ಉದ್ಯಮಿಗಳ ಹತ್ಯೆ; ಮತ್ತೆ ಏಳು ಮಂದಿ ಸೆರೆ

7

ಉದ್ಯಮಿಗಳ ಹತ್ಯೆ; ಮತ್ತೆ ಏಳು ಮಂದಿ ಸೆರೆ

Published:
Updated:

ಬೆಂಗಳೂರು: ರಿಯಲ್ ಎಸ್ಟೇಟ್‌ ಉದ್ಯಮಿಗಳಿಬ್ಬರನ್ನು ಅಪಹರಿಸಿ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಸೋಮವಾರ ಮತ್ತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 10ಕ್ಕೆ ಏರಿದೆ.

ರಾಜರಾಜೇಶ್ವರಿನಗರದ ನಿವಾಸಿ ಪ್ರಸಾದ್‌ ಬಾಬು ಹಾಗೂ ಗಿರಿನಗರದ ಬಾಲಾಜಿ ಅವರನ್ನು ಜೂನ್ 27ರಂದು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಆ ಸಂಬಂಧ ತೇಜಸ್‌ ಎನ್‌.ರಾಜು, ಅನಿಲ್‌ ಹಾಗೂ ಮಣಿಕಂಠ್‌ನನ್ನು ಆಗಸ್ಟ್‌ 4ರಂದು ಬಂಧಿಸಲಾಗಿತ್ತು. ಅವರ ಮಾಹಿತಿಯಂತೆ ಜಯನಗರದ ಸತೀಶ್‌, ಆನಂದ್‌, ಕೃಷ್ಣ, ಹರೀಶ್‍ಕುಮಾರ್, ಮುಖೇಶ್, ಬಾಲಾಜಿ ಹಾಗೂ ಯುವರಾಜನನ್ನು ಸೆರೆ ಹಿಡಿಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ತಿಳಿಸಿದರು.

‘ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಉದ್ಯಮಿಗಳು, ರೌಡಿ ಸೈಕಲ್‌ ರವಿಯ ಸಹಚರರು ಎಂದು ಆರೋಪಿಗಳೇ ವದಂತಿ ಹಬ್ಬಿಸಿದ್ದರು. ಯಾರಿಗೂ ಅನುಮಾನ ಬಾರದಂತೆ ನಟಿಸಿದ್ದ ತೇಜಸ್‌, ಉದ್ಯಮಿಗಳ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದ’ ಎಂದರು.

‘ಅಂಜನಾಪುರ ಬಳಿಯ ತನ್ನ ಸಿಮೆಂಟ್‌ ಗೋದಾಮಿಗೆ ಉದ್ಯಮಿಗಳನ್ನು ಕರೆಸಿದ್ದ ತೇಜಸ್‌, ಸಹಚರರ ಜತೆ ಸೇರಿ ಉಸಿರುಗಟ್ಟಿಸಿ ಕೊಂದಿದ್ದ. ನಂತರ, ಶವಗಳನ್ನು ಹಾರೋಹಳ್ಳಿಯಲ್ಲಿ ಸುಟ್ಟು ಹೂತು ಹಾಕಿದ್ದ’ ಎಂದರು.

‘ಉದ್ಯಮಿಗಳು ಓಡಾಡಿದ್ದ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೆವು. ಅದರಲ್ಲಿ ಸೆರೆಯಾಗಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು, ಹಲವು ದಿನಗಳಿಂದ ನಾಪತ್ತೆಯಾಗಿದ್ದು ಗೊತ್ತಾಗಿತ್ತು. ಅವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗಲೇ ಕೃತ್ಯ ಬಯಲಾಯಿತು’ ಎಂದು ಶರಣಪ್ಪ ಹೇಳಿದರು.

ತೇಜಸ್‌ನೇ ಡಿವಿಆರ್‌ ತಂದುಕೊಟ್ಟ: ‘ಉದ್ಯಮಿ ಪ್ರಸಾದ್‌ ಬಾಬು ನಾಪತ್ತೆ ಬಗ್ಗೆ ದೂರು ನೀಡಿದ್ದ ಪತ್ನಿ ಅನಿತಾ, ತೇಜಸ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅದನ್ನು ತಿಳಿದ ಆರೋಪಿ, ಅವರ ಮನೆಗೆ ಹೋಗಿ ‘ನಾನು ತಪ್ಪು ಮಾಡಿಲ್ಲ. ಅಣ್ಣ ಎಲ್ಲಿದ್ದರೂ ವಾಪಸ್‌ ಬರುತ್ತಾರೆ. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ಠಾಣೆಗೆ ಬಂದು ಹೇಳಿಕೆ ನೀಡಿ’ ಎಂದು ಹೇಳಿದ್ದ. ಅದಕ್ಕೆ ಉದ್ಯಮಿಯ ಸಂಬಂಧಿಕರು ಸೊಪ್ಪು ಹಾಕಿರಲಿಲ್ಲ’ ಎಂದು ಮೂಲಗಳು ಹೇಳಿವೆ.

‘ಜೆ.ಪಿ.ನಗರದಲ್ಲಿರುವ ತನ್ನ ಕಚೇರಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದ ತೇಜಸ್‌, ಅದರ ಡಿವಿಆರ್‌ನ್ನು ಪೊಲೀಸರಿಗೆ ತಂದುಕೊಟ್ಟಿದ್ದ. ‘ನಾನು ಅಮಾಯಕ. ಡಿವಿಆರ್‌ ಕೊಟ್ಟಿದ್ದೇನೆ. ಪದೇ ಪದೇ ವಿಚಾರಣೆಗೆ ಕರೆಸಬೇಡಿ’ ಎಂದು ಹೇಳಿದ್ದ. ಅದೇ ಡಿವಿಆರ್‌ನಲ್ಲಿದ್ದ ದೃಶ್ಯಗಳಿಂದ ಆರೋಪಿಗಳ ಸುಳಿವು ಸಿಕ್ಕಿದ್ದರಿಂದಲೇ ಪೊಲೀಸರಿಗೆ ತೇಜಸ್‌ ಸಿಕ್ಕಿಬಿದ್ದ’ ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !