ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಸಿ.ಎಂ: ಗೌಡರ ಹೇಳಿಕೆಗೆ 40 ದಿನ ಬಿಟ್ಟು ಉತ್ತರ

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಮುಕ್ತ ಸಂವಾದದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
Last Updated 14 ಮಾರ್ಚ್ 2019, 20:37 IST
ಅಕ್ಷರ ಗಾತ್ರ

‘ದೇವೇಗೌಡರು ನನ್ನನ್ನು ಮುಖ್ಯಮಂತ್ರಿ ಹುದ್ದೆಗೆ ಬೆಂಬಲಿಸಿದ್ದಾಗಿ ನೀಡಿರುವ ಹೇಳಿಕೆಗೆ 40 ದಿನಗಳ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಏಕೆಂದರೆ, ನಾವೀಗ ಒಟ್ಟಾಗಿ ಚುನಾವಣೆಗೆ ಹೋಗಬೇಕಿದೆ’

–ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಖಡಕ್‌ ಮಾತಿದು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಗುರುವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಸಮ್ಮಿಶ್ರ ಸರ್ಕಾರದ ಚರ್ಚೆಯ ಸಂದರ್ಭದಲ್ಲಿ ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೆ ನಿಮ್ಮ ಹೆಸರನ್ನು ಪ್ರಸ್ತಾಪಿಸಿದ್ದರೇ’ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಮಂಡ್ಯದಲ್ಲಿ ಗುರುವಾರ ದೇವೇಗೌಡರು, ‘ಕುಮಾರಸ್ವಾಮಿ ಬದಲು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸೋನಿಯಾಗಾಂಧಿ ಅವರಿಗೆ ಹೇಳಿದ್ದೆ’ ಎಂದು ಪುನರುಚ್ಚರಿಸಿದ್ದಾರೆ.

‘ಸಾಮಾಜಿಕ ನ್ಯಾಯದ ಕುರಿತು ಪ್ರತಿಪಾದನೆ ಮಾಡುವ ಕಾಂಗ್ರೆಸ್‌ ಪಕ್ಷ ದಲಿತರನ್ನೇಕೆ ಮುಖ್ಯಮಂತ್ರಿ ಮಾಡಲಿಲ್ಲ’ ಎಂಬ ಪ್ರಶ್ನೆ ಸಂವಾದದಲ್ಲಿ ಖರ್ಗೆ ಅವರಿಗೆ ಎದುರಾಯಿತು. ‘ಸಾಮಾಜಿಕ ನ್ಯಾಯ ಅಂದಾಕ್ಷಣ, ದಲಿತರನ್ನು ಮುಖ್ಯಮಂತ್ರಿ ಮಾಡುವುದಲ್ಲ. ನಾನಂತೂ ದಲಿತ ಎಂದು ಯಾವ ಸ್ಥಾನಮಾನವನ್ನೂ ಕೇಳುವುದಿಲ್ಲ. ಪ್ರತಿಭೆ ನೋಡಿ ಕೊಡಿ ಎನ್ನುವುದು ನನ್ನ ಪ್ರತಿಪಾದನೆ. ‘ಪಾಪ’ ಎನ್ನುವ ಅನುಕಂಪ ಖಂಡಿತ ಬೇಡ’ ಎಂದು ಉತ್ತರಿಸಿದರು.

’ನಿಮಗೆ ಮುಖ್ಯಮಂತ್ರಿಯಾಗುವ ಆಸೆಯೇ ಇಲ್ಲವೇ’ ಎಂದು ಕೆಣಕಿದಾಗ, ‘ಮುಖ್ಯಮಂತ್ರಿ ಆಗಬೇಕೆನ್ನುವ ಆಸೆಯೇ ಬೇರೆ. ಪಕ್ಷದ ವಿಷಯವೇ ಬೇರೆ. ತತ್ವಪಾಲನೆಯ ವಿಷಯ ಬಂದಾಗ ಆಸೆಯನ್ನು ಪಕ್ಕಕ್ಕೆ ಇಡಬೇಕಾಗುತ್ತದೆ. ಆಸೆಗೆ ಮನಸೋತರೆ ಪಕ್ಷವೇ ಹಾಳಾಗುತ್ತದೆ. ಪಕ್ಷ ಇಲ್ಲದಿದ್ದರೆ ನಾವೂ ಇರುವುದಿಲ್ಲ. ನಮ್ಮ ಆಸೆ–ತತ್ವಗಳೂ ಇರುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

‘ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ರಾಹುಲ್‌, ಮೋದಿಯವರಿಗೆ ಸರಿಸಾಟಿ ಆಗಬಲ್ಲರೇ’ ಎಂಬ ಪ್ರಶ್ನೆಗೆ ಅಷ್ಟೇ ಚುರುಕಿನ ಉತ್ತರ ನೀಡಿದ ಖರ್ಗೆ, ‘ರಾಹುಲ್‌ ಅವರಿಗೆ ಅವಕಾಶ ಕೊಟ್ಟು ನೋಡಿ ಎಂದರು.

ತುಮಕೂರು ಕೈತಪ್ಪಿದ್ದಕ್ಕೆ ಅತೃಪ್ತಿ
‘ಹಾಲಿ ಸಂಸದರು ಇರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಗ್ಗೆ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆಯಲ್ಲ’ ಎಂಬ ಪ್ರಶ್ನೆ ತೂರಿಬಂತು. ‘ಸೀಟು ಹಂಚಿಕೆಯ ಸಮಿತಿಯಲ್ಲಿ ನಾನು ಇರಲಿಲ್ಲ. ನಾನು ಮಹಾರಾಷ್ಟ್ರ ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿದ್ದೆ.

ಯಾವ ದೃಷ್ಟಿಯಿಂದ ಸೀಟು ಬಿಟ್ಟುಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಹಾಲಿ ಸಂಸದರು ಇರುವ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಬಗ್ಗೆ ಅತೃಪ್ತಿ ಇದೆ. ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರುತ್ತೇವೆ. ಮನವೊಲಿಸುವ ಪ್ರಯತ್ನವನ್ನೂ ಮಾಡುತ್ತೇವೆ. ಮುಂದೇನಾಗುತ್ತದೋ ನೋಡೋಣ’ ಎಂದು ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT