ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೀರ್ಥೋದ್ಭವ’ಕ್ಕೆ ಭಕ್ತರ ಸಾಕ್ಷಿ, ಬ್ರಹ್ಮಕುಂಡಿಕೆಯಲ್ಲಿ ಉಕ್ಕಿದ ಕಾವೇರಿ

ಸಂಕಷ್ಟ ಪರಿಹರಿಸು ತಾಯಿ ಕಾವೇರಿ 
Last Updated 17 ಅಕ್ಟೋಬರ್ 2018, 15:34 IST
ಅಕ್ಷರ ಗಾತ್ರ

ತಲಕಾವೇರಿ (ಮಡಿಕೇರಿ ತಾಲ್ಲೂಕು): ಸೂರ್ಯ ತನ್ನ ನಿತ್ಯದ ಕಾಯಕ ಮುಗಿಸಿ ಮರೆಗೆ ಸರಿಯುವ ಸಮಯ. ಬೆಟ್ಟದಲ್ಲಿ ಚುಮುಚುಮು ಚಳಿ, ಅದಕ್ಕೆ ಇಬ್ಬನಿಯ ಸಾಥ್‌. ಅದೇ ಸಮಯದಲ್ಲಿ ಬ್ರಹ್ಮಗಿರಿ ತಪ್ಪಲಿನ ತಲಕಾವೇರಿ ಕ್ಷೇತ್ರದಲ್ಲಿ ನಾಡಿನ ಜೀವನದಿ, ಕೊಡಗಿನ ಕುಲದೇವಿ ‘ಕಾವೇರಿ’ಯು ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿದಳು.

ಮಳೆಗೆ ಬ್ರಹ್ಮಗಿರಿಯು ಹಸಿರು ಉಡುಗೆ ತೊಟ್ಟಂತೆ ಕಂಗೊಳಿಸುತ್ತಿತ್ತು. ಇಳಿಸಂಜೆಯ ವಾತಾವರಣ ತೀರ್ಥೋದ್ಭವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತುಂಬಿತ್ತು. ತುಲಾ ಸಂಕ್ರಮಣ ಜಾತ್ರೆಗೆ ಇಡೀ ಕ್ಷೇತ್ರವೇ ಸಿಂಗಾರಗೊಂಡಿತ್ತು.

ಭಕ್ತರ ನಂಬಿಕೆಯ ತೀರ್ಥೋದ್ಭವವು ಬುಧವಾರ ಸಂಜೆ 6.43ರ ಮೇಷ ಲಗ್ನದಲ್ಲಿ ನಿಗದಿಯಾಗಿತ್ತು. ಆದರೆ, ಒಂದು ನಿಮಿಷಕ್ಕೂ ಮೊದಲು ಬ್ರಹ್ಮಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾಗಿ ಕಾವೇರಿ ಕಾಣಿಸಿಕೊಂಡಳು. ಈ ವಿಸ್ಮಯ ಕಣ್ತುಂಬಿಕೊಳ್ಳಲು ಮಧ್ಯಾಹ್ನದಿಂದಲೂ ಅಪಾರ ಸಂಖ್ಯೆಯಲ್ಲಿ ಕಾದಿದ್ದ ಕೊಡಗು ಹಾಗೂ ಹೊರ ಜಿಲ್ಲೆಯ ಭಕ್ತ ಸಮೂಹದಿಂದ ‘ಕಾವೇರಿ ಮಾತಾಕೀ ಜೈ...’ ಎಂಬ ಜಯಘೋಷಣೆ ಮೊಳಗಿದವು.

ಬಳಿಕ ಪುಷ್ಕರಣಿಗೆ ಧುಮ್ಮಿಕ್ಕಿದ ಭಕ್ತರು ಪವಿತ್ರ ತೀರ್ಥಕ್ಕಾಗಿ ಮುಗಿಬಿದ್ದರು. ತಂದಿದ್ದ ಪ್ಲಾಸ್ಟಿಕ್‌ ಕೊಡ, ಬಾಟಲಿಗಳಲ್ಲಿ ತೀರ್ಥ ತುಂಬಿಸಿಕೊಂಡು ಧನ್ಯತಾಭಾವ ತೋರಿದರು. ಬ್ರಹ್ಮಕುಂಡಿಕೆಯ ಬಳಿಗೆ ಬಂದ ಭಕ್ತರಿಗೆ ರಾಮಕೃಷ್ಣಾಚಾರ್‌ ನೇತೃತ್ವದಲ್ಲಿ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಕಾವೇರಿಯಲ್ಲಿ ಮೊರೆ: ಆಗಸ್ಟ್‌ ನಲ್ಲಿ ಸುರಿದ ಮಹಾಮಳೆಯಿಂದ ಕೊಡಗಿನಲ್ಲಿ ಭೂಕುಸಿತವಾಗಿ ಅಪಾರ ಹಾನಿ ಉಂಟಾಗಿತ್ತು. ನೂರಾರು ಮಂದಿ ಮನೆ, ಆಸ್ತಿ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಇನ್ನೂ ಆಶ್ರಯ ಪಡೆದುಕೊಂಡಿದ್ದಾರೆ. ಪುನರ್ವಸತಿ ಕಾರ್ಯಗಳೂ ನಡೆಯುತ್ತಿವೆ. ಈ ನಡುವೆ ಕಾವೇರಿ ತುಲಾ ಸಂಕ್ರಮಣ ಜಾತ್ರೆ ಬಂದಿದ್ದು, ಭಕ್ತರೆಲ್ಲರೂ ಕೊಡಗಿನ ಸಂಕಷ್ಟ ನಿವಾರಿಸುವಂತೆ ಕಾವೇರಿ ಮಾತೆಯಲ್ಲಿ ಮೊರೆಯಿಟ್ಟರು.

‘ರಾಜ್ಯವೂ ಸೇರಿದಂತೆ ಹೊರ ರಾಜ್ಯಕ್ಕೆ ನೀರುಣಿಸುವ ಕಾವೇರಿ ನಾಡೇ ಸಂಕಷ್ಟದಲ್ಲಿದೆ. ಕಾವೇರಿ ಮಾತೆ ಎಂದೂ ಮುನಿಸಿಕೊಂಡಿದ್ದ ನಿದರ್ಶನವೇ ಇಲ್ಲ. ಆದರೆ, ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಭಾರಿ ಮಳೆ ಸುರಿಯಿತು. ಜಲದಿಗ್ಬಂಧನವೇ ಉಂಟಾಗಿತ್ತು. ಅತ್ಯಂತ ಸುರಕ್ಷಿತ ಕುಶಾಲನಗರದಲ್ಲೂ ಪ್ರವಾಹ ತಲೆದೋರಿ ಜನರು ಮನೆಗಳನ್ನೇ ತೊರೆದಿದ್ದರು. ಇಳಿದು ಹೋಗು ತಾಯಿ ಬೇಡಿಕೊಂಡಿದ್ದರು. ಇನ್ನೆಂದೂ ಇಂತಹ ಸಂಕಷ್ಟ ಎದುರಾಗದಂತೆ ಪ್ರಾರ್ಥಿಸಿದ್ದೇವೆ. ಶಾಂತಿ, ನೆಮ್ಮದಿ ಹಾಗೂ ನಿರಾಶ್ರಿತರ ಬಾಳಲ್ಲಿ ಬೆಳಕು ಮೂಡಲಿ’ ಎಂದು ಬೇಡಿಕೊಂಡಿದ್ದೇವೆ ಎಂದು ಭಕ್ತರು ಹೇಳಿದರು. ಮಂಡ್ಯ, ಮೈಸೂರು ಜಿಲ್ಲೆಯ ಹಾಗೂ ತಮಿಳುನಾಡು, ಕೇರಳ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಕಂಗೊಳಿಸಿದ ತಾಯಿ: ಹೂವು ಹಾಗೂ ಚಿನ್ನಾಭರಣ ತೊಟ್ಟು ಕಾವೇರಿ ಮಾತೆ ಕಂಗೊಳಿಸಿದಳು. ಮಹಾಸಂಕಲ್ಪ ಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ ಸಹ ನೆರವೇರಿತು. ಕೋಡಿ ಕುಟುಂಬಸ್ಥರು ಭಾಗಮಂಡಲದಿಂದ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಕರಗದ ಭಕ್ತ ಸಮೂಹ: ಈ ಬಾರಿ ಸಂಜೆ ತೀರ್ಥೋದ್ಭವ ನಡೆದ ಕಾರಣಕ್ಕೆ ಭಕ್ತರ ಸಂಖ್ಯೆ ಕಡಿಮೆ ಇರಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ನಿರೀಕ್ಷೆಗೂ ಮೀರಿ ಬಂದಿದ್ದ ಭಕ್ತರು ವಿಸ್ಮಯ ಕಂಡು ಪುಳಕಿತರಾದರು. ರಾತ್ರಿಯಾದರೂ ಭಕ್ತರ ದಂಡು ಕರಗಲಿಲ್ಲ. ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರದವರೆಗೂ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರಕ್ಕೆ ಬಂದವರಿಗೆ ಕೊಡಗು ಏಕೀಕರಣ ರಂಗದಿಂದ ಅನ್ನಸಂತರ್ಪಣೆ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ರೈತರು ಅಕ್ಕಿ, ಬೆಲ್ಲ, ಸಕ್ಕರೆ, ತರಕಾರಿಯನ್ನು ನೀಡಿದ್ದರು.

ತುಲಾ ಸಂಕ್ರಮಣದಲ್ಲಿ ಪ್ರಥಮ ಬಾರಿಗೆ ಸಿ.ಎಂ
ಪ್ರಥಮ ಬಾರಿಗೆ ತೀರ್ಥೋದ್ಭವದಲ್ಲಿ ಮುಖ್ಯಮಂತ್ರಿಯೊಬ್ಬರು ಪಾಲ್ಗೊಂಡಿದ್ದು ವಿಶೇಷ. ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗಲಿದೆ ಎಂಬ ನಂಬಿಕೆಯಿತ್ತು. ಅದೇ ಕಾರಣಕ್ಕೆ ಮುಖ್ಯಮಂತ್ರಿ ಆಗಿದ್ದ ಜೆ.ಎಚ್‌. ಪಟೇಲ್‌ ನಂತರ ಯಾರೊಬ್ಬರೂ ಈ ಕ್ಷೇತ್ರ ಭೇಟಿ ನೀಡುವ ಧೈರ್ಯ ತೋರಿರಲಿಲ್ಲ. ಜುಲೈ 20ರಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದ ಕುಮಾರಸ್ವಾಮಿ ಅವರು ಬುಧವಾರ ಸಂಜೆ ನಡೆದ ತೀರ್ಥೋದ್ಭವದಲ್ಲೂ ಪಾಲ್ಗೊಂಡು ಅಚ್ಚರಿ ಮೂಡಿಸಿದರು.

ಬಳಿಕ ಮಾತನಾಡಿ, ‘ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ಭಾಗಮಂಡಲದ ಭಗಂಡೇಶ್ವರನ ದರ್ಶನದ ಬಳಿಕವೇ ನಾನು ಮುಖ್ಯಮಂತ್ರಿಯಾಗಿದ್ದು, ದೇವರದಲ್ಲಿ ನನಗೆ ನಂಬಿಕೆಯಿದೆ’ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌, ಸಚಿವ ಸಿ.ಎಸ್‌. ಪುಟ್ಟರಾಜ್ ಹಾಜರಿದ್ದರು.

**

ಅಧಿಕಾರ ಗಟ್ಟಿಯಾಗಿದ್ದೆಯೋ ಇಲ್ಲವೋ ಎಂಬ ಪರೀಕ್ಷೆಗಾಗಿಯೇ ತಲಕಾವೇರಿಗೆ ಮತ್ತೆ ಭೇಟಿ ನೀಡಿದ್ದೇನೆ. ನಾನು ಅಧಿಕಾರದಲ್ಲಿ ಎಷ್ಟು ದಿವಸ ಇರಬೇಕೆಂದು ದೇವರು ಆಗಲೇ ತೀರ್ಮಾನಿಸಿದ್ದಾನೆ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT