಂದಿನ ಅವಶ್ಯಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಮೆರವಣಿಗೆ, ರ‍್ಯಾಲಿ, ಪ್ರತಿಭಟನೆಯನ್ನು ಮತ್ತು ಬಹಿರಂಗ ಘೋಷಣೆ ಕೂಗುವುದನ್ನು ನಿರ್ಬಂಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಮುಖಂಡರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಪಕ್ಷದ ಕಚೇರಿ ಮುಂದೆ ಸೇರಿದ ನೂರಾರು ಕಾರ್ಯಕರ್ತರು ಮೆರವಣಿಗೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಸೇರಿದರು. ಮನವಿ ಸ್ವೀಕರಿಸಲು ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅವರಿಗೆ ಪ್ರತಿಭಟನಾಕಾರರು ಆಚರಣೆಗೆ ತಮ್ಮ ವಿರೋಧವಿದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಪ್ರಮುಖರಾದ ಸುನಿಲ್‌ ಹೆಗಡೆ, ಪ್ರಮೋದ ಹೆಗಡೆ, ವಿನೋದ ಪ್ರಭು, ಎಂ.ಜಿ. ನಾಯ್ಕ, ಮನೋಜ ಭಟ್, ಭಾಸ್ಕರ‌ ನಾರ್ವೇಕರ, ನಾಗರಾಜ ನಾಯಕ, ಜಗದೀಶ ನಾಯಕ ಮೊಗಟಾ, ವಿ.ಡಿ.ಹೆಗಡೆ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !