ಶುಕ್ರವಾರ, ಏಪ್ರಿಲ್ 3, 2020
19 °C
ಆಯ್ಕೆ ಸಮಿತಿ ಸಭೆ ನಡೆಸುವಂತೆ ಯುಪಿಎಸ್‌ಸಿ ಕಾರ್ಯದರ್ಶಿಗೆ ಸಿ.ಎಸ್‌ ಪತ್ರ

11 ಐಎಎಸ್‌ ಹುದ್ದೆಗೆ 24 ಹೆಸರು ಶಿಫಾರಸು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: 2016ನೇ ಸಾಲಿನ 11 ಐಎಎಸ್‌ ಹುದ್ದೆಗಳಿಗೆ ಪದೋನ್ನತಿ ನೀಡಲು 24 ಕೆಎಎಸ್‌ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.

ಪಟ್ಟಿಯನ್ನು ಯುಪಿಎಸ್‌ಸಿ ಕಾರ್ಯದರ್ಶಿಗೆ ರವಾನಿಸಿರುವ ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಟಿ.ಎಂ. ವಿಜಯಭಾಸ್ಕರ್‌, 2015ರ ಸಾಲಿನಲ್ಲಿ ನೀಡಿದ ಐಎಎಸ್‌ ಪದೋನ್ನತಿ ಪಟ್ಟಿಗೆ ಸಂಬಂಧಿಸಿದಂತೆ ‘ರಿವೈಸ್ಡ್ ಸೆಲೆಕ್ಷನ್ ಕಮಿಟಿ ಮೀಟಿಂಗ್‌’ಗೆ (ಆರ್‌ಎಸ್‌ಸಿಎಂ) ಕಾಯುವ ಬದಲು, 2016ನೇ ಸಾಲಿನ ಪದೋನ್ನತಿಗೆ ಆಯ್ಕೆ ಸಮಿತಿ ಸಭೆ ಆಯೋಜಿಸುವಂತೆ ಮನವಿ ಮಾಡಿದ್ದಾರೆ.

‘1998 ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ 2016ರ ಜೂನ್ 21ರಂದು ಹೈಕೋರ್ಟ್‌ ನೀಡಿರುವ ತೀರ್ಪು ಅನುಷ್ಠಾನದಿಂದ ಆ ಸಾಲಿನ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಬದಲಾಗುತ್ತದೆ. ಇದರಿಂದ 2015ರ ಸಾಲಿನ ಐಎಎಸ್‌ ಬಡ್ತಿಗೆ ಪರಿಗಣಿಸಿದ್ದ 56 ಅಧಿಕಾರಿಗಳ ಅರ್ಹತಾ ಪಟ್ಟಿಯಲ್ಲಿ ಏನಾದರೂ ಬದಲಾವಣೆಯಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಇದೇ ಜ. 31ರಂದು ರಾಜ್ಯ ಸರ್ಕಾರಕ್ಕೆ ಯುಪಿಎಸ್‌ಸಿ ಪತ್ರ ಬರೆದಿತ್ತು.

ಆ ಪತ್ರಕ್ಕೆ ಸ್ಪಷ್ಟೀಕರಣ ನೀಡಿರುವ ಮುಖ್ಯ ಕಾರ್ಯದರ್ಶಿ, ‘2015ರ ಐಎಎಸ್‌ ಪದೋನ್ನತಿ ಪಟ್ಟಿಯ ಪರಿಷ್ಕರಣೆ, 2016ನೇ ಸಾಲಿಗೆ ಶಿಫಾರಸು ಮಾಡಿರುವ ಅಧಿಕಾರಿಗಳ ಜ್ಯೇಷ್ಠತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೆ, 2016ರಲ್ಲಿ ಆಯ್ಕೆಗೆ ಲಭ್ಯವಿರುವ ಹುದ್ದೆಗಳ ಸಂಖ್ಯೆ ಕೂಡಾ ಕಡಿಮೆಯಾಗುವುದಿಲ್ಲ. ಹಾಗೇನಾದರೂ ಆದರೆ 1998ನೇ ಬ್ಲಾಕ್‌ನ ಹುದ್ದೆಗಳು ಮುಂದಿನ ಬ್ಯಾಚ್‌ಗಳಿಗೆ ಲಭ್ಯ ಆಗಬಹುದು’ ಎಂದಿದ್ದಾರೆ.

2015ನೇ ಸಾಲಿನಲ್ಲಿ ಸರ್ಕಾರ ಐಎಎಸ್‌ಗೆ ಬಡ್ತಿಗೆ 56 ಅಧಿಕಾರಿಗಳ ಹೆಸರು ಶಿಫಾರಸು ಮಾಡಿತ್ತು. ಅದರಲ್ಲಿ, 18 ಅಧಿಕಾರಿಗಳು 1998ನೇ ಬ್ಯಾಚಿನ ಕೆಎಎಸ್‌ ಅಧಿಕಾರಿಗಳು. ನಂತರದ 17 ಅಧಿಕಾರಿಗಳು 1999, ನಂತರದ 18 ಅಧಿಕಾರಿಗಳು 2004ನೇ ಬ್ಯಾಚಿನವರು. ಕ್ರಮ ಸಂಖ್ಯೆ 54ನೇ ಅಧಿಕಾರಿ 2007, 55ನೇ ಅಧಿಕಾರಿ 1999 ಹಾಗೂ 56ನೇ ಕ್ರಮ ಸಂಖ್ಯೆಯಲ್ಲಿದ್ದ ಅಧಿಕಾರಿ 2009ನೇ ಬ್ಯಾಚಿಗೆ ಸೇರಿದವರಾಗಿದ್ದರು.

ಈ ಪೈಕಿ, 34 ಅಧಿಕಾರಿಗಳು ಈಗಾಗಲೇ ಐಎಎಸ್‌ ಬಡ್ತಿ ಪಡೆದಿದ್ದಾರೆ. ಆದರೆ, ಹೈಕೋರ್ಟ್‌ ನೀಡಿರುವ ತೀರ್ಪು 1998ನೇ ಬ್ಯಾಚಿನ ಮೇಲೆ ಮಾತ್ರ ಪರಿಣಾಮ ಬೀರಿದೆ. ತೀರ್ಪು ಜಾರಿಯಿಂದ 11 ಕೆಎಎಸ್‌ ಅಧಿಕಾರಿಗಳು ಜ್ಯೇಷ್ಠತಾ ಪಟ್ಟಿಯಿಂದ ಹೊರ ಹೋಗುತ್ತಾರೆ (ಐಎಎಸ್‌ನಿಂದ ಹಿಂಬಡ್ತಿ). ಹೀಗೆ, ಹೊರ ಹೋಗುವುದರಿಂದ ಜ್ಯೇಷ್ಠತೆ ಬದಲಾಗಿ ಅದೇ ಸಾಲಿನ ಬೇರೆ 11 ಅಧಿಕಾರಿಗಳು ಆ ಸ್ಥಾನಕ್ಕೆ ಬರುತ್ತಾರೆ. ಅಲ್ಲದೆ, 1999 ಮತ್ತು ನಂತರದ ಸಾಲುಗಳ ಕೆಎಎಸ್‌ ಜ್ಯೇಷ್ಠತೆ ಬದಲಾಗುವುದಿಲ್ಲ ಎಂದೂ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿ ವಿವರಿಸಿದ್ದಾರೆ.

ಶಿಫಾರಸುಗೊಂಡ ಪಟ್ಟಿಯಲ್ಲಿರುವವರು
ಎಂ.ವಿ. ಚಂದ್ರಕಾಂತ್, ರಾಜಮ್ಮ ಎ. ಚೌಡಾರೆಡ್ಡಿ, ಝಹೇರಾ ನಸೀಂ (ಎಲ್ಲರೂ 1999 ಬ್ಯಾಚ್‌), ಜಿ.ಎಲ್. ಪ್ರವೀಣ್‌ಕುಮಾರ್‌, ವಿಜಯಮಹಾಂತೇಶ್ ಬಿ. ದಾನಮ್ಮನವರ, ಗೋವಿಂದ ರೆಡ್ಡಿ, ಪ್ರಭುಲಿಂಗ ಕವಳಿ ಕಟ್ಟಿ, ಎಂ.ಎಲ್‌. ವೈಶಾಲಿ, ಎಸ್‌. ರಮ್ಯಾ, ಎಸ್‌.ಎನ್‌. ಬಾಲಚಂದ್ರ, ಡಿ. ಭಾರತಿ, ಎ.ಎಂ. ಯೋಗೇಶ್‌, ಪಿ.ಆರ್‌. ಶಿವಪ್ರಸಾದ್‌, ಜಿ.ಎಂ. ಗಂಗಾಧರಸ್ವಾಮಿ, ಕೆ. ವಿದ್ಯಾಕುಮಾರಿ, ಕೆ. ನಾಗೇಂದ್ರಪ್ರಸಾದ್‌, ಕುಮಾರ, ಟಿ. ವೆಂಕಟೇಶ್‌, ಕೆ.ಎಂ. ಗಾಯತ್ರಿ, ಬಿ.ಆರ್‌. ಪೂರ್ಣಿಮಾ, ಜಯವಿಭವಸ್ವಾಮಿ (ಎಲ್ಲರೂ 2004 ಬ್ಯಾಚ್‌), ಸಂಗಪ್ಪ (2007 ಬ್ಯಾಚ್‌), ಎನ್‌.ಆರ್‌. ನಾಗರಾಜು (1999 ಬ್ಯಾಚ್‌), ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ (2009 ಬ್ಯಾಚ್‌)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು