ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ‘ಮಂಗ’ನ ಜಾಡ್ಯ

Last Updated 26 ಜನವರಿ 2019, 20:13 IST
ಅಕ್ಷರ ಗಾತ್ರ

ದಾವಣಗೆರೆ: ಮಂಗನ ಕಾಯಿಲೆ ಹೊಸದಲ್ಲ. ಸರ್ಕಾರದ ನಿರ್ಲಕ್ಷ್ಯವೂ ಹೊಸದಲ್ಲ. ಆದರೆ, ಒಂದೇ ತಿಂಗಳಲ್ಲಿ ಇಷ್ಟೊಂದು ಸಾವು–ನೋವುಗಳಾಗಿರುವುದು ಹೊಸತು. ಮಂಗನ ಕಾಯಿಲೆ ಕಾಣಿಸಿಕೊಂಡ ಆರು ದಶಕಗಳಿಂದಲೂ ಮಲೆನಾಡಿನ ಜನ ಈ ಕಾಯಿಲೆಯೊಂದಿಗೆ ಗುದ್ದಾಡಿಕೊಂಡೇ ಬದುಕಿದ್ದರು. ಕಾಯಿಲೆ ಕಂಡ ಸ್ಥಳಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹೋಗಿ ಲಸಿಕೆ ಹಾಕುವ ಶಾಸ್ತ್ರ ಮುಗಿಸುತ್ತಿದ್ದರು. ಆದರೆ, ಈ ಬಾರಿ ದಿನದಿಂದ ದಿನಕ್ಕೆ ಹಬ್ಬಿ, ಹರಡುತ್ತಿರುವುದನ್ನು ನೋಡಿದರೆ ಇದಕ್ಕೆ ಕೊನೆ, ಮೊದಲು ಇಲ್ಲ ಎಂಬ ಆತಂಕ ಎದುರಾಗಿದೆ.

ಕೆಎಫ್‌ಡಿ (ಕ್ಯಾಸನೂರು ಮಂಗನ ಕಾಯಿಲೆ)ಗೆ ಈ ವರ್ಷದ ಮೊದಲ ಬಲಿ ಸಾಗರದ ಕಾರ್ಗಲ್‌ ಸಮೀಪದ ಕುಳಕಾರಿನಲ್ಲಿ. ಎರಡನೆಯದ್ದು ಅಲ್ಲಿಯೇ ಅರಳಗೋಡು ಗ್ರಾಮ ಪಂಚಾಯಿತಿಯ ಮಂಡವಳ್ಳಿ ಗ್ರಾಮದಲ್ಲಿ, ಮೂರನೆಯದ್ದು ಇನ್ನೂ ಹತ್ತಿರದ ವಾಟೇಮಕ್ಕಿಯಲ್ಲಿ. ಈ ಮೂರೂ ಗ್ರಾಮಗಳಲ್ಲಿ ಕಳೆದ ವರ್ಷ ಕೆಎಫ್‌ಡಿ ಉಣುಗು ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆಗೂ ಈ ಮಾಹಿತಿ ಗೊತ್ತಿತ್ತು. ಮುಂಜಾಗ್ರತೆಯಾಗಿ ಇಲ್ಲಿಯ ಜನರಿಗೆ ಅಂದೇ ಲಸಿಕೆ ಹಾಕಬೇಕಿತ್ತು. ಕೆಎಫ್‌ಡಿ ಉಣುಗು ಕಾಣಿಸಿಕೊಂಡಿದೆ ಎಂದು ಸರ್ಕಾರಕ್ಕೂ ವರದಿ ಮಾಡಬೇಕಿತ್ತು. ಆದರೆ, ಅಧಿಕಾರಿಗಳ ಈ ಅಸಡ್ಡೆಯಿಂದಾಗಿ ಕಾಡಂಚಿನ ಜನ ಈಗ ಸಾವಿನ ಭೀತಿ, ಸೂತಕದ ನೋವು, ಸೋಂಕಿನ ಆತಂಕದಿಂದ ಬದುಕಬೇಕಾಗಿದೆ.

ಈ ಒಂದು ತಿಂಗಳಿನಿಂದ ಮಂಗನ ಕಾಯಿಲೆಯಿಂದ ಮೃತಪಟ್ಟವರು 11 ಜನ. ಸರ್ಕಾರದ ಲೆಕ್ಕದಲ್ಲಿ 9 ಜನ. ರಕ್ತ ಪರೀಕ್ಷೆ, ಚಿಕಿತ್ಸೆಗಳು ನಡೆಯುವ ಮೊದಲೇ ಮೂವರು ಮೃತಪಟ್ಟಿರುವುದರಿಂದ ಸರ್ಕಾರಿ ಲೆಕ್ಕದಲ್ಲಿ ಅವು ಕೆಎಫ್‌ಡಿ ಬಾಧಿತ ಸಾವುಗಳಲ್ಲ! ಆದರೆ, ತೀವ್ರ ಜ್ವರ, ನೋವು, ಸಂಕಟಗಳಿಂದ ತಮ್ಮ ಕಣ್ಣೆದುರೇ ಸಾವು ಕಂಡಿದ್ದನ್ನು ಕುಟುಂಬಸ್ಥರಿಗೆ ಮರೆಯಲು ಆಗುತ್ತಿಲ್ಲ.

ಶಿವಮೊಗ್ಗ, ಉಡುಪಿ, ಶಿರಸಿ ಭಾಗಗಳಲ್ಲಿ ಈಗ ಪ್ರತಿನಿತ್ಯ ಮಂಗಗಳ ಶವಗಳು ಪತ್ತೆಯಾಗುತ್ತಿವೆ. ಕಾಯಿಲೆ ಬಾಧಿತರ ಸಂಖ್ಯೆಯೂ ಏರ ತೊಡಗಿದೆ. ಸಾವಿನ ಸರಣಿಯೂ ಮುಂದುವರಿದಿದೆ. ಇಂತಹ ವೇಳೆಯಲ್ಲಿ ಆಡಳಿತದ ಮೊದಲ ಆದ್ಯತೆ ಮಂಗನ ಕಾಯಿಲೆ ನಿಯಂತ್ರಣ ಆಗಬೇಕಿತ್ತು. ಆದರೆ, ಶಿವಮೊಗ್ಗದ ಜಿಲ್ಲಾಡಳಿತ ‘ಉತ್ಸವ’ದಲ್ಲಿ ಮುಳುಗಿದೆ. ‘ತುರ್ತು ಕ್ರಮ ಕೈಗೊಳ್ಳಲಾಗಿದೆ. ಸಾಮೂಹಿಕ ಲಸಿಕೆ ಅಭಿಯಾನ ಮುಂದುವರಿದಿದೆ. ಇನ್ನಷ್ಟು ಔಷಧಗಳು ಬರಬೇಕಾಗಿದೆ’ ಎಂಬ ಸಬೂಬುಗಳನ್ನು ನೀಡುವ ಜಿಲ್ಲಾಡಳಿತಕ್ಕೆ ಮಾನವೀಯ ಮುಖ ಇಲ್ಲ ಎಂಬ ಆರೋಪ ಜೋರಾಗಿ ಕೇಳಿಬರುತ್ತಿದೆ.

ಕಾಯಿಲೆ ಕಾಣಿಸಿಕೊಂಡವರಿಗೆ ಚಿಕಿತ್ಸೆ ನೀಡುವ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಮಲೆನಾಡಿನ ಸುತ್ತಮುತ್ತ ಇಲ್ಲ. ಮೊದಲು ಸಾಗರ, ನಂತರ ಶಿವಮೊಗ್ಗ, ಆಮೇಲೆ ಮಣಿಪಾಲದ ಕೆಎಂಸಿ... ಈ ಆಸ್ಪತ್ರೆಗಳ ಹಾದಿ ಎಷ್ಟೋ ಜನರ ಪಾಲಿಗೆ ಸಾವಿನ ಹಾದಿಯಾಗಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಬಹಳಷ್ಟು ಜನ ಪ್ರಾಣ ಬಿಟ್ಟಿದ್ದಾರೆ.

ಜೀವನಕ್ಕೆ ಆಧಾರವಾಗಿದ್ದವರನ್ನೇ ಕಳೆದುಕೊಂಡ ಕುಟುಂಬಗಳು ಈಗ ಅನಾಥವಾಗಿವೆ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಘೋಷಿಸಲು ಸರ್ಕಾರದ ಕಾನೂನುಗಳೇ ಅಡ್ಡಿಯಾಗಿವೆ. ಆರೋಗ್ಯ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ ಕೆಲವು ಸಂತ್ರಸ್ತ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ ವಿತರಿಸಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ವೈಯಕ್ತಿಕ ಧನಸಹಾಯ ನೀಡಿ ಕೈತೊಳೆದುಕೊಂಡಿದ್ದಾರೆ.

ಲಸಿಕೆ ಅಲಭ್ಯ: ಡಿಎಂಪಿ ತೈಲ ಅಭಾವ

ಮಂಗನ ಕಾಯಿಲೆಗೆ ಇಡೀ ದೇಶದಲ್ಲಿ ಲಸಿಕೆ ಉತ್ಪಾದಿಸುವ ಒಂದೇ ಒಂದು ಕೇಂದ್ರ ಬೆಂಗಳೂರು ಹೆಬ್ಬಾಳದ ಇನ್‌ಸ್ಟಿಟ್ಯೂಟ್ ಆಫ್‌ ಅನಿಮಲ್ ಹೆಲ್ತ್ ಆ್ಯಂಡ್ ವೆಟ್‌ ಬಯೋಲಾಜಿಕಲ್ಸ್. ತಮಿಳುನಾಡು, ಕೇರಳ, ಗೋವಾ, ಈ ಎಲ್ಲಾ ರಾಜ್ಯಗಳಿಗೂ ಇಲ್ಲಿಂದಲೇ ಲಸಿಕೆ ಸರಬರಾಜು ಆಗುತ್ತದೆ. ಹಾಗಾಗಿ, ಶಿವಮೊಗ್ಗ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಲಸಿಕೆ ಲಭ್ಯವಾಗುತ್ತಿಲ್ಲ.

60 ವರ್ಷ ಮೇಲ್ಪಟ್ಟವರಿಗೆ ಡಿಎಂಪಿ ತೈಲ ಹಚ್ಚಿಕೊಳ್ಳುವಂತೆ ಆರೋಗ್ಯ ಇಲಾಖೆ ಸಲಹೆ ನೀಡುತ್ತಿದೆ. ಆದರೆ, ಆ ತೈಲವೇ ಸಿಗುತ್ತಿಲ್ಲ. ‘ರೇಷನ್ ತರಹ ಅದನ್ನು ಪೂರೈಸಲು ಅಸಾಧ್ಯ. ಈ ತೈಲಕ್ಕೆ ದಿಢೀರ್ ಬೇಡಿಕೆ ಬಂದಿದ್ದರಿಂದ ಅದನ್ನು ತಯಾರಿಸುವುದು ತಕ್ಷಣಕ್ಕೆ ಸಾಧ್ಯವಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅರಣ್ಯ ಒತ್ತುವರಿ ತಂದಿಟ್ಟ ಸಂಕಷ್ಟ

ಮಂಗನ ಕಾಯಿಲೆ ಕಾಣಿಸಿಕೊಂಡ ಗ್ರಾಮಗಳೆಲ್ಲವೂ ಕಾಡಂಚಿನಲ್ಲಿವೆ. ಹಲವು ಸವಾಲುಗಳ ಮಧ್ಯೆಯೇ ಬದುಕುವ ಈ ಜನರಿಗೆ ಈಚೆಗೆ ಅರಣ್ಯ ಭೂಮಿ ಒತ್ತುವರಿ ಆಸೆ ಹೆಚ್ಚಾಗಿದೆ. ಒತ್ತುವರಿಗಾಗಿ ಹುಲ್ಲಿನ ಗುಡ್ಡಗಳಿಗೆ ಹಲವು ವರ್ಷಗಳಿಂದ ಬೆಂಕಿ ಹಚ್ಚುತ್ತಲೇ ಬಂದಿದ್ದಾರೆ. ಅಲ್ಲಿ ಈಗ ಹುಲ್ಲು ನಾಶವಾಗಿ ಲಂಟಾನು ಪೊದೆ ಬೆಳೆದಿದೆ. ಅದೇ ಈಗ ಕೆಎಫ್‌ಡಿ ಉಣುಗದ ಆಶ್ರಯತಾಣವಾಗಿದೆ.

ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ

ಮಂಗನ ಕಾಯಿಲೆ ತಪಾಸಣೆ ಮಾಡುವ ಸಲುವಾಗಿಯೇ 1957ರಲ್ಲಿ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ (ವಿಡಿಎಲ್) ಸ್ಥಾಪಿಸಲಾಯಿತು. ಅಂದಿನಿಂದ ಇವತ್ತಿನವರೆಗೂ ಹಲವು ಮಾರ್ಪಾಡುಗಳೊಂದಿಗೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಕೆಎಫ್‌ಡಿ ಶಂಕಿತ ಮಾದರಿಗಳನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ, ವರದಿ ನೀಡಲು ಕನಿಷ್ಠ 6ರಿಂದ 10 ದಿನ ಬೇಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಲವರ ಪ್ರಯತ್ನದ ಫಲವಾಗಿ 2014ರಲ್ಲಿ ₹ 1.24 ಕೋಟಿ ವೆಚ್ಚದಲ್ಲಿ ಕಟ್ಟಡ ನವೀಕರಣ ಹಾಗೂ ಯಂತ್ರೋಪಕರಣ ಸರಬರಾಜು ಮಾಡಲಾಯಿತು. ಕೆಎಫ್‌ಡಿ ಶಂಕಿತ ಎಲ್ಲಾ ಮಾದರಿಗಳನ್ನು ತಪಾಸಣೆ ಮಾಡುವ ಆರ್‌ಟಿಪಿಸಿಆರ್ ಎಂಬ ನವೀನ ತಂತ್ರಜ್ಞಾನವನ್ನು 2016–17ರಲ್ಲಿ ಅಳವಡಿಸಿಕೊಳ್ಳಲಾಯಿತು. ಆದರೆ, ನುರಿತ ತಜ್ಞರ ಕೊರತೆಯಿಂದ ಅದೂ ಕಾರ್ಯಾರಂಭ ಮಾಡಲಿಲ್ಲ.

***

*ಕಾಡಿಗೆ ಹೋಗಲೇಬೇಕಾದಲ್ಲಿ ಡಿಎಂಪಿ ತೈಲವನ್ನು ಬಟ್ಟೆಗಳನ್ನು ಧರಿಸಿದ ನಂತರ ಉಳಿಯುವ ಹೊರಭಾಗಕ್ಕೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿ, ಧರಿಸಿದ ಬಟ್ಟೆಗಳನ್ನೂ ಬಿಸಿ ನೀರಿನಲ್ಲಿ ನೆನೆಸಿ, ಒಗೆಯಬೇಕು.

*ಕಾಡಿನಲ್ಲಿ ಮಂಗಗಳ ಸಾವು ಸಂಭವಿಸಿದ ಹಾಗೂ ಉಣುಗುಗಳು ಕೆಎಫ್‌ಡಿ ಎಂದು ವರದಿ ಬಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಕೂಡಲೇ ಕೆಎಫ್‌ಡಿ ಲಸಿಕೆ ಹಾಕಿಸಿಕೊಳ್ಳಬೇಕು. ಒಂದು ತಿಂಗಳ ಅಂತರದಲ್ಲಿ 2 ಡೋಸ್, ನಂತರದಲ್ಲಿ ಪ್ರತಿ ವರ್ಷ 1 ಡೋಸ್‌ನಂತೆ 3 ವರ್ಷ ಲಸಿಕೆಯನ್ನು ಪಡೆಯಬೇಕು.

*ಶಿವಮೊಗ್ಗದಲ್ಲಿಯೇ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಿ ಲಸಿಕೆಯನ್ನು ಇಲ್ಲಿಯೇ ಉತ್ಪಾದಿಸಬೇಕು.

*ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯಕ್ಕೆ ನುರಿತ ತಜ್ಞರನ್ನು ನೇಮಕ ಮಾಡಬೇಕು. ಈ ಪ್ರಯೋಗಾಲಯಕ್ಕೆ ಬಡ್ತಿ ಹೊಂದಿದ ವೈದ್ಯಾಧಿಕಾರಿಗಳ ಬದಲು ಎಂಡಿ ಇನ್ ಮೈಕ್ರೋಬಯೋಲಾಜಿ ಅಥವಾ ಎಂಡಿ ಇನ್ ಪ್ಯಾಥಲಜಿ ಆದವರನ್ನು ಉಪ ನಿರ್ದೇಶಕರ ಸ್ಥಾನಕ್ಕೆ ನೇಮಕಾತಿ ಮಾಡಬೇಕು ಎನ್ನುವುದು ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

***

* ಈಗ ಶಿವಮೊಗ್ಗ ಜಿಲ್ಲೆಯೊಂದರ ಲಸಿಕೆ ಬೇಡಿಕೆ 2 ಲಕ್ಷ

* ದಾಸ್ತಾನು ಇರುವುದು 5 ಸಾವಿರ

* ಫೆಬ್ರುವರಿ 5ಕ್ಕೆ 55 ಸಾವಿರ ಲಸಿಕೆ ನಿರೀಕ್ಷೆ

* ಫೆಬ್ರುವರಿ 15ಕ್ಕೆ ಇನ್ನೂ 50 ಸಾವಿರ ಲಸಿಕೆ ನಿರೀಕ್ಷೆ

***

ಕಾಯಿಲೆ ಸಾಗರ ತಾಲ್ಲೂಕಿನ ಬೇರೆ ಬೇರೆ ಭಾಗಗಳಿಗೆ ಹರಡುತ್ತಿರುವುದು ಆತಂಕಕಾರಿ. ರೋಗ ಯಾಕೆ ವ್ಯಾಪಿಸುತ್ತಿದೆ ಎನ್ನುವ ಕುರಿತು ತಜ್ಞರು ಅಧ್ಯಯನ ನಡೆಸಿ ಶೀಘ್ರ ವರದಿ ನೀಡಬೇಕು.

–ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

ಕಾಯಿಲೆ ನಿಯಂತ್ರಿಸಲು ಲಸಿಕೆ ಹಾಗೂ ಡಿ.ಎಂ.ಪಿ ತೈಲ ಬಳಕೆ ಕುರಿತು ಮಾತ್ರ ಪ್ರಚಾರ ಮಾಡಲಾಗುತ್ತಿದೆ. ಇತರೆ ಮುಂಜಾಗ್ರತೆ ವಿಷಯಗಳಿಗೆ ಒತ್ತು ನೀಡಬೇಕು.

–ಶ್ರೀನಿವಾಸ್ ರಾವ್ , ಕೆ.ಎಫ್.ಡಿ ಸಂಶೋಧನಾ ಕೇಂದ್ರದ ಮಾಜಿ ಸಿಬ್ಬಂದಿ

ಕೇಂದ್ರ ಸರ್ಕಾರ ಮಂಗನ ಕಾಯಿಲೆಯನ್ನು ಈಗಲೇ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ಇದು ರಾಷ್ಟ್ರೀಯ ವಿಪತ್ತು ಆಗುವ ಲಕ್ಷಣಗಳಿವೆ.

–ಕೆ. ಅರುಣ್ ಪ್ರಸಾದ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT