ಶನಿವಾರ, ಜೂನ್ 19, 2021
28 °C

ವಕೀಲರ ನಿರ್ಣಯಕ್ಕೆ ಅತೃಪ್ತಿ; ಪ್ರಕರಣ ಬೆಂಗಳೂರಿಗೆ ವರ್ಗಾಯಿಸುವ ಮೌಖಿಕ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿದ್ದ ನಿರ್ಣಯಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ವಕೀಲರು ಪುನಃ ಇದೇ ರೀತಿ ನಡೆದುಕೊಂಡರೆ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗುವುದು’ ಎಂದು ಮೌಖಿಕವಾಗಿ ಎಚ್ಚರಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ‘ಕೋರ್ಟ್‌ ನಿರ್ದೇಶನ ಇದ್ದರೂ ಅದನ್ನು ಪಾಲಿಸಿಲ್ಲ. ಆರೋಪಿಗಳ ಪರ ವಕೀಲರಿಗೆ ವಕಾಲತ್ತು ಹಾಕಲು ಅಡ್ಡಿ ಮಾಡಿದ ಧಾರವಾಡದ ಘಟನೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಲಿದೆ’ ಎಂದು ಹೇಳಿದೆ.

‘ಆರೋಪಿಗಳಿಗೂ ತಮ್ಮ ಪರ ವಾದ ಮಂಡಿಸುವ ಹಕ್ಕಿದೆ. ಉಗ್ರ ಅಜ್ಮಲ್ ಕಸಾಬ್‌ಗೇ ವಿಚಾರಣೆಯ ಅವಕಾಶ ನೀಡಲಾಗಿತ್ತು. ಅಂತಹುದರಲ್ಲಿ ಹುಬ್ಬಳ್ಳಿ ವಕೀಲರ ಸಂಘದ ಇಂತಹ ನಿರ್ಣಯ ಕಾನೂನುಬಾಹಿರ ಎಂದೇ ಪರಿಗಣಿಸಬೇಕಾಗುತ್ತದೆ. ಹುಬ್ಬಳ್ಳಿ ಕೋರ್ಟ್ ಕಟ್ಟಡವೇನೊ ಅತ್ಯುತ್ತಮವಾಗಿದೆ. ಆದರೆ, ಇಂತಹ ಘಟನೆ ಕಟ್ಟಡಕ್ಕೂ ಶೋಭೆ ತರುವುದಿಲ್ಲ’ ಎಂದು ಕುಟುಕಿದೆ.

ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ವಕೀಲರ ಸಂಘದ ಜೊತೆಗೆ ಮಾತುಕತೆ ನಡೆಸಿ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಮತ್ತು ಸಂಘದ ಪ್ರತಿನಿಧಿಗಳನ್ನು ಹೈಕೋರ್ಟ್‌ಗೆ ಹಾಜರಾಗಲು ಮನವಿ ಮಾಡಲಾಗು
ವುದು’ ಎಂದು ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಗುರುವಾರಕ್ಕೆ (ಫೆ.27) ಮುಂದೂಡಿದೆ.

ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ರದ್ದು ಕೋರಿ ಬಿ.ಟಿ.ವೆಂಕಟೇಶ್ ಸೇರಿದಂತೆ 24 ವಕೀಲರು ಈ ಪಿಐಎಲ್ ಸಲ್ಲಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು