ಗುಂಡಿಯೊಳಗೆ ತಲೆಬುರುಡೆ, ಅಸ್ಥಿ ಪಂಜರ ಪತ್ತೆ

7

ಗುಂಡಿಯೊಳಗೆ ತಲೆಬುರುಡೆ, ಅಸ್ಥಿ ಪಂಜರ ಪತ್ತೆ

Published:
Updated:
Deccan Herald

ಬೆಂಗಳೂರು: ರಿಯಲ್ ಎಸ್ಟೇಟ್‌ ಉದ್ಯಮಿಗಳಿಬ್ಬರನ್ನು ಅಪಹರಿಸಿ ಹತ್ಯೆ ಮಾಡಿದ್ದ ಆರೋಪಿಗಳು, ಶವಗಳನ್ನು ಕನಕಪುರ ರಸ್ತೆಯ ಹಾರೋಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಮಣ್ಣು ಮಾಡಿದ್ದಾರೆ. ಅದೇ ಜಾಗದಲ್ಲೇ ಭಾನುವಾರ ಉದ್ಯಮಿಗಳ ತಲೆಬುರುಡೆ ಹಾಗೂ ಅಸ್ಥಿಪಂಜರಗಳು ಪತ್ತೆಯಾಗಿವೆ.

ರಾಜರಾಜೇಶ್ವರಿನರದ ನಿವಾಸಿ ಪ್ರಸಾದ್‌ ಬಾಬು ಹಾಗೂ ಗಿರಿನಗರದ ಬಾಲಾಜಿ ಅವರನ್ನು ಜೂನ್ 27ರಂದು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಆ ಸಂಬಂಧ ಬಂಧಿಸಲಾಗಿರುವ ಆರೋಪಿ ತೇಜಸ್‌ ಎನ್‌.ರಾಜು ಹಾಗೂ ಆತನ ಸಹಚರರ ಸಮೇತ ಹಾರೋಹಳ್ಳಿಗೆ ಹೋಗಿದ್ದ ದಕ್ಷಿಣ ವಿಭಾಗದ ಪೊಲೀಸರು, ಶವ ಹೂತಿದ್ದ ಜಾಗವನ್ನು ಪತ್ತೆ ಹಚ್ಚಿ ಮಹಜರು ಮಾಡಿದರು. 

ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಜೆಸಿಬಿ ಯಂತ್ರದಿಂದ ಗುಂಡಿ ಅಗೆಯಲಾಯಿತು. ಅದರೊಳಗೆ ಸಿಕ್ಕ ತಲೆಬುರುಡೆ ಹಾಗೂ ಅಸ್ಥಿ ಪಂಜರಗಳನ್ನು ಪ್ಲ್ಯಾಸ್ಟಿಕ್ ಪೊಟ್ಟಣದಲ್ಲಿ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. 

‘ಆರೋಪಿ ತೇಜಸ್‌, ಪ್ರಸಾದ್ ಬಾಬು ಹಾಗೂ ಬಾಲಾಜಿ ಜತೆ ಸೇರಿ ಪಾಲುದಾರಿಕೆಯಲ್ಲಿ ಕಟ್ಟಡ ನಿರ್ಮಿಸುವ ಕೆಲಸ ಮಾಡುತ್ತಿದ್ದ. ಅದೇ ಪರಿಚಯದಿಂದಾಗಿ ಅವರಿಬ್ಬರಿಂದ ₹60 ಲಕ್ಷ ಸಾಲವನ್ನೂ ಪಡೆದಿದ್ದ. ಅದನ್ನು ಮರುಪಾವತಿಸುವಂತೆ ಕೇಳಿದ್ದರಿಂದಾಗಿ ಆರೋಪಿ, ತನ್ನ ಸಹಚರರ ಜತೆ ಸೇರಿ ಉದ್ಯಮಿಗಳನ್ನು ಅಪಹರಿಸಿ ಹತ್ಯೆ ಮಾಡಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರ ತಿಳಿಸಿದರು.

‘ಶವಗಳನ್ನು ಹೂತಿದ್ದ ಜಾಗವನ್ನು ಆತನೇ ಭಾನುವಾರ ತೋರಿಸಿದ. ಕನಕಪುರ ತಹಶೀಲ್ದಾರ್ ಯೋಗಾನಂದ್ ನೇತೃತ್ವದಲ್ಲಿ ಮಹಜರು ನಡೆಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪೆಟ್ರೋಲ್, ಸಕ್ಕರೆ ಹಾಕಿ ಸುಟ್ಟರು: ‘ಉದ್ಯಮಿಗಳನ್ನು ಅಪಹರಿಸಿದ್ದ ಆರೋಪಿಗಳು, ಅವಲಹಳ್ಳಿಯ ಗೋದಾಮಿಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದಿದ್ದರು. ಶವಗಳನ್ನು ಕಾರಿನಲ್ಲಿಟ್ಟುಕೊಂಡು ಹಾರೋಹಳ್ಳಿಯಲ್ಲಿರುವ ತೇಜಸ್‌ ಒಡೆತನದ ಫಾರ್ಮ್‌ಹೌಸ್‌ಗೆ ತೆಗೆದುಕೊಂಡು ಹೋಗಿದ್ದರು’ ಎಂದು ಅಧಿಕಾರಿ ಹೇಳಿದರು.

‘ಅಲ್ಲಿಂದ 1 ಕಿ.ಮೀ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಯಲಚೇನಹಳ್ಳಿಯ ಪರಿಚಯಸ್ಥರೊಬ್ಬರ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಸಿದ್ದರು. ಅದರ ಕೆಳಭಾಗದಲ್ಲಿ ಕಟ್ಟಿಗೆಗಳನ್ನು ಹೊಂದಿಸಿ, ಶವಗಳನ್ನು ಮಲಗಿಸಿದ್ದರು. ಅವುಗಳ ಮೇಲೆ ಪುನಃ ಕಟ್ಟಿಗೆಗಳನ್ನು ಇರಿಸಿ 20 ಲೀಟರ್ ಪೆಟ್ರೋಲ್ ಹಾಗೂ ಸಕ್ಕರೆಯನ್ನು ಸುರಿದು ಬೆಂಕಿ ಹಚ್ಚಿದ್ದರು’ ಎಂದು ಅಧಿಕಾರಿ ಹೇಳಿದರು.

‘ಶವಗಳು ಪೂರ್ತಿಯಾಗಿ ಸುಡುವವರೆಗೂ ಆರೋಪಿಗಳು ಸ್ಥಳದಲ್ಲಿದ್ದರು. ನಸುಕಿನಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾದ ಬಳಿಕ ಗುಂಡಿಯೊಳಗೆ ಮಣ್ಣು ಹಾಕಿ ಮುಚ್ಚಿದ್ದರು’ ಎಂದು ಅಧಿಕಾರಿ ಹೇಳಿದರು.

ಕೊಲೆ ರಹಸ್ಯ ಬಾಯ್ಬಿಟ್ಟಿದ್ದ ಮೂರನೇ ಆರೋಪಿ: ‘ಶವಗಳನ್ನು ಸುಟ್ಟ ನಂತರ ತೇಜಸ್‌ ಹಾಗೂ ಆತನ ಸಹಚರರು, ತಮಗೇನು ಗೊತ್ತೇ ಇಲ್ಲ ಎಂಬಂತೆ ಓಡಾಡುತ್ತಿದ್ದರು. ಪ್ರಸಾದ್ ಬಾಬು ನಾಪತ್ತೆ ಬಗ್ಗೆ ಅವರ ಪತ್ನಿ ಅನಿತಾ ನೀಡಿದ್ದ ದೂರಿನಡಿ ರಾಜರಾಜೇಶ್ವರಿ ನಗರ ಪೊಲೀಸರು, ತೇಜಸ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ‘ನಾನು ಅಮಾಯಕ’ ಎಂದು ಆತ ಹೇಳಿಕೊಂಡಿದ್ದರಿಂದ ಬಿಟ್ಟು ಕಳುಹಿಸಿದ್ದರು’ ಎಂದು ಅಧಿಕಾರಿ ಹೇಳಿದರು.

‘ಮತ್ತೊಬ್ಬ ಉದ್ಯಮ ಬಾಲಾಜಿ ನಾಪತ್ತೆ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದರು. ಉದ್ಯಮಿ ಮನೆ ಹಾಗೂ ತೇಜಸ್‌ನ ಕಚೇರಿ ಸುತ್ತಮುತ್ತ ಆರೋಪಿ ಅನಿಲ್‌ ಹಲವು ಬಾರಿ ಓಡಾಡಿದ್ದು ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಕೊಲೆ ರಹಸ್ಯ ಬಾಯ್ಬಿಟ್ಟ. ನಂತರ, ತೇಜಸ್‌ ಹಾಗೂ ಮಣಿಕಂಠನನ್ನು ಬಂಧಿಸಲಾಯಿತು’ ಎಂದು ಅಧಿಕಾರಿ ತಿಳಿಸಿದರು.

ಆರೋಪಿಗಳ ಪತ್ತೆಗೆ ವಿಶೇಷ ತಂಡ: ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಮಾತ್ರ ಸದ್ಯ ಬಂಧಿಸಾಗಿದೆ. ಇನ್ನು ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !