ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹100ರ ಗಡಿ ದಾಟಿದ ಬೀನ್ಸ್‌!

ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸ
Last Updated 25 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಮುಖ ತರಕಾರಿಯಾದ ಬೀನ್ಸ್‌ ಬೆಲೆ ಈ ವಾರ ದಿಢೀರ್‌ ಏರಿಕೆಯಾಗಿದ್ದು, ಕೆ.ಜಿ.ಗೆ ₹100ರ ಗಡಿ ದಾಟಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ಕಳೆದ ಕೆಲವು ವಾರಗಳಿಂದ ಬೀನ್ಸ್‌ನ ಬೆಲೆ ₹5 ರಿಂದ ₹ 10 ಏರಿಕೆಯಾಗುತ್ತಲೇ ಇತ್ತು. ಕಳೆದ ವಾರ ಕೆ.ಜಿ.ಗೆ ₹70– ₹ 80 ಇದ್ದ ದರ ಈ ವಾರ ದಿಢೀರನೆ ₹20 ರಿಂದ ₹ 30 ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 100 ರಿಂದ ₹ 110ಕ್ಕೆ ಮಾರಾಟ ಮಾಡಲಾಗುತ್ತಿದೆ. ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹80 ರಿಂದ ₹90 ದರ ಇದೆ.

ಪೂರೈಕೆ ಇಳಿಮುಖ:

‘ಬೀನ್ಸ್‌ಗೆ ವರ್ಷದ 12 ತಿಂಗಳೂ ಕೂಡ ಬೇಡಿಕೆ ಇರುತ್ತದೆ. ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಾರೆ. ತಾಲ್ಲೂಕಿನ ಸುತ್ತಲಿನ ಗ್ರಾಮಗಳು, ಹೊರ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಿಂದ ನಗರದ ಮಾರುಕಟ್ಟೆಗೆ ಬೀನ್ಸ್ ಪೂರೈಕೆಯಾಗುತ್ತಿತ್ತು. ಆದರೆ, ಕೆಲವು ವಾರಗಳಿಂದ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುತ್ತಲೆ ಸಾಗಿದೆ. ನೀರಿನ ಕೊರತೆಯಿಂದಾಗಿ ಬೆಳೆ ಕಡಿಮೆ ಪ್ರಮಾಣದಲ್ಲಿದೆ. ಪೂರೈಕೆ ಇಳಿಮುಖವಾಗಿರುವುದೇ ದರ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ವ್ಯಾಪಾರಿ ಬಸಪ್ಪ ಕಾಂಬಳೆ ತಿಳಿಸಿದರು.

‘ಪೂರೈಕೆಯಾಗುತ್ತಿರುವ ಬೀನ್ಸ್‌ ಕೂಡ ಗಾತ್ರದಲ್ಲಿಯೂ ಚಿಕ್ಕದಾಗಿವೆ. ಕೆಲವು ವಾರಗಳಿಂದ ದೊಡ್ಡ ಗಾತ್ರದ ಬೀನ್ಸ್‌ಗಳು ಮಾರುಕಟ್ಟೆಗೆ ಬಂದೇ ಇಲ್ಲ. ಮಳೆಗಾಲ ಆರಂಭವಾಗುವವರೆಗೂ ಬೆಲೆ ಇಳಿಮುಖವಾಗುವ ಲಕ್ಷ್ಮಣಗಳಿಲ್ಲ. ಬೆಲೆ ಇನ್ನೂ ಏರಿಕೆಯಾಗಬಹುದು’ ಎಂದು ಅವರು ಅಭಿ‍ಪ್ರಾಯಪಟ್ಟರು.

ತರಕಾರಿ ದರದಲ್ಲಿ ವ್ಯತ್ಯಾಸ:

ಕೆಲವು ತರಕಾರಿಗಳ ದರದಲ್ಲಿ ಈ ವಾರ ವ್ಯತ್ಯಾಸವಾಗಿದ್ದರೇ, ಬಹುತೇಕ ತರಕಾರಿಗಳ ಬೆಲೆ ಯಥಾಸ್ಥಿತಿಯಲ್ಲಿದೆ. ಬದನೆಕಾಯಿ, ಹೀರೇಕಾಯಿ, ಬೆಂಡಿಕಾಯಿ, ಕ್ಯಾರೆಟ್‌, ಮೆಣಸಿನಕಾಯಿ ಹಾಗೂ ದಪ್ಪ ಮೆಣಸಿನಕಾಯಿ ದರ ಕೆ.ಜಿ.ಗೆ ಸರಾಸರಿ ₹ 5ರಿಂದ ₹ 20ರವರೆಗೆ ಏರಿಕೆಯಾಗಿದೆ.

ದ್ರಾಕ್ಷಿ, ಮೂಸಂಬಿ, ಕಿತ್ತಳೆ ಹಣ್ಣುಗಳ ಬೆಲೆ ಡಜನ್‌ಗೆ ₹ 20ರಿಂದ ₹ 30ರಷ್ಟು ಹೆಚ್ಚಳವಾಗಿದ್ದು, ಮಾವಿನಹಣ್ಣಿನ ದರ ಕಡಿಮೆಯಾಗಿದೆ. ಇನ್ನುಳಿದ ಹಣ್ಣುಗಳ ಬೆಲೆ ಯಥಾಸ್ಥಿತಿಯಲ್ಲಿದೆ. ದ್ರಾಕ್ಷಿ ಡಜನ್‌ಗೆ ₹ 60 ರಿಂದ ₹ 100, ಮೂಸಂಬಿ ₹ 70 ರಿಂದ ₹ 100, ಮೂಸಂಬಿ ₹ 60 ರಿಂದ ₹ 90ಕ್ಕೆ ಮಾರಾಟ ಮಾಡಲಾಗುತ್ತಿದೆ.

ಮಾರುಕಟ್ಟೆಗೆ ಮಾವಿನಹಣ್ಣುಗಳ ಪೂರೈಕೆ ಹೆಚ್ಚಳವಾಗಿದ್ದು, ಫೈರಿ ಮಾವಿನಹಣ್ಣು ಡಜನ್‌ಗೆ ₹ 60ರಿಂದ ₹ 100 ಹಾಗೂ ಆಪೂಸ್‌ ಮಾವಿನಹಣ್ಣು ₹100ರಿಂದ ₹ 250ಕ್ಕೆ ಮಾರಾಟ ಮಾಡಲಾಗುತ್ತಿದೆ.

ಮೀನು ಬೆಲೆ ಏರಿಕೆ:

‘ಮೀನುಗಳ ಪೂರೈಕೆ ಅತ್ಯಂತ ಕಡಿಮೆ ಆಗಿರುವುದರಿಂದ ಈ ವಾರ ಬೆಲೆ ದಿಢೀರನೆ ಹೆಚ್ಚಳವಾಗಿದೆ. ಮಾರುಕಟ್ಟೆಗೆ ಕಾರವಾರದಿಂದ ಮೀನುಗಳು ಪೂರೈಕೆಯಾಗುತ್ತಿಲ್ಲ. ಗೋವಾದಿಂದ ಮಾತ್ರ ಪೂರೈಕೆಯಾಗುತ್ತಿವೆ. ಹೀಗಾಗಿ, ಸರಬರಾಜು ಪ‍್ರಮಾಣ ಕಡಿಮೆಯಾಗಿದೆ’ ಎಂದು ವ್ಯಾಪಾರಿ ಬಾಳೇಶ ಕಿತ್ತೂರ ತಿಳಿಸಿದರು.

ಕಳದೆ ವಾರ ಕೆ.ಜಿ.ಗೆ ₹160 ರಿಂದ ₹ 200 ಇದ್ದ ಬಾಂಗಡೆ ಮೀನು, ಈ ವಾರ ₹280 ರಿಂದ ₹ 300ಕ್ಕೆ ತಲುಪಿದೆ.ಸುರಮಯಿ ₹ 700 ರಿಂದ ₹ 800 (ಕಳೆದ ವಾರ ₹600 ರಿಂದ ₹ 800 ಇತ್ತು). ತಾರ್ಲಿ ₹ 200 (₹ 150 ಇತ್ತು). ಸೀಗಡಿ ಮೀನು ₹300 ರಿಂದ ₹ 400 ಬೆಲೆ ಇದೆ.

ಕೋಳಿ ಮಾಂಸ ಕೆ.ಜಿ.ಗೆ ₹ 190 ರಿಂದ ₹ 200, ಮಟನ್‌ ಕೆ.ಜಿ. ಗೆ ₹ 460 ರಿಂದ ₹ 480 ಯಥಾಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT