‘ನೀರನ್ನು ಸರಿಯಾಗಿ ಶುದ್ಧೀಕರಿಸಿ– ಲೋಪ ಸರಿಪಡಿಸಿ’

7
ಕೆ.ಸಿ.ವ್ಯಾಲಿ ಯೋಜನೆ: ಜನರ ಒತ್ತಾಯ

‘ನೀರನ್ನು ಸರಿಯಾಗಿ ಶುದ್ಧೀಕರಿಸಿ– ಲೋಪ ಸರಿಪಡಿಸಿ’

Published:
Updated:

ಬೆಂಗಳೂರು: ಬೆಂಗಳೂರಿನ ಒಳಚರಂಡಿಯ ನೀರನ್ನು ಶುದ್ಧೀಕರಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ  ಕೆ.ಸಿ.ವ್ಯಾಲಿ ಯೋಜನೆ ಕುರಿತು ‘ಪ್ರಜಾವಾಣಿಯ ‘ಭಾನುವಾರ’ದ ಸಂಚಿಕೆಯಲ್ಲಿ ಪ್ರಕಟವಾದ ಕೆ.ಸಿ.ವ್ಯಾಲಿ ಯೋಜನೆ ಕುರಿತ ‘ಒಳನೋಟ’ಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಲು ಕ್ರಮ ಕೈಗೊಳ್ಳುವ ಮೂಲಕ ಯೋಜನೆಯ ಲೋಪಗಳನ್ನು ಸರಿಪಡಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ. ಸಾರ್ವಜನಿಕರ ಪ್ರಮುಖ ಪ್ರತಿಕ್ರಿಯೆಗಳು ಇಲ್ಲಿವೆ.

* ಅಂತರ್ಜಲ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದರ ಬದಲಿಗೆ ತ್ಯಾಜ್ಯವನ್ನು ಕೆರೆಗಳಿಗೆ ಬಿಟ್ಟು ಜೀವಜಂತುಗಳ ಮಾರಣಹೋಮಕ್ಕೆ ಸರ್ಕಾರ ಮುಂದಾಗಿದೆ. ನೀರು ಹರಿಸುವ ಹೆಸರಿನಲ್ಲಿ ವಿಷಪ್ರಾಶನ ಮಾಡಿದಂತಾಗಿದೆ.

ಆಶಾಬಾಯಿ, ಅರ್.ಜಾಲಹಳ್ಳಿ, ಬೆಂಗಳೂರು

* ಕೋಲಾರ–ಚಿಕ್ಕಬಳ್ಳಾಪುರಕ್ಕೆ ವಿಷಯುಕ್ತ ನೀರನ್ನು ಕೊಡುವುದರ ಮೂಲಕ ಜನರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತಾಗಿದೆ. ಇದು ಭ್ರಷ್ಟ ರಾಜಕಾರಣಿಗಳ ಅಮಾನವೀಯ ನಡೆಯನ್ನು ತೋರಿಸುತ್ತದೆ. ಈ ಯೋಜನೆ ಸ್ಥಗಿತಗೊಳಿಸಿ, ಮೇಕೆದಾಟು ಯೋಜನೆ ಜಾರಿಗೊಳಿಸಲು ಮುಂದಾಗಲಿ.

ಯಲುವಹಳ್ಳಿ ಸೊಣ್ಣೇಗೌಡ, ಅಧ್ಯಕ್ಷ, ಚಿಕ್ಕಬಳ್ಳಾಪರ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ

* ನೀರನ್ನು ಸಂಸ್ಕರಿಸಲು ಆಗದಿದ್ದರೆ ಪೂರೈಕೆ ಮಾಡುವುದನ್ನು ನಿಲ್ಲಿಸಿ ಪರ್ಯಾಯ ಮಾರ್ಗ ಹುಡುಕಬೇಕಿತ್ತು. ಅದನ್ನು ಬಿಟ್ಟು ಕೋಟಿ ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಿದ್ದು ನಿಜಕ್ಕೂ ಅಕ್ಷಮ್ಯ.

ಸುಕನ್ಯಾ ಶಿವಶಂಕರ್, ಬೆಂಗಳೂರು

* ಬೆಂಗಳೂರಿನ ತ್ಯಾಜ್ಯ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದು, ಅದು ಕೃಷಿಗೆ ಬಳಕೆಯಾಗುತ್ತಿದೆ ಎಂಬ ಸರ್ಕಾರದ ವಿವರಣೆ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚುವ ಕೆಲಸ. ಇದರ ಹಿಂದೆ ಎಷ್ಟು ಕಾಣದ ಕೈಗಳ ಪವಾಡ ಇದೆಯೋ?

ಎಂ.ಎಸ್.ಲೀಲಾವತಿ, ಶಿವಮೊಗ್ಗ

* ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ರಾಜಕಾರಣಿಗಳಿಗೆ ಬಲವಂತವಾಗಿ ಚರಂಡಿ ನೀರನ್ನು ಅವರಿಗೆ ಕುಡಿಸಬೇಕು. ಆಗಲೇ ನೋವು ಅರ್ಥವಾಗುತ್ತದೆ.

ಸಾಬಯ್ಯ ಕಲಾಲ್, ಯಾದಗಿರಿ

* ಅಸಹಾಯಕ ಜನಗಳಿಗೆ ಶುದ್ಧ ನೀರು ಕೊಡದಿದ್ದರೂ ಪರವಾಗಿಲ್ಲ. ವಿಷಯುಕ್ತ ನೀರನ್ನು ಕೊಡಬೇಡಿ. ಈ ನೀರಿನಿಂದ ಮುಂದಿನ ತಲೆಮಾರುಗಳು ಮಾರಕ ರೋಗಗಳಿಗೆ ತುತ್ತಾಗಿ ನರಳಬೇಕಾಗಿದೆ.

ಪ್ರಕಾಶ್, ಎ.ಎಂ.ಹಳ್ಳಿ, ಕನಕಪುರ

* ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನರು ನೀರಿಲ್ಲದೆ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಕೆ.ಸಿ.ವ್ಯಾಲಿ ಯೋಜನೆ ಜಾರಿಗೊಳಿಸಿ ಜನ ಮತ್ತು ಜಾನುವಾರುಗಳಿಗೆ ವಿಷ ಕೊಟ್ಟು ಶಾಶ್ವತವಾಗಿ ಖಾಲಿ ಮಾಡಿಸುತ್ತಿದೆ. ಮುಗ್ಧ ಜನರಿಗೆ ಯಾಕೆ ಇಂತಹ ಶಿಕ್ಷೆ?

ಟಿ.ಸಿ.ಭವ್ಯ, ಕೋಲಾರ

 ‘ಜನರಿಗೆ ತೊಂದರೆ ಇಲ್ಲ’

‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರುವ ನೀರಿನಿಂದ ಯಾವುದೇ ತೊಂದರೆಯಾಗುತ್ತಿಲ್ಲ. ರೈತಪರ ಯೋಜನೆಗೆ ಅಡ್ಡಗಾಲು ಹಾಕುವವರು ಉದ್ಧಾರ ಆಗುವುದಿಲ್ಲ.

ಕೆ.ಶ್ರೀನಿವಾಸಗೌಡ, ಕೋಲಾರ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !