ಬೆಂಗಳೂರಲ್ಲೂ ಸದ್ದು ಮಾಡುತ್ತಿದೆ ಕಿಕಿ ಚಾಲೆಂಜ್‌!

7
ಜೀವಕ್ಕೆ ಆಪತ್ತು ತಂದುಕೊಳ್ಳಬೇಡಿ: ಯುವಕರಿಗೆ ಎಚ್ಚರಿಕೆ ಕೊಟ್ಟ ಸಂಚಾರ ಪೊಲೀಸರು

ಬೆಂಗಳೂರಲ್ಲೂ ಸದ್ದು ಮಾಡುತ್ತಿದೆ ಕಿಕಿ ಚಾಲೆಂಜ್‌!

Published:
Updated:
Deccan Herald

ಬೆಂಗಳೂರು: ಚಲಿಸುವ ಕಾರಿನಿಂದಲೇ ಹೊರಗೆ ಜಿಗಿದು, ಕಾರಿನ ವೇಗಕ್ಕೆ ಸಮಾನವಾಗಿ ನೃತ್ಯ ಮಾಡಿಕೊಂಡು ಹೋಗುವ ‘ಕಿಕಿ ಚಾಲೆಂಜ್‌‘, ದೇಶದಾದ್ಯಂತ ಸದ್ದು ಮಾಡುತ್ತಿದೆ. ಬಾಲಿವುಡ್ ನಟ– ನಟಿಯರಿಂದ ಆರಂಭವಾದ ಈ ಚಾಲೆಂಜ್‌, ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ.

ಅತ್ಯಂತ ಅಪಾಯಕಾರಿಯಾದ ‘ಕಿಕಿ ಚಾಲೆಂಜ್‌’ ಮಾಡಲು ಹೋಗಿ ಈಗಾಗಲೇ ನೂರಾರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನಗರದಲ್ಲಿ ಯಾರಾದರೂ ಇಂಥ ಚಾಲೆಂಜ್‌ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಚಾರ ಪೊಲೀಸರು, ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಏನಿದು ಚಾಲೆಂಜ್‌: ಹಾಲಿವುಡ್ ಗಾಯಕ ಡ್ರೇಕ್ ಅವರ ‘ಇನ್ ಮೈ ಫೀಲಿಂಗ್ಸ್‘ ಹಾಡಿನ ಪ್ರಚಾರಕ್ಕಾಗಿ ‘ಕಿಕ್ ಚಾಲೆಂಜ್’ ಹರಿಬಿಡಲಾಗಿದೆ. ಇತ್ತೀಚಿಗೆ ಬಾಲಿವುಡ್ ನಟಿಯೊಬ್ಬರು, ಈ ಸವಾಲು ಸ್ವೀಕರಿಸಿ ಅದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದರಿಂದ ಪ್ರಚೋದನೆಗೊಂಡ ಸಾವಿರಾರು ಯುವಕ–ಯುವತಿಯರು, ಈ ಸವಾಲು ಸ್ವೀಕರಿಸಿ ಅಪಾಯ ತಂದುಕೊಳ್ಳುತ್ತಿದ್ದಾರೆ. 

ರಸ್ತೆಯಲ್ಲಿ ಕಾರು ಚಲಿಸುತ್ತಿದ್ದ ವೇಳೆಯಲ್ಲೇ, ಅದರಿಂದ ಹೊರಗೆ ಜಿಗಿಯಬೇಕು. ‘ಇನ್‌ ಮೈ ಫೀಲಿಂಗ್ಸ್‌’ ಹಾಡು ಹೇಳುತ್ತ ಕಾರಿನ ವೇಗಕ್ಕೆ ತಕ್ಕಂತೆ ನೃತ್ಯ ಮಾಡುತ್ತ ಸಾಗಬೇಕು. ಹಾಡು ಮುಗಿದ ನಂತರ, ಕಾರಿನೊಳಗೆ ವಾಪಸ್‌ ಹತ್ತಿ ಕುಳಿತುಕೊಳ್ಳಬೇಕು. ಕಾರಿನ ಒಳಗೆಯೇ ಕ್ಯಾಮೆರಾ ಇಟ್ಟು, ನೃತ್ಯದ ದೃಶ್ಯವನ್ನು ಸೆರೆ ಹಿಡಿಯಬೇಕು. ಅಂಥ ದೃಶ್ಯಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ #kikichallenge ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಹಂಚಿಕೊಳ್ಳಬೇಕು. ಇದೇ ರೀತಿಯ ಸಾವಿರಾರು ಜನರ ವಿಡಿಯೊಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಾನಸಿಕ ಅಸ್ವಸ್ಥನಾದ ಯುವಕ: ಚಾಲೆಂಜ್ ಮಾಡಲು ಹೋಗಿ ಮುಂಬೈನ ಯುವಕನೊಬ್ಬ, ತಲೆಗೆ ಗಾಯ ಮಾಡಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಚಿತ್ರೀಕರಿಸಿದ್ದ ವಿಡಿಯೊವನ್ನು ಮಹಾರಾಜ್ ರಾಹುಲ್ ಎಂಬುವರು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಸಾಕಷ್ಟು ವೈರಲ್‌ ಆಗಿರುವ ಅದೇ ವಿಡಿಯೊವನ್ನು ಶೇರ್ ಮಾಡಿರುವ ಆಡುಗೋಡಿ ಪೊಲೀಸರು, ‘ಕಿಕಿ ಚಾಲೆಂಜ್‌ ಮಾಡುವುದರಿಂದ ಅಪಘಾತಗಳು ಉಂಟಾಗುತ್ತದೆ. ಜೀವಕ್ಕೆ ಆಪತ್ತು ಬರುವ ಸಾಧ್ಯತೆಯೂ ಇದೆ. ಇಂಥ ಚಾಲೆಂಜ್‌ಗೆ ನಮ್ಮ ವಿರೋಧವಿದೆ’ ಎಂದಿದ್ದಾರೆ.

ಆ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಅನುಪಮ್ ಅಗರವಾಲ್, ‘ಕಿಕಿ ಚಾಲೆಂಜ್‌ ಮಾಡುವ ಹಾಗೂ ಮಾಡಲು ಪ್ರಯತ್ನಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದಿದ್ದಾರೆ.

‘ಚಾಲೆಂಜ್ ಮಾಡಲು ಹೋಗಿ ಮುಂಬೈನಲ್ಲಿ ಯುವಕನೊಬ್ಬ ತಲೆಗೆ ಗಾಯ ಮಾಡಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಚಿತ್ರೀಕರಿಸಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಇಂಥ ಸವಾಲು ಸ್ವೀಕರಿಸಬಾರದು’ ಎಂದು ಮನವಿ ಮಾಡಿದರು.

*** 

ಕಾರಿನಿಂದ ಜಿಗಿದು ನಿವೇದಿತಾ ನೃತ್ಯ
ಬಿಗ್‌ಬಾಸ್ ಶೋನ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ, ‘ಕಿಕಿ ಚಾಲೆಂಜ್‌’ ಸ್ವೀಕರಿಸಿದ್ದಾರೆ. ಚಲಿಸುತ್ತಿದ್ದ ಕಾರಿನಿಂದ ಹೊರಗೆ ಜಿಗಿದು ‘ಇನ್‌ ಮೈ ಫೀಲಿಂಗ್ಸ್‌’ ಹಾಡು ಹೇಳುತ್ತ ನೃತ್ಯ ಮಾಡಿದ್ದಾರೆ. ಅದರ ದೃಶ್ಯಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 

ಅದಕ್ಕೆ ಪ್ರತಿಕ್ರಿಯಿಸಿರುವ ಅವರ ಕೆಲವು ಸ್ನೇಹಿತರು, ‘ವಿಡಿಯೊ ಚೆನ್ನಾಗಿದೆ’ ಎಂದಿದ್ದಾರೆ. ಇನ್ನು ಹಲವರು, ‘ಇದೊಂದು ಅಪಾಯಕಾರಿ ಸವಾಲು’ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೊವನ್ನು ನಿವೇದಿತಾ ಗೌಡ ಅಳಿಸಿಹಾಕಿದ್ದಾರೆ.

***
‘ಕಿಕಿ ಚಾಲೆಂಜ್’ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಹೇಳಿದ್ದೇವೆ. ಸದ್ಯಕ್ಕೆ ಅಂಥ ಯಾವುದೇ ಘಟನೆಗಳು ಪೂರ್ವ ವಿಭಾಗದಲ್ಲಿ ವರದಿಯಾಗಿಲ್ಲ'.
–ಅನುಪಮ್ ಅಗರವಾಲ್, ಡಿಸಿಪಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !