ಕಿಕಿ ಎಡವಟ್ಟು: ನಟಿ ಪ್ರಣೀತಾ ಪೇಚು

7
ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ದೂರು

ಕಿಕಿ ಎಡವಟ್ಟು: ನಟಿ ಪ್ರಣೀತಾ ಪೇಚು

Published:
Updated:

ಬೆಂಗಳೂರು: ಅಪಾಯಕಾರಿ ‘ಕಿಕಿ ಚಾಲೆಂಜ್‌’ ನೃತ್ಯ ಮಾಡಿದ್ದ ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ಹಲಸೂರು ಗೇಟ್‌ ಠಾಣೆಗೆ ಬುಧವಾರ ದೂರು ಸಲ್ಲಿಕೆಯಾಗಿದೆ. ಅತ್ತ, ನಟಿ ಪ್ರಣೀತಾ ಸಹ ನೃತ್ಯ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

ಬಾಲಿವುಡ್ ನಟ– ನಟಿಯರಿಂದ ಆರಂಭವಾದ ಚಾಲೆಂಜ್‌ ಸ್ವೀಕರಿಸಿದ್ದ ಪ್ರಣೀತಾ, ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಇಳಿದು ‘ಇನ್ ಮೈ ಫೀಲಿಂಗ್ಸ್‘ ಹಾಡು ಹೇಳುತ್ತ ನೃತ್ಯ ಮಾಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಕಾರು ವೇಗವಾಗಿ ಮುಂದೆ ಹೋಗಿತ್ತು. ಗಾಬರಿಗೊಂಡ ಪ್ರಣೀತಾ, ಕಾರಿನ ಹಿಂದೆ ಓಡಿದ್ದರು. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್‌ ಆಗಿದೆ.

ಆ ಬಗ್ಗೆ ಟ್ವೀಟ್‌ ಮಾಡಿರುವ ಪ್ರಣೀತಾ, ‘ಕಿಕಿ ಚಾಲೆಂಜ್‌ ತುಂಬಾ ಅಪಾಯಕಾರಿ. ಪ್ರಾಣ ಕೂಡ ಕಳೆದುಕೊಳ್ಳಬೇಕಾಗುತ್ತದೆ. ನೀವು ಈ ರೀತಿ ಮಾಡಲು ಪ್ರಯತ್ನಿಸಬೇಡಿ’ ಎಂದಿದ್ದಾರೆ.

ಪ್ರಚೋದನೆ ಆರೋಪ: ‘ಅಪಾಯಕಾರಿ ನೃತ್ಯ ಮಾಡುವ ಮೂಲಕ ನಿವೇದಿತಾ ಗೌಡ, ಯುವಜನತೆಗೆ ಪ್ರಚೋದನೆ ನೀಡಿರುವುದಾಗಿ ಕನ್ನಡ ಸಂಘಟನೆಗಳ ಒಕ್ಕೂಟದ ನಾಗೇಶ್‌ ದೂರು ನೀಡಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹಲಸೂರು ಗೇಟ್ ಪೊಲೀಸರು ಹೇಳಿದರು.

ನಿವೇದಿತಾ ಗೌಡ, ‘ನಾನು ಚಿಕ್ಕವಳು. ದೂರು ಕೊಡುವ ಮುನ್ನ ಸಂಘಟನೆಯವರು ನನ್ನನ್ನು ಸಂಪರ್ಕಿಸಬಹುದಿತ್ತು. ತಪ್ಪು ಸರಿಪಡಿಸಿಕೊಳ್ಳುತ್ತಿದೆ’ ಎಂದಿದ್ದಾರೆ.

‘ನೃತ್ಯ ಮಾಡುವುದು ಅಪಾಯಕಾರಿ ಎನ್ನುವುದು ನನಗೆ ಗೊತ್ತಿರಲಿಲ್ಲ. ಮಾಧ್ಯಮಗಳಿಂದಲೇ ಅದು ತಿಳಿಯಿತು. ನಂತರ, ನೃತ್ಯದ ವಿಡಿಯೊ ಅಳಿಸಿಹಾಕಿದೆ’ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !