ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಮಾಧ್ಯಮ ಶಿಕ್ಷಣಕ್ಕೆ ವಿರೋಧ

ಗೋಕಾಕ್‌ ಚಳವಳಿ ಮಾದರಿ ಹೋರಾಟ: ಸಾಹಿತಿಗಳು, ಶಿಕ್ಷಣತಜ್ಞರ ಎಚ್ಚರಿಕೆ
Last Updated 19 ಡಿಸೆಂಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಒಂದು ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣವನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣತಜ್ಞರು ಹಾಗೂ ಕನ್ನಡಪರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ಗೋಕಾಕ್‌ ಚಳವಳಿ ಮಾದರಿ ಹೋರಾಟಕ್ಕೂ ಸಿದ್ಧ ಎಂದೂ ಘೋಷಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪಾಲ್ಗೊಂಡವರೆಲ್ಲ ಕನ್ನಡ ಮಾಧ್ಯಮದ ಪರವಾಗಿ ಒಕ್ಕೊರಲ ಧ್ವನಿ ಎತ್ತಿದರು. ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಎಸ್‌.ಎಲ್‌.ಭೈರಪ್ಪ, ಚಂದ್ರಶೇಖರ ಪಾಟೀಲ, ಸಿದ್ದಲಿಂಗಯ್ಯ, ಪ್ರಧಾನ ಗುರುದತ್‌, ಕಾಳೇಗೌಡ ನಾಗವಾರ ಹಾಗೂ ಕಸಾಪ ಅಧ್ಯಕ್ಷ ಮನು ಬಳಿಗಾರ ಸೇರಿದಂತೆ 32 ಜನ ಪತ್ರಿಕಾಗೋಷ್ಠಿ ನಡೆಸಿ, ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ವಿವರಿಸಿದರು.

‘ಕನ್ನಡದ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರ ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು’ ಎಂದು ಕಂಬಾರರು ಒತ್ತಾಯಿಸಿದರು. ‘ತಮಿಳುನಾಡಿನ ಡಿಎಂಕೆ ಬಿಟ್ಟರೆ ಬೇರೆ ಯಾವ ಪಕ್ಷವೂ ಸ್ಥಳೀಯ ಭಾಷೆಯನ್ನು ಉಳಿಸಿಕೊಳ್ಳಲು ಯತ್ನ ಮಾಡುತ್ತಿಲ್ಲ’ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

‘ಹಿಂದೆ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಕಾಂಗ್ರೆಸ್‌ ಸರ್ಕಾರ ಇದ್ದಾಗ, ಕೇಂದ್ರದ ಹಿಂದಿ ಹೇರಿಕೆ ಯತ್ನಕ್ಕೆ ರಾಜ್ಯ ತಲೆಯಾಡಿಸುತ್ತಿತ್ತು’ ಎಂದು ಅವರು ಹೇಳಿದರು.

‘ಇಂಗ್ಲಿಷ್‌ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರಕ್ಕೆಕಾನೂನು ಸ್ವರೂಪ ಸಿಕ್ಕರೆ ಕನ್ನಡ ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಚಂಪಾ ಆತಂಕ ವ್ಯಕ್ತಪಡಿಸಿದರು.‌ ಕಾಳೇಗೌಡ ನಾಗಾವಾರ, ‘ವೈದ್ಯರು, ಮನಃಶಾಸ್ತ್ರಜ್ಞರು, ಶಿಕ್ಞಣತಜ್ಞರು ತಿಳಿಸುವ ಪ್ರಕಾರ ಎಳೆಯ ಮಕ್ಕಳು ಪರಭಾಷೆಯಲ್ಲಿ ಕಲಿತರೆ ಪ್ರತಿಭೆ ಅರಳುವುದಿಲ್ಲ. ಹೀಗಾಗಿ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಬೇಕು’ ಎಂದು ಒತ್ತಾಯಿಸಿದರು.

’ಶಿಕ್ಷಣ ಮಾಧ್ಯಮದ ವಿಷಯವಾಗಿ ಸರ್ಕಾರ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ’ ಎಂದು ಸಿದ್ದಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮನು ಬಳಿಗಾರ, ‘ಕನ್ನಡಿಗರ ಭಾವನೆ ಅರ್ಥಮಾಡಿಕೊಂಡು ಮುಖ್ಯಮಂತ್ರಿಯವರು ತಮ್ಮ ನಿರ್ಧಾರವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು. ‘ಒಂದು ಭಾಷೆಯನ್ನಾಗಿ ಇಂಗ್ಲಿಷ್‌ ಕಲಿಸಲು ನಮ್ಮ ವಿರೋಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಭೆಯ ಮೂರು ನಿರ್ಣಯಗಳು

* ಯಾವುದೇ ಕಾರಣಕ್ಕೂ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಆರಂಭವಾಗಕೂಡದು

* ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ಅನ್ನು ಒಂದು ಭಾಷೆಯಾಗಿ, ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಳವಡಿಸಿದರೆ ವಿರೋಧವಿಲ್ಲ

* ಅಧಿವೇಶನ ಮುಗಿಯುವ ಮುನ್ನವೇ ಸರ್ಕಾರದ ಘೋಷಣೆ ವಾಪಸ್ ಪಡೆಯದಿದ್ದರೆ ಮುಖ್ಯಮಂತ್ರಿ ಬಳಿಗೆ ಕಸಾಪ ನಿಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT