ಉಣುಗು ನಿರ್ಮೂಲನೆಗೆ ಯಂತ್ರ

ಶುಕ್ರವಾರ, ಮಾರ್ಚ್ 22, 2019
26 °C
ನಿಯಂತ್ರಣಕ್ಕೆ ಬಾರದ ಮಂಗನ ಕಾಯಿಲೆ ವಿರುದ್ಧ ಆರೋಗ್ಯ ಇಲಾಖೆ ಸಮರ

ಉಣುಗು ನಿರ್ಮೂಲನೆಗೆ ಯಂತ್ರ

Published:
Updated:
Prajavani

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಂಗನ ಕಾಯಿಲೆ ಹರಡುವ ಉಣುಗುಗಳ ನಿರ್ಮೂಲನೆಗೆ ‘ಮಿಸ್ಟ್ ಬ್ಲೊವೆರ್’ ಯಂತ್ರಗಳನ್ನು ಬಳಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಇದುವರೆಗೂ ಯಾವುದೇ ಭಾಗದಲ್ಲಿ ಸತ್ತ ಮಂಗಗಳು ಪತ್ತೆಯಾದರೆ ಆ ಸ್ಥಳದ ನೂರು ಮೀಟರ್ ವ್ಯಾಪ್ತಿಯಲ್ಲಿ ವಿಷಕಾರಿ ಮೆಲಾಥಿಯನ್ ಪೌಡರ್ ಉದುರಿಸಲಾಗುತ್ತಿತ್ತು. ಸಾಗರ ತಾಲ್ಲೂಕು ಅರಲಗೋಡು ಸುತ್ತಮುತ್ತ ನಿರಂತರವಾಗಿ ಪೌಡರ್ ಹಾಕುತ್ತಾ ಬರಲಾಗಿದೆ. ಆದರೂ, ಮಂಗನ ಕಾಯಿಲೆ ಹಬ್ಬುತ್ತಲೇ ಇದೆ. ಇದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ‘ಮಿಸ್ಟ್ ಬ್ಲೊವೆರ್ (ಗಾಳಿಯ ಮೂಲಕ ದ್ರವ ಮಿಶ್ರಿತ ಪೌಡರ್ ಸಿಂಪಡಿಸುವುದು) ಯಂತ್ರಗಳ ಮೂಲಕ ಮೆಲಾಥಿಯನ್ ಪೌಡರ್ ಸಿಂಪಡಿಸಲು ಕ್ರಮ ಕೈಗೊಂಡಿದೆ.

ಮೊದಲ ಹಂತದಲ್ಲಿ ₹ 3.60 ಲಕ್ಷ ವೆಚ್ಚದಲ್ಲಿ 6 ಯಂತ್ರಗಳನ್ನು ಮಂಗಳೂರಿನಿಂದ ತರಿಸಲಾಗುತ್ತಿದೆ. ಮಂಗನ ಕಾಯಿಲೆ ಪೀಡಿತ ಪ್ರದೇಶಗಳ ಸುತ್ತಮುತ್ತ ವಾರಕ್ಕೆ ಎರಡು ದಿನ ಸಿಂಪಡಣಾ ಕಾರ್ಯ ನಡೆಸಲಾಗುವುದು. ಈ ಯಂತ್ರಗಳ ಸಹಾಯದಿಂದ ಅರ್ಧ ಗಂಟೆಯ ಒಳಗೆ ನೂರು ಮೀಟರ್ ಪ್ರದೇಶದಲ್ಲಿ ಪೌಡರ್ ಹಾಕಬಹುದು. ಇದರಿಂದ ಉಣುಗುಗಳ ನಿರ್ಮೂಲನೆ ಸಾಧ್ಯ. ಉಣುಗುಗಳು ಚಲಿಸುವ ಜತೆಗೆ, ಹಾರಬಲ್ಲವು. ಇದರಿಂದ ಈ ಪ್ರಯತ್ನ ಪರಿಣಾಮಕಾರಿಯಾಗುತ್ತದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ.

ಮಂಗನ ಕಾಯಿಲೆ ವ್ಯಾಪಿಸಿದ ಅರಲಗೋಡು ಇಟ್ಟಿಗೆ, ಸಂಪ, ನಂದೋಡಿ, ಬಣ್ಣುಮನೆ, ವಾಟೆಹಕ್ಲು, ಮಂಡವಳ್ಳಿ, ಮುಪ್ಪಾನೆ, ಕಾಳಮಂಜಿ, ಬಿಲಕಂದೂರು, ಶಿಗ್ಗಲು, ಬೊಬ್ಬಿಗೆ ಸುತ್ತ ಉಣುಗುಗಳ ಸಂಖ್ಯೆ ವಿಪರೀತ ಇರುವುದು ಈಚೆಗೆ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಮಲೆನಾಡಿನ ಇತರ ಭಾಗಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಒಂದು ನಿರ್ದಿಷ್ಟ ಸ್ಥಳಗಳಲ್ಲಿ 5ರಿಂದ 8 ಉಣುಗುಗಳು ಪತ್ತೆಯಾದರೆ, ಅಲ್ಲಿ 70ರಿಂದ 80 ಉಣುಗುಗಳು ಕಾಣಿಸಿಕೊಂಡಿದ್ದವು. ಅಂದರೆ 10 ಪಟ್ಟು ಅಧಿಕ.

ಇತರೆ ತೈಲಗಳಿಗೆ ಕಡಿವಾಣ: ಮಂಗನ ಕಾಯಿಲೆ ಕಾಣಿಸಿಕೊಳ್ಳುವ ಅರಣ್ಯ ಪ್ರದೇಶಗಳ ಒಳಗೆ ಹೋಗುವ ಜನರು ಇದುವರೆಗೂ ಆರೋಗ್ಯ ಇಲಾಖೆ ವಿತರಿಸುವ ಡಿಎಂಪಿ ತೈಲ ಬಳಸುತ್ತಿದ್ದರು. ತೈಲ ಹಚ್ಚಿಕೊಂಡರೆ ಉಣುಗುಗಳು ಕಚ್ಚದೆ ಇರಲು ಆ ತೈಲದಲ್ಲಿರುವ ಕಹಿ ಅಂಶ ಪ್ರಧಾನ ಕಾರಣ. ಈ ಅಂಶಗಳನ್ನೇ ಆಧಾರವಾಗಿ ಇಟ್ಟುಕೊಂಡ ಕೆಲವರು ಬೇವು ಮಿಶ್ರಿತ ಎಣ್ಣೆ, ನೀಲಗಿರಿ ಎಣ್ಣೆ, ನಿಂಬು ಮಿಶ್ರಿತ ತೈಲ, ಕಹಿ ಅಂಶಗಳನ್ನು ಒಳಗೊಂಡ ಜೆಲ್‌ಗಳನ್ನು ಬಳಸುವಂತೆ ಪ್ರಚಾರ ಮಾಡುತ್ತಿದ್ದರು. ಈ ಎಲ್ಲ ಅಡ್ಡದಾರಿಗಳಿಗೆ ಕಡಿವಾಣ ಹಾಕಿರುವ ಜಿಲ್ಲಾಡಳಿತ ಅಧಿಕ ಪ್ರಮಾಣದಲ್ಲಿ ಡಿಎಂಪಿ ತೈಲ ವಿತರಿಸುತ್ತಿದೆ. ಜತೆಗೆ 60 ಸಾವಿರಕ್ಕೂ ಹೆಚ್ಚು ಜನರಿಗೆ ರೋಗನಿರೋಧಕ ಚುಚ್ಚುಮದ್ದು ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !