ಕೇರಳದ ಲಾಬಿ ವಿರುದ್ಧ ಕೇಂದ್ರಕ್ಕೆ ಪತ್ರ

7
ಬಂಡಿಪುರ ರಾತ್ರಿ ವಾಹನ ಸಂಚಾರ/ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾರದಂತೆ ‘ಕೈಚಳಕ’

ಕೇರಳದ ಲಾಬಿ ವಿರುದ್ಧ ಕೇಂದ್ರಕ್ಕೆ ಪತ್ರ

Published:
Updated:
Deccan Herald

ಬೆಂಗಳೂರು: ಬಂಡಿಪುರ ಹುಲಿ ಸಂಕ್ಷಿತ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕಿರುವ ನಿರ್ಬಂಧ ತೆರವುಗೊಳಿಸಲು ಕೇರಳದ ಟಿಂಬರ್‌ ಲಾಬಿ ಇನ್ನಿಲ್ಲದ ಪ್ರಯತ್ನ ನಡೆಸಿದೆ.

ಹಿಂದಿನ ಸರ್ಕಾರದಲ್ಲಿ ಇದೇ ಪ್ರಸ್ತಾಪ ಬಂದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅದನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದರು. ಈಗ ಸಮ್ಮಿಶ್ರ ಸರ್ಕಾರ ಇರುವುದರಿಂದ ಟಿಂಬರ್‌ ಲಾಬಿ ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿದೆ ಎಂದು ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತಿರುವ ವಕೀಲ ಜಿ.ಆರ್‌.ಮೋಹನ್‌ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕಾರ್ಯದರ್ಶಿ ವೈ.ಎಸ್‌.ಮಲಿಕ್‌ ಅವರಿಗೆ ಪತ್ರ ಬರೆದು, ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

‘ಕೇರಳದ ಕೆಲವು ಸಂಸತ್‌ ಸದಸ್ಯರು ಟಿಂಬರ್‌ ಲಾಬಿ ಒತ್ತಾಸೆಯಾಗಿ ನಿಂತಿದ್ದಾರೆ. ಇವರು ಎಲ್ಲ ಹಂತಗಳಲ್ಲೂ ಪ್ರಭಾವ ಬೀರುತ್ತಿದ್ದಾರೆ. ಈ ಸಂಬಂಧ ವಿಶೇಷ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದೇವೆ. ಆದರೆ, ಅದು ವಿಚಾರಣೆಗೇ ಬರದಂತೆ ಕೇರಳದ ಲಾಬಿ ನೋಡಿಕೊಳ್ಳುತ್ತಿದೆ. ಈ ಅರ್ಜಿಯ ವಿಚಾರಣೆ ಜುಲೈ 23 ಕ್ಕೆ ನಿಗದಿ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಕೈ ಬಿಡಲಾಯಿತು. ಆ ಬಳಿಕ ಆ. 6 ಕ್ಕೆ ವಿಚಾರಣೆ ನಿಗದಿ ಮಾಡಲಾಗಿತ್ತು. ಈಗ ಅದನ್ನೂ ಪಟ್ಟಿಯಿಂದ ತೆಗೆಸಿ ಹಾಕಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ವಿಷಯವನ್ನು ತಕ್ಷಣವೇ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತರಲು ಉದ್ದೇಶಿಸಲಾಗಿದೆ.  ವಿಚಾರಣೆ ವಿಳಂಬ ಮಾಡುವುದರಿಂದ, ಟಿಂಬರ್‌ ಮತ್ತು ಗುತ್ತಿಗೆ ಲಾಬಿ ರಾಜಕಾರಣಿಗಳ ಮೂಲಕ ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ. ಇದರಿಂದ ಬಂಡಿಪುರ ವ್ಯಾಪ್ತಿಯಲ್ಲಿ ಸರಿಪಡಿಸಲಾಗದಷ್ಟೂ ಹಾನಿ ಆಗುತ್ತದೆ ಎಂದಿದ್ದಾರೆ.

ಈ ಹೆದ್ದಾರಿಯಲ್ಲಿ 25 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಈ ವೇಳೆಯಲ್ಲಿ ವನ್ಯಜೀವಿಗಳು ಸಂಚರಿಸುವುದರಿಂದ ಅವುಗಳ ಮುಕ್ತ ಓಡಾಟಕ್ಕೆ ಭಂಗ ಉಂಟಾಗುತ್ತದೆ ಮತ್ತು ಈ ಹಿಂದೆ ಸಾಕಷ್ಟು ಕಾಡು ಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿವೆ. ಅಲ್ಲದೆ, ಸರ್ಕಾರ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡುವುದರಿಂದ ಹೈಕೋರ್ಟ್‌ ಆದೇಶದ ಉಲ್ಲಂಘನೆಯೂ ಆಗಲಿದೆ ಎಂದು ಹೇಳಿದ್ದಾರೆ.

‘ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಸ್ತೆ ಬಿಟ್ಟು ವಾಹನಗಳಿಗೆ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಬೇಕು ಎಂಬ ಹೈಕೋರ್ಟ್‌ ನಿರ್ದೇಶನ ಪಾಲನೆ ಮಾಡದೇ ಇಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ವಿಶೇಷ ಅರ್ಜಿ ಬಾಕಿ ಇದೆ. ಅದರ ವಿಚಾರಣೆ ಆಗದ ಹೊರತು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ರಾತ್ರಿ ವೇಳೆ ನಿರ್ಬಂಧ ತೆಗೆಯಲು ಕರ್ನಾಟಕದ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರು ಒಪ್ಪಿದ್ದಾರೆ ಎಂದು ನೀವು(ಮಲಿಕ್) ಬರೆದಿರುವ ಸಿವಿಲ್‌ ಮತ್ತು ಕ್ರಿಮಿನಲ್‌ ಸ್ವರೂಪದ ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದು ಮೋಹನ್‌ ಪತ್ರದಲ್ಲಿ ತಿಳಿಸಿದ್ದಾರೆ.

ಎಲಿವೇಟೆಡ್‌ ರಸ್ತೆಗೆ ಅವಕಾಶ ಬೇಡ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವುದೂ ನ್ಯಾಯಾಂಗ ನಿಂದನೆ ಆಗುತ್ತದೆ. ರಾಜ್ಯ ಸರ್ಕಾರ ರಸ್ತೆ ಗುತ್ತಿಗೆದಾರರ ಲಾಬಿಗೆ ಮಣಿದು ಇಂತಹದ್ದೊಂದು ವ್ಯವಸ್ಥೆ ಮಾಡಲು ಮುಂದಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಷ್ಟ್ರೀಯ ಉದ್ಯಾನಕ್ಕೆ ಕೈ ಹಾಕದೇ ಪರ್ಯಾಯ(ರಾಜ್ಯ ಹೆದ್ದಾರಿ ಹುಣಸೂರು, ಗೋಣಿಕೊಪ್ಪ, ಕುಟ್ಟ, ಸುಲ್ತಾನ್‌ ಬತ್ತೇರಿ) ಮಾರ್ಗದ ಬಗ್ಗೆ ಯೋಚಿಸುವುದು ಸೂಕ್ತ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !