ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ: ಬಾರದ ಪ್ರೋತ್ಸಾಹ ಧನ– ಹೆಚ್ಚದ ರಿಯಾಯಿತಿ

ಸಂಕಷ್ಟದಲ್ಲಿ ರಾಜ್ಯದ 25 ಸಾವಿರಕ್ಕೂ ಹೆಚ್ಚು ಕಾರ್ಮಿಕರು
Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ 25,000ಕ್ಕೂ ಹೆಚ್ಚು ಕಾರ್ಮಿಕರ ಎರಡು ವರ್ಷಗಳ ₹43.27 ಕೋಟಿ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ, ನೇಯ್ಗೆಯಲ್ಲಿ ತೊಡಗಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಇಲ್ಲಿನ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ 2016–17 ಹಾಗೂ 2017–18ನೇ ಸಾಲಿನ ₹1.98 ಕೋಟಿ ಬಾಕಿ ಉಳಿದುಕೊಂಡಿದೆ. ಜತೆಗೆ ರಾಜ್ಯದ ವಿವಿಧ ಗ್ರಾಮೋದ್ಯೋಗ ಸಂಘಗಳಿಗೂ ಬಾಕಿ ಪಾವತಿಯಾಗಬೇಕಿದೆ. ಈ ಬಗ್ಗೆ, ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಸಂಘಗಳ ಪ್ರತಿನಿಧಿಗಳು.

ನೂಲು ಸಿದ್ಧಪಡಿಸುವವರಿಗೆ ಪ್ರತಿ ಲಡಿಗೆ ₹ 3 ಹಾಗೂ ಪ್ರತಿ ಮೀಟರ್‌ ಬಟ್ಟೆಗೆ ₹ 7 ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡುತ್ತದೆ. ಅದರಂತೆಯೇ ಕೇಂದ್ರ ಸರ್ಕಾರವೂ ಪ್ರೋತ್ಸಾಹ ಧನ ನೀಡುತ್ತಿದ್ದು, ಅದು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ.

ರಿಯಾಯಿತಿಯಲ್ಲಿ ಕಡಿತ: ‘ಖಾದಿ ಬಟ್ಟೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಒಟ್ಟು ಶೇ 35ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಮೂರು ವರ್ಷಗಳ ಹಿಂದೆ ಅದನ್ನು ಶೇ 25ಕ್ಕೆ ಕಡಿತ ಮಾಡಲಾಗಿದೆ. ಕೇಂದ್ರವು ತಾನು ನೀಡುತ್ತಿದ್ದ ಶೇ 15ರಷ್ಟು ರಿಯಾಯಿತಿಯನ್ನು ಮುಂದುವರಿಸಿದ್ದರೆ, ರಾಜ್ಯ ಸರ್ಕಾರವು ಶೇ 20ರಿಂದ ಶೇ 10ಕ್ಕೆ ಕಡಿತ ಮಾಡಿದೆ’ ಎಂದು ಮಠಪತಿ ಹೇಳಿದರು.

‘ಖಾದಿಯತ್ತ ಗ್ರಾಹಕರನ್ನು ಸೆಳೆಯುವ ಸಲುವಾಗಿ ನಮ್ಮ ಸಂಘಗಳ ವತಿಯಿಂದ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದರಿಂದಾಗಿ ಆರ್ಥಿಕ ಹೊರೆ ಹೆಚ್ಚಾಗಿ ಸಂಘಗಳು ಸಂಕಷ್ಟಕ್ಕೆ ಸಿಲುಕಿವೆ. ಗಾಂಧೀಜಿ ಅವರ 150ನೇ ಜನ್ಮದಿನದ ವರ್ಷವಾಗಿರುವುದರಿಂದ ಇದೊಂದು ವರ್ಷ ರಿಯಾಯಿತಿ ನೀಡಲಾಗುತ್ತದೆ. ಮುಂದಿನ ವರ್ಷದಿಂದ ನೀಡುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಿಯಾಯಿತಿ ಇಲ್ಲ: ಗುಜರಾತ್‌ ಸರ್ಕಾರ ಖಾದಿ ಬಟ್ಟೆ ಖರೀದಿಸುವ ಗ್ರಾಹಕರಿಗೆ ಗಾಂಧೀಜಿ 150ನೇ ಜನ್ಮ ಶತಮಾನೋತ್ಸವ ವರ್ಷದ ಪ್ರಯುಕ್ತ ಹೆಚ್ಚುವರಿಯಾಗಿ ಶೇ 20ರಷ್ಟು ರಿಯಾಯಿತಿ ಘೋಷಿಸಿದೆ. ರಾಜ್ಯದಲ್ಲಿಯೂ ಅ.2ರಿಂದ ಹೆಚ್ಚಿನ ರಿಯಾಯಿತಿ ನೀಡಬೇಕು ಎಂದು ಕೋರಲಾಗಿತ್ತು. ಆದರೆ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಮಠಪತಿ ಅಸಮಾಧಾನ ವ್ಯಕ್ತಪಡಿಸಿದರು.

*ರಿಯಾಯಿತಿ ಹೆಚ್ಚಳ ಹಾಗೂ ಪ್ರೋತ್ಸಾಹಧನಕ್ಕಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ಎರಡೂ ವಿಷಯಗಳ ಬಗ್ಗೆ ಕೂಡಲೇ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕು.

-ಶಿವಾನಂದ ಮಠಪತಿ, ಕಾರ್ಯದರ್ಶಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ, ಬೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT