ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥವಾದ ಕಿತ್ತೂರು ಕೋಟೆ!

ಬಿದ್ದರೆ ದುರಸ್ತಿ ಮಾಡುವವರೇ ಇಲ್ಲ
Last Updated 28 ಜುಲೈ 2019, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ರಾಣಿ ಚನ್ನಮ್ಮನ ಸ್ವಾಭಿಮಾನದ ಸಂಕೇತವಾಗಿ ನಿಂತಿರುವುದು ಇಲ್ಲಿನ ಕೋಟೆ ಅವಶೇಷ. ಇದಕ್ಕಿರುವ ಗೋಡೆ (ಕಾಂಪೌಂಡ್) ಕುಸಿದು ಬಿದ್ದರೂ ದುರಸ್ತಿ ಮಾಡಿಸುವವರೇ ಇಲ್ಲವಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕೋಟೆಯ ಪೂರ್ವ ದಿಕ್ಕಿನಲ್ಲಿ ಎಡ ಮತ್ತು ಬಲಕ್ಕೆ ಆವರಣ ಗೋಡೆ ಕುಸಿದು ಬಿದ್ದು ವರ್ಷಗಳೇ ಕಳೆದಿವೆ. ಆದರೆ ಇದನ್ನು ದುರಸ್ತಿಗೊಳಿಸಲು ಸರ್ಕಾರ ಮತ್ತು ಅಧಿಕಾರಿಗಳು ಇನ್ನೂ ಮೀನ–ಮೇಷ ಏಣಿಸುತ್ತಿದ್ದಾರೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಾರೆ.

‘ಕೋಟೆಯ ಕಾಂಪೌಂಡ್‌ನ ಎರಡು ಕಡೆಗಳಲ್ಲಿ ಬಿದ್ದು ಸುಮಾರು ಮೂರು ವರ್ಷ ಗತಿಸಿವೆ. ಅಭಿವೃದ್ಧಿಗಾಗಿಯೇ ಮೀಸಲಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಪುನಃ ಅದನ್ನು ಸರಿಪಡಿಸುವ ಗೋಜಿಗೆ ಯಾಕೆ ಹೋಗುತ್ತಿಲ್ಲ’ ಎಂದು ರಾಣಿ ಚನ್ನಮ್ಮ ನವಭಾರತ ಸೇನೆಯ ಜಗದೀಶ ಕಡೋಲಿ ಆತಂಕ ವ್ಯಕ್ತಪಡಿಸಿದರು.

‘ನಿತ್ಯ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಗ್ನಕೋಟೆ, ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿರುವ ಪುರಾತನ ವಸ್ತುಗಳನ್ನು ವೀಕ್ಷಿಸಿ ಹೋಗುತ್ತಾರೆ. ಇದರ ಜೊತೆಯಲ್ಲೇ ಈ ಬಿದ್ದ ಗೋಡೆಯನ್ನು ನೋಡಿಕೊಂಡು, ಆಡಳಿತ ನಡೆಸುವವರನ್ನು ಶಪಿಸುತ್ತಾ ಹೋಗುತ್ತಾರೆ. ಐತಿಹಾಸಿಕವಾಗಿ ಮಹತ್ವ ಪಡೆದಿರುವ ಸ್ಮಾರಕ ರಕ್ಷಣೆ ಮಾಡುವ ಪರಿಯೇ ಇದು’ ಎಂದು ಈರಪ್ಪ ಮುರಕಿಭಾವಿ ಖಾರವಾಗಿ ಪ್ರಶ್ನಿಸಿದರು.

‘ಸಾರ್ವಜನಿಕರೂ ಸೇರಿದಂತೆ ಎಲ್ಲರಿಗೂ ಇತಿಹಾಸ ಮತ್ತು ಸ್ಮಾರಕಗಳ ರಕ್ಷಣೆಯ ಅರಿವು ನಮ್ಮಲ್ಲಿ ತೀರಾ ಕಡಿಮೆ. ಅದಕ್ಕೇ ಹೀಗಾಗುತ್ತಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಮತ್ತೊಂದು ಕಿತ್ತೂರು ಉತ್ಸವ ಆಚರಣೆಯ ದಿನ ಬರಲಿದೆ. ಅಷ್ಟರೊಳಗಾಗಿಯಾದರೂ ಅಧಿಕಾರಿಗಳು ಇದರ ದುರಸ್ತಿ ಕಾಮಗಾರಿ ನಡೆಸಲು ಮುಂದಾಗಬೇಕಿದೆ’ ಎಂದು ಒತ್ತಾಯಿಸಿದರು.

‘ಅರಳಿಕಟ್ಟೆ ವೃತ್ತದಲ್ಲಿ ಒಂದು ಬದಿಗಿರುವ ಕಲ್ಲಿನ ಕಂಬ ಬಿದ್ದು ಎರಡೂವರೆ ವರ್ಷಗಳಾಗುತ್ತ ಬಂದಿದೆ. ಅದನ್ನು ಸರಿಪಡಿಸುವ ಕೆಲಸವೂ ಇಲ್ಲಿ ಆಗಿಲ್ಲ. ಅದರ ಸಮ್ಮುಖದಲ್ಲೇ ಮೆರವಣಿಗೆ ತಂಡಗಳು ಕಳೆದೆರಡು ಬಾರಿಯ ಉತ್ಸವ ದಿನಗಳಂದು ಹಾಯ್ದುಹೋದವು. ಅದೊಂದು ಸ್ಮಾರಕವಾಗಿ ಅಲ್ಲೇ ಬಿದ್ದುಕೊಂಡಿದೆ. ಅದನ್ನೂ ಸರಿಪಡಿಸುವ ಕೆಲಸವಾಗಬೇಕಿದೆ’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT