ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,500 ಕೋಟಿ ಮೌಲ್ಯದ ಜಾಗ ಶ್ರೀಹರಿ ಖೋಡೆ ಕುಟುಂಬಕ್ಕೆ, 285 ಎಕರೆ ‘ಕೃಷ್ಣಾರ್ಪಣ’

‘ರಾಸು ಅಭಿವೃದ್ಧಿಗೆ ಕಾದಿರಿಸಿದ ಜಾಗ’
Last Updated 4 ಡಿಸೆಂಬರ್ 2018, 20:26 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ₹1500 ಕೋಟಿ ಮಾರುಕಟ್ಟೆ ಮೌಲ್ಯದ 285 ಎಕರೆ ಕಾವಲ್‌ ಜಾಗವನ್ನು ಉದ್ಯಮಿ ಕೆ.ಎಲ್‌.ಶ್ರೀಹರಿ ಖೋಡೆ ಕುಟುಂಬ ಹಾಗೂ 43 ಮಂದಿಗೆ ವರ್ಗಾವಣೆ ಮಾಡಬೇಕು ಎಂದು ನಗರ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ. ಕಾವಲ್‌ ಗ್ರಾಮದ ಸರ್ವೆ ಸಂಖ್ಯೆ 137ರಲ್ಲಿ 310 ಎಕರೆ 18 ಗುಂಟೆ ಜಮೀನು ಇದ್ದು, ಇದರಲ್ಲಿ 285 ಎಕರೆ 5 ಗುಂಟೆಯನ್ನು ಈ ಕುಟುಂಬಗಳಿಗೆ ವರ್ಗಾವಣೆ ಮಾಡಬೇಕು. ಉಳಿದ 25 ಎಕರೆ 9 ಗುಂಟೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ವಿಶೇಷ ಜಿಲ್ಲಾಧಿಕಾರಿ ಎಸ್‌.ರಂಗಪ್ಪ ಆದೇಶದಲ್ಲಿ ತಿಳಿಸಿದ್ದಾರೆ.

‘ಇದು ಸರ್ಕಾರಿ ಜಾಗ ಎಂದು ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಾಮೇಗೌಡ ಮೂರು ಸಲ ಆದೇಶ ಹೊರಡಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿ ಅಹವಾಲು ಆಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಆದೇಶಿಸಿತ್ತು. 300 ಎಕರೆಗೆ ಗಡಿ ಗುರುತು ಮಾಡಿ ಸರ್ಕಾರದ ಸ್ವಾಧೀನಕ್ಕೆ ಪಡೆಯಲು ಜಿಲ್ಲಾಡಳಿತ ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ ವಿಧಾನಸಭಾ ಚುನಾವಣೆ ಬಂದ ಕಾರಣ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ರಂಗಪ್ಪ ಅವರು ವ್ಯತಿರಿಕ್ತ ಆದೇಶ ಹೊರಡಿಸಿದ್ದಾರೆ. ಅವರ ನಡೆ ಅನುಮಾನ ಮೂಡಿಸಿದೆ’ ಎಂದು ಮೂಲಗಳು ತಿಳಿಸಿವೆ.

ಭೂ ದಾಖಲಾತಿ ನೈಜತೆ ಬಗ್ಗೆ 2003ರ ಮುನ್ನವೇ ಜಿಲ್ಲಾಡಳಿತದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಮೂರು ತಿಂಗಳಲ್ಲಿ ಇತ್ಯರ್ಥ ಮಾಡಬೇಕು ಎಂದು ಹೈಕೋರ್ಟ್‌ 2013ರಲ್ಲಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

‘ಪ್ರತಿವಾದಿಯಾದ ಶ್ರೀಹರಿ ಖೋಡೆ ಅವರು ದಾಖಲೆ ಹಾಜರುಪಡಿಸಲು ವಿಫಲರಾಗಿದ್ದಾರೆ. ಅವರಿಗೆ ಜಾಗ ಮಂಜೂರಾಗಿಲ್ಲ. ಬೋಗಸ್‌ ಮಂಜೂರಾತಿ ಮಾಡಲಾಗಿ ಪಹಣಿಯಲ್ಲಿ ಅವರ ಹೆಸರನ್ನು ತೆಗೆದು ಹಾಕಬೇಕು’ ಎಂದು ವಿಶೇಷ ಜಿಲ್ಲಾಧಿಕಾರಿ 2003ರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಶ್ರೀಹರಿ ಖೋಡೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಶ್ರೀಹರಿ ಖೋಡೆ ಅವರ ಲಿಖಿತ ವಾದ ಆಲಿಸಿ ಇತ್ಯರ್ಥ ಮಾಡಬೇಕು ಎಂದು ವಿಶೇಷ ಜಿಲ್ಲಾಧಿಕಾರಿಗೆ ಕೋರ್ಟ್‌ ಸೂಚಿಸಿತ್ತು.

ಇದು ಸರ್ಕಾರಿ ಜಾಗ ಎಂದು ವಿಶೇಷ ಜಿಲ್ಲಾಧಿಕಾರಿ ಮತ್ತೆ ಆದೇಶ ಹೊರಡಿಸಿದ್ದರು. ಪುನಃ ಶ್ರೀಹರಿ ಖೋಡೆ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ‘ಈಗಿನ ಆದೇಶ ನ್ಯಾಯಯುತವಾಗಿದೆ. ಜಮೀನಿಗೆ ಹಕ್ಕುಬಾಧ್ಯತೆ ಇದ್ದಲ್ಲಿ ಸಿವಿಲ್‌ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಿ’ ಎಂದು ಹೇಳಿದ್ದ ಹೈಕೋರ್ಟ್‌, ಮೇಲ್ಮನವಿಯನ್ನು ವಜಾ ಮಾಡಿತ್ತು. ಬಳಿಕ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು. ಅರ್ಜಿದಾರರು ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಶ್ರೀಹರಿ ಖೋಡೆ ನಿಧನರಾದ ಬಳಿಕ ಅವರ ವಾರಸುದಾರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

2017ರಲ್ಲಿ ಮತ್ತೆ ವಿಚಾರಣೆ ಆರಂಭವಾಗಿತ್ತು. ಅವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಮತ್ತಷ್ಟು ಪ್ರತಿವಾದಿಗಳು ಸೇರ್ಪಡೆಯಾದರು. ಮೋಟಮ್ಮ ಹಾಗೂ ನಾಗಮ್ಮ ಎಂಬುವರ ವಕೀಲರು, ‘285 ಎಕರೆ 9 ಗುಂಟೆ ಹಿಡುವಳಿ ಜಮೀನಾಗಿದ್ದು, ನರಸಿಂಹ ರಾವ್‌ ಶಿಂಧೆ ಜಮೀನಿನ ಮಾಲೀಕರು. ಅವರು ನರಸಿದೇವರು ಹಾಗೂ ಇತರರಿಗೆ 1924–25ರಲ್ಲಿ ಕ್ರಯಪತ್ರ ಮಾಡಿಕೊಟ್ಟಿದ್ದರು’ ಎಂದು ವಾದ ಮಂಡಿಸಿದ್ದರು. ‘ನರಸಿದೇವರು ಅವರ ಮಕ್ಕಳು ಈರಪ್ಪ ಅವರಿಗೆ 1940–41ರಲ್ಲಿ ನೋಂದಣಿ ಮಾಡಿಸಿಕೊಟ್ಟಿದ್ದರು’ ಎಂದೂ ಹೇಳಿದ್ದರು. ಈರಪ್ಪ ಅವರೇ ಜಮೀನಿನ ಮಾಲೀಕರು. ಅವರ ಬಳಿಕ ಮಕ್ಕಳು ಮೋಟಮ್ಮ ಹಾಗೂ ನಾಗಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು’ ಎಂದು ವಾದಿಸಿದ್ದರು.

‘1954ರಲ್ಲೇ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದಿದೆ. ಅದರ ಪ್ರಕಾರ, ಯಾವುದೇ ವ್ಯಕ್ತಿ 54 ಎಕರೆಗಿಂತ ಹೆಚ್ಚು ಜಾಗ ಹೊಂದುವಂತಿಲ್ಲ. ಬೋಗಸ್‌ ದಾಖಲೆ ಸೃಷ್ಟಿಸಿ ಖಾತೆಗಳನ್ನು ಮಾಡಿಕೊಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದರು.

‘ರಾಸು ಅಭಿವೃದ್ಧಿಗೆ ಕಾದಿರಿಸಿದ ಜಾಗ’

‘ಇದು ಮುಫತ್‌ ಕಾವಲ್‌ ಜಮೀನಾಗಿದ್ದು, ಅಮೃತಮಹಲ್‌ ತಳಿ ರಾಸುಗಳ ಅಭಿವೃದ್ಧಿಗೆ ಕಾದಿರಿಸಿದ ಜಾಗ. ಇದು ಸರ್ಕಾರಿ ಜಮೀನು’ ಎಂದು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ವರದಿ ಸಲ್ಲಿಸಿದ್ದರು.

‘ಸರ್ಕಾರಿ ಭೂಮಿ ಎಂದು ಸಾಬೀತುಪಡಿಸಲು ತಹಶೀಲ್ದಾರ್ ಅವರು ಮೂಲದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹೀಗಾಗಿ, ವಿಚಾರಣೆ ಕೈಬಿಡಲಾಗಿದೆ’ ಎಂದು ವಿಶೇಷ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಾಂಶಗಳು
* 16 ವರ್ಷದ ಹಳೆಯ ಪ್ರಕರಣ

* ಸರ್ಕಾರಿ ಜಾಗ ಎಂದಿದ್ದ ಹಿಂದಿನ ಜಿಲ್ಲಾಧಿಕಾರಿ

* ಸ್ವಾಧೀನಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದ ಜಿಲ್ಲಾಡಳಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT