ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಮಂಗನ ಕಾಯಿಲೆ ಭೀತಿ

ಸತ್ತ ಮಂಗಗಳ ಶವಗಳಲ್ಲಿ ಕೆಎಫ್‌ಡಿ ಸೋಂಕು ದೃಢ; ಕಾಡಂಚಿನ ಗ್ರಾಮಗಳಲ್ಲಿ ಕಟ್ಟೆಚ್ಚರ
Last Updated 17 ಜನವರಿ 2019, 12:57 IST
ಅಕ್ಷರ ಗಾತ್ರ

ಉಡುಪಿ: ಮಲೆನಾಡಿನ ಮಂಗನ ಕಾಯಿಲೆ ಎಂಬ ಮಹಾಮಾರಿ ಕರಾವಳಿಗೂ ವ್ಯಾಪಿಸುವ ಆತಂಕ ಶುರುವಾಗಿದೆ. ಕುಂದಾಪುರ, ಕಾರ್ಕಳ ಹಾಗೂ ಉಡುಪಿ ತಾಲ್ಲೂಕು ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ 8 ಮಂಗಗಳ ಶವಗಳಲ್ಲಿ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಸೋಂಕು ಇರುವುದು ಪ್ರಯೋಗಾಲಯದ ವರದಿಗಳಿಂದ ದೃಢಪಟ್ಟಿದೆ.

ಕಳೆದ 10 ದಿನಗಳಲ್ಲಿ 27ಕ್ಕೂ ಹೆಚ್ಚು ಮಂಗಗಳ ಶವಗಳು ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಈ ಪೈಕಿ ಹಲವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಸುಟ್ಟುಹಾಕಲಾಯಿತು. ಉಳಿದ 17 ಮಂಗಗಳ ಶವವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬಳಿಕ, ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.

ಬುಧವಾರ ವರದಿ ಬಂದಿದ್ದು, ಸಿದ್ದಾಪುರ, ಹೊಸಂಗಡಿ, ಶೀರೂರು, ಬೈಂದೂರು, ಕಂಡ್ಲೂರು, ಬೆಳ್ವೆ, ಹಿರ್ಗಾನ, ಬ್ರಹ್ಮಾವರ ಭಾಗದಲ್ಲಿ ಸಿಕ್ಕಿದ್ದ ಮಂಗಗಳ ಶವಗಳಲ್ಲಿ ಮಂಗನ ಕಾಯಿಲೆ ಸೋಂಕು ಇರುವುದು ಕಂಡುಬಂದಿದೆ ಎಂದು ಡಿಎಚ್‌ಒ ಡಾ.ರೋಹಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದುವರೆಗೂ ಜಿಲ್ಲೆಯಲ್ಲಿ ಕೆಎಫ್‌ಡಿ ಸೋಂಕು ಮನಷ್ಯರಲ್ಲಿ ಪತ್ತೆಯಾಗಿಲ್ಲ. ಈಚೆಗೆ ವ್ಯಕ್ತಿಯೊಬ್ಬರಲ್ಲಿ ರೋಗದ ಗುಣ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ; ಬದಲಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಸೋಂಕು ವ್ಯಾಪಿಸದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಮಂಗಗಳ ಶವ ಸಿಕ್ಕಿರುವ ಗ್ರಾಮಗಳಲ್ಲಿ ಜ್ವರ ಬಾಧಿತರ ಸರ್ವೇ ನಡೆಸಲಾಗಿದೆ. ಡಿಎಂಪಿ ತೈಲ ವಿತರಣೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮಸ್ಥರಲ್ಲಿ ರೋಗದ ಲಕ್ಷಣ, ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯದಂಚಿನ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪೋಷಕರಲ್ಲಿ ಭಯದ ವಾತಾವರಣ:ಮಂಗಗಳ ಶವ ಪತ್ತೆಯಾಗಿರುವ ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ. ಹಾಜರಾತಿ ಪ್ರಮಾಣವೂ ಕುಸಿದಿದೆ ಎನ್ನುತ್ತಾರೆ ಅಧಿಕಾರಿಗಳು.

‌ಆತಂಕ ಬೇಡ: ಮುನ್ನೆಚ್ಚರಿಕೆ ಅಗತ್ಯ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಂಚಿನಲ್ಲಿ ವಾಸವಾಗಿರುವವರು ಜಾನುವಾರುಗಳನ್ನು ಕಾಡಿಗೆ ಎಳೆದೊಯ್ಯಬಾರದು. ಸಂಪೂರ್ಣ ಮೈ ಮುಚ್ಚುವಂತೆ ಬಟ್ಟೆ ಧರಿಸಬೇಕು. ಜ್ವರ ಕಾಣಿಸಿಕೊಂಡರೆ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಡಿಎಚ್‌ಒ ರೋಹಿಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT