ಗುರುವಾರ , ನವೆಂಬರ್ 21, 2019
21 °C
ಕರ್ಣಾಟಕ ಬ್ಯಾಂಕ್‌: 2 ನೇ ತ್ರೈಮಾಸಿಕದಲ್ಲಿ ₹105 ಕೋಟಿ ಲಾಭ

ಕರ್ಣಾಟಕ ಬ್ಯಾಂಕ್ ಅರ್ಧ ವಾರ್ಷಿಕ ನಿವ್ವಳ ಲಾಭ ₹281 ಕೋಟಿ

Published:
Updated:
Prajavani

ಮಂಗಳೂರು: ಕರ್ಣಾಟಕ ಬ್ಯಾಂಕ್ ಅರ್ಧ ವಾರ್ಷಿಕ ನಿವ್ವಳ ಲಾಭ ₹281.33 ಕೋಟಿ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕಿನ ನಿವ್ವಳ ಲಾಭವು ₹275.10 ಕೋಟಿಯಾಗಿತ್ತು. ದ್ವಿತೀಯ ತ್ರೈಮಾಸಿಕದ ಅಂತ್ಯಕ್ಕೆ ಬ್ಯಾಂಕ್‌ ನಿವ್ವಳ ಲಾಭ ₹105.91 ಕೋಟಿಯಾಗಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹111.86 ಕೋಟಿ ಲಾಭ ಗಳಿಸಿತ್ತು.

ನಗರದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ದ್ವಿತೀಯ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

ಬ್ಯಾಂಕಿನ ಒಟ್ಟು ವ್ಯವಹಾರವು ₹1,23,658.07 ಕೋಟಿ ತಲುಪಿದ್ದು, ಶೇ 8.61 ರಷ್ಟು ಪ್ರಗತಿ ಸಾಧಿಸಿದೆ. ಬ್ಯಾಂಕಿನ ಠೇವಣಿಗಳ ಮೊತ್ತವು ಶೇ 9.87 ವೃದ್ಧಿ ದರದೊಂದಿಗೆ ₹70,189.65 ಕೋಟಿ ತಲುಪಿದೆ. ಬ್ಯಾಂಕಿನ ಮುಂಗಡಗಳು ₹53,468.42 ಕೋಟಿಯಾಗಿದ್ದು, ಶೇ 7ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕಿನ ಸಿಡಿ ಅನುಪಾತ ಶೇ 76.18 ರಷ್ಟಿದೆ.

‘ಬಾಹ್ಯ ಪ್ರಪಂಚದ ಆರ್ಥಿಕ ವಿದ್ಯಮಾನಗಳು ಪ್ರತಿಕೂಲವಾಗಿದ್ದು, ವ್ಯವಹಾರಗಳಿಗೆ ಚೇತೋಹಾರಿಯಾಗಿಲ್ಲ. ಇಂತಹ ವಿಷಮ ಸನ್ನಿವೇಶದಲ್ಲೂ ಬ್ಯಾಂಕ್ ತೃಪ್ತಿಕರವಾದ ನಿರ್ವಹಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ನಾವು ಬ್ಯಾಂಕಿನ ಕಾರ್ಯದಕ್ಷತೆಯ ಕಡೆ ಗಮನವನ್ನು ನೀಡಿರುವುದರಿಂದ ನಿರ್ವಹಣಾ ಲಾಭವು ಶೇ 16.02 ರ ವೃದ್ಧಿ ಕಂಡಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.

‘ಶುಲ್ಕಾಧಾರಿತ ಆದಾಯ (ಫೀ ಬೇಸ್ಡ್‌ ಇನ್‌ಕಂ)ವು ಶೇ 38.68 ರಷ್ಟು ವೃದ್ಧಿ ಕಂಡಿದೆ. ಚಾಲ್ತಿ ಹಾಗೂ ಉಳಿತಾಯ ಖಾತೆಗಳ ಠೇವಣಿಯು, ಒಟ್ಟು ಠೇವಣಿಯ ಶೇ 27.41 ರಷ್ಟಿದೆ. ಮುಂಬರುವ ದಿನಗಳಲ್ಲಿ ಚಾಲ್ತಿ ಹಾಗೂ ಉಳಿತಾಯ ಖಾತೆಗಳ ಕ್ರೋಡೀಕರಣ ಹಾಗೂ ಉತ್ತಮ ಮುಂಗಡಗಳನ್ನು ನೀಡುವಲ್ಲಿ ವಿಶೇಷ ಆದ್ಯತೆ ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಬ್ಯಾಂಕಿನ ಸ್ವತ್ತುಗಳ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಸಕಾಲಿಕ ಸಾಲ ವಸೂಲಾತಿಗಳನ್ನು ಮಾಡುವುದು ಹಾಗೂ ಅನಗತ್ಯ ಸೋರಿಕೆಗಳನ್ನು ತಡೆಗಟ್ಟುವುದು ಮುಂತಾದ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕಿನ ಬೆಳವಣಿಗೆಯು ಆಶಾದಾಯಕವಾಗಿದ್ದು, ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)