ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ.ವ್ಯಾಲಿ ಯೋಜನೆ: ಕೆರೆ ಸೇರುವ ನೀರಿಗೆ ವಿಷ ಸೇರಿದ್ದು ಎಲ್ಲಿ?

Last Updated 9 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಸರಿಯಾಗಿ ಅನುಷ್ಠಾನಗೊಂಡಿದ್ದರೆ ವಿಶ್ವಕ್ಕೇ ಮಾದರಿ ಆಗಬಹುದಾದ ‘ಭಗೀರಥ ಪ್ರಯತ್ನ’ ಆರಂಭದಲ್ಲೇ ಹಾದಿ ತಪ್ಪಿದೆ. ಬರದ ಬವಣೆಯಿಂದ ತತ್ತರಿಸಿದ್ದ ರೈತರು ಬತ್ತಿದ ಕೆರೆಗಳಲ್ಲಿ ಗಂಗಾವತರಣ ಆದಾಗ ಪುಳಕಿತರಾಗಿದ್ದು ನಿಜ. ಆದರೆ, ಅದು ಅನ್ನದ ಬಟ್ಟಲಿಗೇ ವಿಷ ಉಣಿಸುತ್ತಿದೆ ಎಂಬ ಕಳವಳವೀಗ ಕಾಡುತ್ತಿದೆ. ಲೋಪಗಳನ್ನು ಸರ್ಕಾರ ಸರಿಪಡಿಸುತ್ತದೆಯೇ ಅಥವಾ ₹ 1400 ಕೋಟಿಯ ಈ ಯೋಜನೆ ಹಳ್ಳ ಹಿಡಿಯುತ್ತದೆಯೇ ಕಾದು ನೋಡಬೇಕು...

‘ಬೆಂಗಳೂರಿನ ತ್ಯಾಜ್ಯ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದುಹೋಗುತ್ತಿದೆ. ಅದನ್ನು ಕೃಷಿಗೆ ಬಳಸುವ ಮಹತ್ತರ ಯೋಜನೆ ಇದು. ರೈತರ ಬಾಳು ಇದರಿಂದ ಹಸನಾಗಲಿದೆ’ ಕೋರಮಂಗಲ– ಚಲ್ಲಘಟ್ಟ ಕಣಿವೆಯ(ಕೆ.ಸಿ. ವ್ಯಾಲಿ) ನೀರನ್ನು ಬಳಸಿ ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಯೋಜನೆ ಬಗ್ಗೆ ಸರ್ಕಾರ ನೀಡುವ ವಿವರಣೆ ಇದು.

ತ್ಯಾಜ್ಯ ನೀರನ್ನು ಬಳಸಿ ಕೆರೆಗಳ ಮಡಿಲು ತುಂಬಿಸುವ ಯೋಜನೆ ಬಗ್ಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಬಣ್ಣ ಬಣ್ಣದ ಮಾತುಗಳಿಂದ ವಿವರಿಸುವಾಗ ಈ ಭಾಗದ ರೈತರಿಗೆ ‘ಮರುಭೂಮಿಯಲ್ಲಿ ಓಯಸಿಸ್‌’ ಕಂಡ ಅನುಭವವಾಗಿದ್ದು ನಿಜ. ಆದರೆ, ವಾಸ್ತವ ತೀರಾ ಭಿನ್ನ.

ಬೆಂಗಳೂರಿನ ತ್ಯಾಜ್ಯ ನೀರು ನೂರಾರು ಕಿ.ಮಿ ದೂರದ ಕೆರೆಗಳನ್ನು ತಲುಪಿದ್ದೇನೋ ನಿಜ. ಆದರೆ ಆ ನೀರಿನ ಗುಣಮಟ್ಟ ಹೇಗಿದೆ? ನೀರು ನಿರೀಕ್ಷಿತ ಮಟ್ಟಕ್ಕೆ ಶುದ್ಧೀಕರಣಗೊಂಡಿದೆಯೇ? ಅದನ್ನು ಕೆರೆಗಳಿಗೆ ತುಂಬಿಸುವುದರಿಂದ ಭವಿಷ್ಯದಲ್ಲಿ ಅನಾಹುತಗಳು ಎದುರಾಗಬಹುದೇ? ಸರ್ಕಾರವಾಗಲೀ, ಅನುಷ್ಠಾನ ಇಲಾಖೆಗಳಾಗಲೀ ಈ ನಿಟ್ಟಿನಲ್ಲಿ ತಲೆಯನ್ನೇ ಕೆಡಿಸಿಕೊಂಡಿಲ್ಲ.

‘ತ್ಯಾಜ್ಯನೀರನ್ನು ದ್ವಿತೀಯ ಹಂತದ ಸಂಸ್ಕರಣೆಗೆ ಒಳಪಡಿಸುವುದಷ್ಟೇ ನಮಗೆ ವಹಿಸಿರುವ ಹೊಣೆ. ಇದಕ್ಕೆ ನಮ್ಮ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳೆಲ್ಲವೂ (ಎಸ್‌ಟಿಪಿ) ಸಜ್ಜಾಗಿವೆ’ ಎಂದು ಹೇಳುತ್ತಾರೆ ಜಲಮಂಡಳಿ ಅಧಿಕಾರಿಗಳು.

‘ಜಲಮಂಡಳಿಯವರು ಕೊಟ್ಟ ನೀರನ್ನು ಕೆರೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನಮಗೆ ವಹಿಸಲಾಗಿದೆ. ಜಾಕ್‌ವೆಲ್ ಮತ್ತು ಪಂಪಿಂಗ್‌ ಸ್ಟೇಷನ್‌ಗಳ ನಿರ್ಮಾಣ, ಕೊಳವೆ ಅಳವಡಿಸುವುದು ಪೂರ್ಣಗೊಂಡಿವೆ’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು.

ಕೆರೆಗೆ ಸೇರಬೇಕಾದ ನೀರಿನ ಗುಣಮಟ್ಟವನ್ನು ತಪಾಸಣೆಗೆ ಒಳಪಡಿಸುವ ಹೊಣೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯದ್ದು (ಕೆಎಸ್‌ಪಿಸಿಬಿ) .

ಮೇಲ್ನೋಟಕ್ಕೆ ಎಲ್ಲ ವ್ಯವಸ್ಥೆ ಸರಿ ಇರುವಂತೆ ತೋರುತ್ತಿವೆ. ಹಾಗಿದ್ದರೂ ಕೆರೆಗಳಿಗೆ ಹರಿಸಿದ ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಕಂಡುಬಂದಿದ್ದು ಹೇಗೆ ಎಂಬುದು ಚೋದ್ಯ. ಇದರ ಜಾಡು ಅರಸುತ್ತಾ ಹೋದಾಗ, ಈ ಯೋಜನೆಯ ಮೂಲದಲ್ಲೇ ಲೋಪವಿರುವುದು ಢಾಳಾಗಿ ಕಂಡುಬರುತ್ತದೆ.

ಆರಂಭದಲ್ಲಿ, ಈ ಯೋಜನೆಯ ನೀರನ್ನು ಅಂತರ್ಜಲ ಮರುಪೂರಣ, ನೀರಾವರಿ ಹಾಗೂ ಕುಡಿಯುವ ಉದ್ದೇಶಕ್ಕೂ ಬಳಸಲು ನಿರ್ಧರಿಸಲಾಗಿತ್ತು. ಕುಡಿಯಲು ನೀರು ಪೂರೈಸುವುದಾದರೆ ಅದಕ್ಕೆ ಪ್ರತ್ಯೇಕ ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂದು ಪ್ರಾಥಮಿಕ ಯೋಜನಾ ವರದಿಯಲ್ಲಿ (ಪಿಎಸ್‌ಆರ್‌) ಶಿಫಾರಸು ಮಾಡಲಾಗಿತ್ತು. ಹಾಗಾಗಿ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ಈ ಯೋಜನೆಯನ್ನು ಅಂತರ್ಜಲ ಮರುಪೂರಣ ಮತ್ತು ಕೃಷಿ ಬಳಕೆಗೆ ಸೀಮಿತಗೊಳಿಸಲಾಯಿತು. ನೀರನ್ನು ಕುಡಿಯಲು ಬಳಸುವುದಿಲ್ಲವಾದ್ದರಿಂದ ತ್ಯಾಜ್ಯ ನೀರನ್ನು ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಶುದ್ಧೀಕರಿಸಿದರೆ ಸಾಕು ಎಂಬ ನಿರ್ಣಯಕ್ಕೆ ಸರ್ಕಾರ ಬಂದುಬಿಟ್ಟಿತು. ಯೋಜನೆ ಮೊದಲು ಹಾದಿ ತಪ್ಪಿದ್ದೇ ಇಲ್ಲಿ.

‘ಗೃಹಬಳಕೆಯಿಂದ ಒಳಚರಂಡಿ ಸೇರುವ ನೀರನ್ನು ಮಾತ್ರ ನಾವು ಶುದ್ಧೀಕರಿಸಿ ನೀಡುತ್ತೇವೆ. ಒಳಚರಂಡಿ ಜಾಲದೊಳಗೆ ಕೈಗಾರಿಕಾ ತ್ಯಾಜ್ಯ ಸೇರುವುದಕ್ಕೆ ಅವಕಾಶವೇ ಇಲ್ಲ’ ಎಂದು ಜಲಮಂಡಳಿ ಬಲವಾಗಿ ಪ್ರತಿಪಾದಿಸುತ್ತಿದೆ. ಆದರೆ, ವಾಸ್ತವವೇ ಬೇರೆ. ಒಳಚರಂಡಿ ಮೂಲಕ ಹರಿಯುವ ನೀರಿನಲ್ಲೂ ಕೈಗಾರಿಕೆಗಳ ರಾಸಾಯನಿಕಯುಕ್ತ ಕಷ್ಮಲಗಳು ಸೇರಿಕೊಂಡಿರುವುದು ಸ್ಫಟಿಕ ಸ್ಪಷ್ಟ.

‘ಕೈಗಾರಿಕೆಗಳು ತ್ಯಾಜ್ಯ ನೀರನ್ನು ದ್ವಿತೀಯ ಹಂತದವರೆಗೆ ಶುದ್ಧೀಕರಿಸಿದ ನಂತರವಷ್ಟೇ ಹೊರಗೆ ಬಿಡಬಹುದು. ಅವರು ಒಂದು ವೇಳೆ ಶುದ್ಧೀಕರಿಸದೆ ನೀರು ಬಿಟ್ಟರೆ, ನಿಗಾ ಇಡಬೇಕಾದುದು ಕೆಎಸ್‌ಪಿಸಿಬಿ’ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ನಗರದ ಕೈಗಾರಿಕೆಗಳು ನಿಯಮಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ ಎಂಬುದಕ್ಕೆ ಬೆಳ್ಳಂದೂರು ಕೆರೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಬೆಂಕಿ ಹಾಗೂ ನೊರೆ ಹಾವಳಿಗಿಂತ ದೊಡ್ಡ ಸಾಕ್ಷ್ಯ ಬೇಕಿಲ್ಲ. ಅಪಾಯಕಾರಿ ರಾಸಾಯನಿಕಗಳು ಕೆರೆಯ ಒಡಲನ್ನು ಸೇರುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬಳಿಕ ಎಚ್ಚೆತ್ತಿದ್ದ ಕೆಎಸ್‌ಪಿಸಿಬಿ 2017ರಲ್ಲಿ ನಗರದ 488 ಕೈಗಾರಿಕೆಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ಆಗ ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬೆಳ್ಳಂದೂರು ಜಲಾನಯನ ಪ್ರದೇಶದಲ್ಲಿ 45 ಕೈಗಾರಿಕೆಗಳಲ್ಲಿ ಮಾತ್ರ ಎಸ್‌ಟಿಪಿ ಇತ್ತು. ಆರು ಕೈಗಾರಿಕೆಗಳು ಮಾತ್ರ ತ್ಯಾಜ್ಯನೀರನ್ನು ಶುದ್ಧೀಕರಿಸಿ ಬಳಸುತ್ತಿದ್ದವು.

‘ಕೈಗಾರಿಕೆಗಳ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಅವುಗಳು ತ್ಯಾಜ್ಯ ನೀರನ್ನು ಶುದ್ಧೀಕರಿಸದೆಯೇ ರಾತ್ರೋ ರಾತ್ರಿ ಒಳಚರಂಡಿ ವ್ಯವಸ್ಥೆಗೆ ಹರಿಯ ಬಿಡುವುದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿಯೇ ಈ ನೀರಿಗೆ ಭಾರಲೋಹಗಳೂ ಸೇರಿಕೊಳ್ಳುತ್ತಿವೆ’ ಎನ್ನುತ್ತಾರೆ ಭೂಜಲ ವಿಜ್ಞಾನಿ ಡಾ.ವಿ.ಎಸ್‌.ಪ್ರಕಾಶ್‌.

‘ಪೇಂಟ್‌, ಫಿನಾಯಿಲ್‌ಗಳೂ ಒಳಚರಂಡಿ ಸೇರುತ್ತವೆ. ಇಂತಹ ಅಂಶಗಳನ್ನೆಲ್ಲ ಜಲಮಂಡಳಿ ಪರಿಗಣಿಸಿಯೇ ಇಲ್ಲ. ದ್ವಿತೀಯ ಹಂತದ ಶುದ್ಧೀಕರಣದಿಂದ ಇಂತಹ ರಾಸಾಯನಿಕಗಳು ನೀರಿನಿಂದ ಬೇರ್ಪಡುವುದಿಲ್ಲ. ಈ ಯೋಜನೆಯೇನೋ ಒಳ್ಳೆಯದೇ. ಆದರೆ, ತೃತೀಯ ಹಂತದ ಶುದ್ಧೀಕರಣಕ್ಕೆ ಒಳಪಡಿಸದೆಯೇ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಯಬಿಡುವುದು ಅಪಾಯಕಾರಿ. ಈಗಿನ ರೀತಿಯಲ್ಲೇ ಈ ಯೋಜನೆ ಮುಂದುವರಿಸಿದರೆ ಸರಿಪಡಿಸಲಾಗದ ಅನಾಹುತ ಕಾದಿದೆ’ ಎಂದು ಅವರು ಎಚ್ಚರಿಸುತ್ತಾರೆ.

ದ್ವಿತೀಯ ಹಂತದ ಶುದ್ಧೀಕರಣ ವ್ಯವಸ್ಥೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆಯೂ ಅನೇಕ ಅನುಮಾನಗಳಿವೆ. ಒಂದು ವೇಳೆ ನೀರಿನ ಶುದ್ಧೀಕರಣ ಸರಿಯಾಗಿ ನಡೆಯದಿದ್ದರೆ, ಆ ಬಗ್ಗೆ ನಿಗಾ ಇಡುವ ವ್ಯವಸ್ಥೆಯೂ ಇಲ್ಲ. ಭವಿಷ್ಯದಲ್ಲಿ ಈ ಯೋಜನೆಯನ್ನು ಸುಸ್ಥಿರವಾಗಿ ನಿರ್ವಹಿಸುವ ಬಗ್ಗೆಯೂ ಮೌನವಹಿಸಲಾಗಿದೆ.

ಕೋರ್ಟ್‌ ಚಾಟಿ ಬೀಸಿದ ಬಳಿಕ ಸಣ್ಣ ನೀರಾವರಿ ಇಲಾಖೆಯೂ ಎಚ್ಚೆತ್ತಿದೆ. ದ್ವಿತೀಯ ಹಂತದ ಸಂಸ್ಕರಣೆಯ ಬಳಿಕ ಅದನ್ನು ಕೆರೆಗಳಿಗೆ ಹರಿಸುವ ಮುನ್ನ ನೀರನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲು ಸಿದ್ಧತೆ ನಡೆಸುತ್ತಿದೆ.

ತ್ಯಾಜ್ಯ ನೀರು ಶುದ್ಧೀಕರಣ ಹೇಗೆ?‌
ತ್ಯಾಜ್ಯ ನೀರನ್ನು ಜಲ ಮಂಡಳಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಸಂಸ್ಕರಣೆಗೆ ಒಳಪಡಿಸುತ್ತಿದೆ.

ಪ್ರಾಥಮಿಕ ಹಂತದ ಸಂಸ್ಕರಣೆಯಲ್ಲಿ ನೀರಿನಲ್ಲಿ ಕರಗಿರುವ ನೈಟ್ರೇಟ್‌, ಫಾಸ್ಫೇಟ್‌, ಸಲ್ಫೇಟ್‌, ಪ್ರೋಟೀನ್‌ನಂತಹ ಪದಾರ್ಥಗಳನ್ನು ಹಾಗೂ ಕರಗದ ಘನಪದಾರ್ಥಗಳನ್ನು (ಪ್ಲಾಸ್ಟಿಕ್‌, ಕಸ, ಕಡ್ಡಿ ಇತ್ಯಾದಿ ) ಪ್ರತ್ಯೇಕಿಸಲಾಗುತ್ತದೆ.

ದ್ವಿತೀಯ ಹಂತದ ಶುದ್ಧೀಕರಣದಲ್ಲಿ ರಾಡಿಯನ್ನು ಬೇರ್ಪಡಿಸುವ ಹಾಗೂ ಆಮ್ಲಜನಕ ಹಾಯಿಸುವ (ಎರೇಷನ್) ಪ್ರಕ್ರಿಯೆಗಳು ನಡೆಯುತ್ತವೆ. ಏರೋಬಿಕ್‌ ಬಯಾಲಾಜಿಕಲ್‌ ಸಂಸ್ಕರಣೆ ನಡೆಯುವ ಈ ಹಂತದಲ್ಲಿ ಸೂಕ್ಷ್ಮಾಣುಜೀವಿಗಳನ್ನು ಹಾಗೂ ನೀರಿನಲ್ಲಿ ಕರಗಿರುವ ಕೆಲವೊಂದು ಕೊಬ್ಬಿನಾಂಶ, ಪ್ರೋಟೀನ್‌ ಅಂಶ, ನೈಟ್ರೇಟ್‌, ಫಾಸ್ಪೇಟ್ ಹಾಗೂ ಜೈವಿಕ–ರಾಸಾಯನಿಕ ಪದಾರ್ಥಗಳನ್ನು ಬೇರ್ಪಡಿಸಲಾಗುತ್ತದೆ. ನೀರಿನಲ್ಲಿ ಬಯಾಲಾಜಿಕಲ್‌ ಆಕ್ಸಿಜನ್‌ ಡಿಮಾಂಡ್‌ (ಬಿಒಡಿ) ಪ್ರಮಾಣವನ್ನು ನಿಯಂತ್ರಣಕ್ಕೆ ತರಲಾಗುತ್ತದೆ. ಆದರ ಭಾರ ಲೋಹಗಳು ಹಾಗೂ ಕೆಲವು ಅಪಾಯಕಾರಿ ರಾಸಾಯನಿಕಗಳು ನೀರಿನಲ್ಲಿ ಹಾಗೆಯೇ ಉಳಿಯುತ್ತವೆ.

ದ್ವಿತೀಯ ಹಂತದ ಶುದ್ಧೀಕರಣದ ಬಳಿಕವೂ ಸೀಸ, ಸತು, ತವರ, ಕ್ಯಾಡ್ಮಿಯಂ, ಕೋಬಾಲ್ಟ್‌, ನಿಕ್ಕೆಲ್‌, ಕ್ರೋಮಿಯಂ ಹಾಗೂ ಪಾದರಸದಂತಹ ಭಾರಲೋಹಗಳು ಹಾಗೂ ಕೆಲವೊಂದು ಸೂಕ್ಷ್ಮಾಣುಜೀವಿಗಳು ಉಳಿಸಿದ್ದರೆ, ಅದನ್ನು ತೃತೀಯ ಹಂತದ ಸಂಸ್ಕರಣೆ ಮೂಲಕ ಶುದ್ಧೀಕರಿಸಬೇಕಾಗುತ್ತದೆ. ನೇರಳಾತೀತ ಕಿರಣಗಳನ್ನು ಹಾಯಿಸುವುದು, ರಿವರ್ಸ್‌ ಆಸ್ಮೋಸಿಸ್‌ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ ಎನ್ನುತ್ತಾರೆ ವಿ.ಎಸ್‌.ಪ್ರಕಾಶ್‌.

‘ಮೂರನೇ ಹಂತದ ಶುದ್ಧೀಕರಣ ದುಬಾರಿ ನಿಜ. ಕೆಲವೊಂದು ಭಾರಲೋಹಗಳು ಆಹಾರ ಸರಪಣಿ ಮೂಲಕ ಮನುಷ್ಯನ ದೇಹವನ್ನು ಸೇರಿಕೊಂಡರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಬೇಕಿದ್ದರೆ ಸರ್ಕಾರ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳದೇ ತೃತೀಯ ಹಂತದ ಸಂಸ್ಕರಣೆಗೆ ಮುಂದಾಗಬೇಕು. ಪ್ರತಿ ಹಂತದಲ್ಲೂ ಶುದ್ಧೀಕರಣ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆ ಎಂಬುದನ್ನು ಕಾವಲು ಕಾಯಬೇಕು’ ಎಂದು ಅವರು ಒತ್ತಾಯಿಸಿದರು.

‘ತೃತೀಯ ಹಂತದ ಶುದ್ಧೀಕರಣದ ಬಗ್ಗೆ ಸರ್ಕಾರದ ಹಂತದಲ್ಲೇ ನಿರ್ಧಾರ ಕೈಗೊಳ್ಳಬೇಕು’ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಹೋರಾಟದ ಹಾದಿ

2018 ಜೂನ್‌ 2: ಕೆರೆಗಳಿಗೆ ನೀರು ಹರಿಸಲು ಆರಂಭ

2018 ಜೂನ್‌ 17: ನೀರು ಹರಿಸುವುದು ನಿಲ್ಲಿಸುವಂತೆ ಕೋರಿ ಶಾಶ್ವತ ನೀರಾವರಿ ಸಮಿತಿಯಿಂದ ಹೈಕೋರ್ಟ್‌ಗೆ ರಿಟ್‌ ಅರ್ಜಿ

2018 ಜುಲೈ 4: ಸಣ್ಣ ನೀರಾವರಿ ಇಲಾಖೆ, ಜಲಮಂಡಳಿ, ಕೆಎಸ್‌ಪಿಸಿಬಿಗೆ ಹೈಕೋರ್ಟ್‌ನಿಂದ ನೋಟಿಸ್‌

2018 ಜುಲೈ 18: ನೊರೆ ಕಾಣಿಸಿಕೊಂಡ ಕಾರಣಕ್ಕೆ ಕೆರೆಗೆ ಹರಿಸುವುದನ್ನು ಸ್ಥಗಿತಗೊಳಿಸಿದ ಸಣ್ಣ ನೀರಾವರಿ ಇಲಾಖೆ

2018 ಜುಲೈ 24: ನೀರು ಹರಿಸುವುದಕ್ಕೆ ಹೈಕೋರ್ಟ್ ತಡೆ

2018 ಸೆ.28: ತಡೆಯಾಜ್ಞೆ ತೆರವು

2018 ಡಿ 05: ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಕೋರಿ ಶಾಶ್ವತ ನೀರಾವರಿ ಸಮಿತಿಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ

2019 ಜ.07: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ

‘ಭಿಕ್ಷುಕರೂ ಹಳಸಿದ ಅನ್ನ ನೀಡಿದರೆ ಮುಟ್ಟುವುದಿಲ್ಲ’
ಇಂತಹ ಮಹತ್ತರ ನಿರ್ಧಾರ ಕೈಗೊಳ್ಳುವ ಮುನ್ನ ಕನಿಷ್ಠ ಪಕ್ಷ ಒಂದು ವರ್ಷವಾದರೂ ಈ ನೀರಿನ ಮೂಲದ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಬೇಕಿತ್ತು. ಅಂತಹ ಯಾವುದೇ ಪ್ರಯತ್ನಗಳಾಗಿಲ್ಲ.

ಮಳೆನೀರಿನಿಂದ ತುಂಬಬೇಕಾದ ಅಂತರ್ಜಲವನ್ನು ತ್ಯಾಜ್ಯ ನೀರಿನಿಂದ ತುಂಬಿಸಲು ಹೊರಟಿರುವುದೇ ಅವೈಜ್ಞಾನಿಕ. ರಾಸಾಯನಿಕಗಳು ಎಲ್ಲಿಂದ ಒಳಚರಂಡಿ ಜಾಲವನ್ನು ಸೇರಿಕೊಳ್ಳುತ್ತಿವೆ ಎಂಬುದೇ ಜಲಮಂಡಳಿಗೆ ಗೊತ್ತಿಲ್ಲ. ಕೈಗಾರಿಕೆಗಳು

ಆಂಜನೇಯ ರೆಡ್ಡಿ
ಆಂಜನೇಯ ರೆಡ್ಡಿ

ರಾಸಾಯನಿಕಯುಕ್ತ ತ್ಯಾಜ್ಯನೀರನ್ನು ಹೊರಬಿಡುತ್ತಿರುವ ಕೈಗಾರಿಕೆಗಳಿಗೆ ಕಡಿವಾಣ ಹಾಕಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕೈಚೆಲ್ಲಿ ಕುಳಿತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಂಡ ಗಡಿಬಿಡಿಯ ನಿರ್ಧಾರದಿಂದ ಕೆರೆಗಳು ಕಲುಷಿತಗೊಳ್ಳಲಿವೆ ಎಂಬುದು ಮನದಟ್ಟಾಗುತ್ತಲೇ ಇದರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದೆವು.

ದ್ವಿತೀಯ ಹಂತದಲ್ಲಿ ಸಂಸ್ಕರಣೆಗೆ ಒಳಪಡಿಸಿದ ನಂತರವಷ್ಟೇ ನೀರನ್ನು ಕೊಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಈ ಹಂತದ ಸಂಸ್ಕರಣೆ ಬಳಿಕ ನೀರಿನಲ್ಲಿ ಇರಬಾರದಾದ ಅನೇಕ ಅಪಾಯಕಾರಿ ರಾಸಾಯನಿಕ ಪದಾರ್ಥಗಳು ಕೆರೆಗಳಿಗೆ ಪೂರೈಸಿರುವ ನೀರಿನಲ್ಲಿ ಪತ್ತೆಯಾಗಿವೆ. ಈ ನೀರು, ಮರುಬಳಕೆ ಮಾಡಬಹುದಾದ ನೀರಿನ ಗುಣಮಟ್ಟದ ಕುರಿತು ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗೆ ಅನುಗುಣವಾಗಿಲ್ಲ.

ಕೆರೆಗಳ ಮೂಲಕ ಅಂತರ್ಜಲ ಭರ್ತಿಯಾಗುವಾಗ ಕಶ್ಮಲಗಳು ತನ್ನಿಂದ ತಾನೆ ಸೋಸಲ್ಪಡುತ್ತವೆ ಎಂಬ ಸರ್ಕಾರದ ವಾದವೇ ಹಾಸ್ಯಾಸ್ಪದ. ಕೆರೆ ತುಂಬಿದ ಬಳಿಕ ಅಕ್ಕ ಪಕ್ಕದ ಕೊಳವೆಬಾವಿಗಳ ನೀರೂ ಕಲುಷಿತವಾಗುತ್ತಿದೆ. ತ್ಯಾಜ್ಯ ನೀರಿನಲ್ಲಿ ಭಾರಲೋಹಗಳು ಪತ್ತೆಯಾಗಿವೆ ಎಂದು ಐಐಎಸ್ಸಿಯ ಪರಿಸರ ವಿಜ್ಞಾನಿಗಳು ನೀಡಿದ ವರದಿಯನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದೆ. ಅದರ ಬದಲು ಖಾಸಗಿ ಸಂಸ್ಥೆಯೊಂದರಿಂದ ತಮಗೆ ಬೇಕಾದಂತೆ ವರದಿ ಸಿದ್ಧಪಡಿಸಿದೆ. ಕೆರೆಗಳಿಗೆ ನೀರು ಹಾಯಿಸಲು ಆರಂಭಿಸಿದ ಬಳಿಕವೂ ಹರಿಸಿರುವ ನೀರನ್ನು ಕ್ಷಣ ಕ್ಷಣವೂ ಪರಿಶೀಲನೆಗೆ ಒಳಪಡಿಸುವ ಯಾವುದೇ ಕ್ರಮವನ್ನು ಜಲಮಂಡಳಿಯಾಗಲೀ, ಸಣ್ಣ ನೀರಾವರಿ ಇಲಾಖೆಯಾಗಲಿ, ಕೆಎಸ್‌ಪಿಸಿಬಿಯಾಗಲೀ ನಡೆಸಿಲ್ಲ. ಎಲ್ಲರಿಗೂ ಈ ಯೋಜನೆ ಜಾರಿಗೊಳಿಸುವ ಹಪಾ ಹಪಿ ಇದೆಯೇ ಹೊರತು, ಈ ನೀರು ಭವಿಷ್ಯದಲ್ಲಿ ಏನೆಲ್ಲ ಸಮಸ್ಯೆ ತಂದೊಡ್ಡಬಲ್ಲುದು ಎಂದು ಯಾರೂ ತಲೆ ಕೆಡಿಸಿಕೊಂಡಿಲ್ಲ.

ಹಳಸಿದ ಅನ್ನವನ್ನು ನೀಡಿದರೆ, ಅದನ್ನು ಸ್ವೀಕರಿಸುವುದಕ್ಕೆ ಭಿಕ್ಷುಕನೂ ಹಿಂದೇಟು ಹಾಕುತ್ತಾನೆ. ಅಂತಹದ್ದರಲ್ಲಿ ಸ್ವಚ್ಛ ಮಳೆನೀರಿನಿಂದ ಭರ್ತಿಯಾಗುತ್ತಿದ್ದ ಕೆರೆಗಳಿಗೆ ವಿಷಯುಕ್ತ ನೀರು ಹರಿಸುವುದನ್ನು ಜನ ಒಪ್ಪಿಕೊಳ್ಳುವುದಾದರೂ ಹೇಗೆ? ಬರಗಾಲ ಇದೆ ಎಂಬ ಮಾತ್ರಕ್ಕೆ ವಿಷಯುಕ್ತ ನೀರನ್ನು ನೀಡಿದರೆ ಸುಮ್ಮನಿರಲು ಸಾಧ್ಯವೇ?

–ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT