ಭಾನುವಾರ, ಸೆಪ್ಟೆಂಬರ್ 22, 2019
25 °C
ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ಬೈಕ್ ರ‍್ಯಾಲಿ

ಜೀವನದಿ ತವರಿನಲ್ಲಿ ಕಾವೇರಿ ಕೂಗಿಗೆ ಚಾಲನೆ

Published:
Updated:
Prajavani

ಮಡಿಕೇರಿ: ‘ಈಶ‘ ಫೌಂಡೇಷನ್ ಆಯೋಜಿಸಿರುವ ‘ಕಾವೇರಿ ಕೂಗು’ ಅಭಿಯಾನದ ಅಂಗವಾಗಿ, ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಬೈಕ್‌ ರ‍್ಯಾಲಿಗೆ ತಲಕಾವೇರಿಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಖುದ್ದು ಮಡಿಕೇರಿ ತನಕ ಬೈಕ್‌ ಚಲಾಯಿಸಿಕೊಂಡು ಬಂದು ರ‍್ಯಾಲಿಗೆ ಚಾಲನೆ ನೀಡಿದ ಸದ್ಗುರು ಅವರಿಗೆ, ಚಿತ್ರನಟರಾದ ರಕ್ಷಿತ್ ಶೆಟ್ಟಿ, ದಿಗಂತ್‌, ‘ಬಿಗ್‌ಬಾಸ್‌’ ಖ್ಯಾತಿಯ ಶಶಿ ಸಾಥ್‌ ನೀಡಿದರು. ಇದಕ್ಕೂ ಮೊದಲು ತಲಕಾವೇರಿ ತೀರ್ಥಕುಂಡಿಕೆಯ ಬಳಿ ಪೂಜೆ ಸಲ್ಲಿಸಲಾಯಿತು.

ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ 1,500 ಕಿ.ಮೀ ಕ್ರಮಿಸಲಿದ್ದು,  ಸೆ.17ಕ್ಕೆ ಚೆನ್ನೈನಲ್ಲಿ ಮುಕ್ತಾಯವಾಗಲಿದೆ.

ಸದ್ಗುರು ಜಗ್ಗಿ ವಾಸ್‌ದೇವ್‌ ಮಾತನಾಡಿ, ‘ಕೊಡಗಿನಲ್ಲಿ ಮಳೆ ಕೊರತೆಯಾಗದಿದ್ದರೂ ದೇಶದ ಹಲವು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನೂರು ವರ್ಷದ ಹಿಂದೆ ಬೀಳುತ್ತಿದ್ದ ಮಳೆ ಪ್ರಮಾಣವೇ ಈಗಲೂ ಇದೆ. ಆದರೆ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಯಲ್ಲಿ ಇಲ್ಲ. ಅದೇ ಕಾರಣದಿಂದ ಪಶ್ಚಿಮಘಟ್ಟದಲ್ಲಿ ಭೂಕುಸಿತ ಸಂಭವಿಸುತ್ತಿದೆ’ ಎಂದು ಎಚ್ಚರಿಸಿದರು.

‘ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ 10 ವರ್ಷದಲ್ಲಿ 47 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನದಿಯ ನೀರು ಸಮುದ್ರ ಸೇರುವ ಮೊದಲೇ ಬತ್ತುತ್ತಿದೆ. ಏಪ್ರಿಲ್‌– ಮೇನಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗುತ್ತಿದೆ. ಚೆನ್ನೈನಲ್ಲಿ ಸಮಸ್ಯೆ ಉಲ್ಬಣಿಸಿದೆ. ಬೆಂಗಳೂರು ಸಹ ಅದೇ ಪಟ್ಟಿಯಲ್ಲಿದೆ. ಭೂಮಿ ಹಾಗೂ ನದಿಗಳನ್ನು ಮುಂದಿನ ಪೀಳಿಗೆಗೂ ಉಳಿಸಬೇಕು’ ಎಂದು ಕರೆ ನೀಡಿದರು. 

ಕ್ರಿಸ್ಟಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ನಂದಾ ಕಾರ್ಯಪ್ಪ, ಕ್ರೀಡಾಪಟು ಅಶ್ವಿನಿ ನಾಚಪ್ಪ ಹಾಜರಿದ್ದರು. 

Post Comments (+)