ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿದ್ದಾರೆ ವೈದ್ಯ, ಎಂಜಿನಿಯರ್, ವಕೀಲರು

ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಶೇ 50ರಷ್ಟು ಅಭ್ಯರ್ಥಿಗಳು ಕಾಲೇಜು ಶಿಕ್ಷಣ ಪಡೆದಿಲ್ಲ ಹಾಗೂ ಶೇ 25ರಷ್ಟು ಜನ ಎಸ್‌ಎಸ್‌ಎಲ್‌ಸಿಯನ್ನೇ ಪೂರೈಸಿಲ್ಲ ಎಂಬ ಮಾಹಿತಿ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರಗಳಲ್ಲಿ ಸ್ಪಷ್ಟವಾಗಿದೆ.

ನಾಮಪತ್ರ ಹಿಂಪಡೆದ ನಂತರ ಜಿಲ್ಲೆಯಲ್ಲಿ ಒಟ್ಟು 98 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಇವರಲ್ಲಿ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಶಿಕ್ಷಣ ಕೈಬಿಟ್ಟಿರುವುದರಿಂದ ಹಿಡಿದು ಎಂಜಿನಿಯರಿಂಗ್‌ ಹಾಗೂ ಸ್ನಾತಕೋತ್ತರ ಪದವಿ ಪಡೆದವರವರೆಗಿನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಿಂದ ಸ್ಪರ್ಧಿಸಿರುವ ಡಾ. ಮಹೇಶ ನಾಲವಾಡ, ನವಲಗುಂದ ಕ್ಷೇತ್ರದ ಡಾ. ಎಂ.ಜಿ.ಜೇಡರ ಅವರು ವೈದ್ಯಕೀಯ ಪದವಿ ಹೊಂದಿದ್ದಾರೆ. ಹಾಗೆಯೇ ಸಂತೋಷ ನರಗುಂದ ಎಂಟೆಕ್‌ ಪದವೀಧರರಾದರೆ, ಅರವಿಂದ ಬೆಲ್ಲದ, ಫಿರೋಜ್‌ ಖಾನ್‌ ಹವಾಲ್ದಾರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಜಗದೀಶ ಶೆಟ್ಟರ್ ಸೇರಿದಂತೆ ಹಲವು ಅಭ್ಯರ್ಥಿಗಳು ಕಾನೂನು ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಜು ಕಾಂಬಳೆ ಸೇರಿದಂತೆ ಹಲವು ಸ್ನಾತಕೋತ್ತರ ಪದವಿ ಪಡೆದವರು ಈ ಬಾರಿ ಕಣದಲ್ಲಿದ್ದಾರೆ.

ಕ್ಷೇತ್ರವಾರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ ಈ ಕೆಳಕಂಡಂತಿದೆ. ನವಲಗುಂದ ಕ್ಷೇತ್ರದ ಕಾಂಗ್ರೆಸ್‌ನ ವಿನೋದ ಅಸೂಟಿ ಬಿಬಿಎ, ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಬಿ.ಎ. ಅಪೂರ್ಣಗೊಳಿಸಿದ್ದಾರೆ. ಜೆಡಿಎಸ್‌ನ ಎನ್‌.ಎಚ್.ಕೋನರಡ್ಡಿ ಬಿ.ಕಾಂ, ಜೆಡಿಯುನ ಗುರಪ್ಪ ತೋಟದ (ಎಂ.ಎ), ಜನಸಾಮಾನ್ಯ ಪಕ್ಷದ ಡಾ.ಎಂ.ಜಿ. ಜೇಡರ (ವೈದ್ಯಕೀಯ) ವ್ಯಾಸಂಗ ಮಾಡಿದ್ದಾರೆ.

ಕುಂದಗೋಳ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ಸಿ.ಎಸ್‌.ಶಿವಳ್ಳಿ ಬಿ.ಎ. ಪದವಿ ಅನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಬಿಜೆಪಿಯ ಎಸ್‌.ಐ.ಚಿಕ್ಕನಗೌಡ್ರ ಅವರು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿಲ್ಲ. ಜೆಡಿಎಸ್‌ನ ಎಂ.ಎಸ್‌.ಅಕ್ಕಿ ಕಾನೂನು ಪದವೀಧರರಾಗಿದ್ದಾರೆ.  ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ಬಸವರಾಜ ಸೋಮವಾರದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಬಿಎಸ್‌ಸಿ ಅಗ್ರಿ ಪದವಿಯನ್ನು ಹಾಗೂ ಬಿಜೆಪಿಯ ಅಮೃತ ದೇಸಾಯಿ ಕೂಡಾ ಬಿ.ಕಾಂ. ಪದವಿ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟಿದ್ದಾರೆ. ಜೆಡಿಎಸ್‌ನ ತಿರಕಪ್ಪ (ಶ್ರೀಕಾಂತ) ಜಮನಾಳ ಅವರು ನಾಲ್ಕನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಉಳಿದಂತೆ ಜನಹಿತ ಪಕ್ಷದ ನಾಗಪ್ಪ ಕರೆಣ್ಣವರ (ಐಟಿಐ), ಲೋಕ ಆವಾಜ್ ದಳದ ಫೈರೋಜಖಾನ್ ಹವಾಲ್ದಾರ (ಎಂಜಿನಿಯರಿಂಗ್‌), ಆಮ್ ಆದ್ಮಿ ಪಕ್ಷದ ಶಿವನಗೌಡ ಪಾಟೀಲ (ಎಂ.ಎ.) ಓದಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಪಿಯುಸಿ ಓದಿದ್ದಾರೆ. ಬಿಜೆಪಿಯ ಚಂದ್ರಶೇಖರ ಗೋಕಾಕ ಅವರು ಬಿ.ಕಾಂ. ಪದವೀಧರ. ಬಿಎಸ್‌ಪಿಯ ಶೋಭಾ ಬಳ್ಳಾರಿ ಹಾಗೂ ಲೋಕ ಅವಾಜ ದಳದ ಸರಸ್ವತಿ ಕಟ್ಟಿಮನಿ ಬಿ.ಎ ಓದಿದ್ದಾರೆ.

ಹುಬ್ಬಳ್ಳಿ ಧಾರವಾಡ ಕೇಂದ್ರದ ಜೆಡಿಎಸ್‌ನ ಮಲ್ಲಿಕಾರ್ಜುನ ಕೊರವಿ ಬಿ.ಕಾಂ, ಎಎಂಪಿಯ ಫಿಲೋಮಿನಾ ಪೆಂಡಮ್‌ ಬಿಎಸ್ಸಿ ಪದವೀಧರೆ. ಎಎಪಿಯ ಸಂತೋಷ ನರಗುಂದ, ಶ್ರೀಕಾಂತ ಕಬಾಡಿ ಹಾಗೂ ಪಕ್ಷೇತರ ವೀರಪ್ಪ ಅರಕೇರಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್‌ ತಮಟಗಾರ ಬಿ.ಕಾಂ. ಪದವೀಧರರಾದರೆ, ಬಿಜೆಪಿಯ ಅರವಿಂದ ಬೆಲ್ಲದ ಎಂಜಿನಿಯರಿಂಗ್‌ ಹಾಗೂ ಪಿಜಿಡಿಎಂ ಕೋರ್ಸ್ ಪೂರೈಸಿದ್ದಾರೆ. ಜೆಡಿಯುನ ಜಾವೀದ್ ಅಹ್ಮದ್ ಬೆಳಗಾಂವಕರ ಡಿಪ್ಲೊಮಾ, ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ ಆನೆಮಠ ಎಂಎಸ್‌ಸಿ ಪದವಿ ಹೊಂದಿದ್ದಾರೆ.

ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ಸಂತೋಷ ಲಾಡ್ ಬಿ.ಕಾಂ. ಪದವೀಧರರಾಗಿದ್ದಾರೆ. ಬಿಜೆಪಿಯ ಸಿ.ಎಂ.ನಿಂಬಣ್ಣವರ ಎಂ.ಎ. ಬಿ.ಇಡಿ. ಹಾಗೂ ಎಲ್‌ಎಲ್‌ಬಿ ಪದವಿ ಹೊಂದಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ಶಿವಾನಂದ ಅಂಬಡಗಟ್ಟಿ ಎಸ್‌ಎಸ್‌ಎಲ್‌ಸಿವರೆಗೂ ವ್ಯಾಸಂಗ ಮಾಡಿದ್ದಾರೆ. ಸುವರ್ಣ ಕುಲಕರ್ಣಿ ಕಾನೂನು ಪದವಿ ಹೊಂದಿದ್ದರೆ, ಶಂಕರ ಹುದ್ದಾರ ಎಂ.ಎ. ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT