‘ಕೊಡಗಿಗೆ ಬನ್ನಿ…’ ಪ್ರಚಾರಾಂದೋಲನ

7
ಭೂಕುಸಿತಕ್ಕೆ ಹೆದರಿ ಜಿಲ್ಲೆಯತ್ತ ಸುಳಿಯದ ಪ್ರವಾಸಿಗರು

‘ಕೊಡಗಿಗೆ ಬನ್ನಿ…’ ಪ್ರಚಾರಾಂದೋಲನ

Published:
Updated:
Deccan Herald

ಮಡಿಕೇರಿ: ಪ್ರವಾಹ, ಭೂಕುಸಿತದ ಬಳಿಕ ಕೊಡಗಿನ ಪ್ರವಾಸೋದ್ಯಮವು ನೆಲಕಚ್ಚಿದ್ದು, ಅವಲಂಬಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ನಿಂತರೂ ಜಿಲ್ಲೆಯತ್ತ ಪ್ರವಾಸಿಗರು ಮಾತ್ರ ಸುಳಿಯುತ್ತಿಲ್ಲ. ಹೀಗಾಗಿ, ಪ್ರವಾಸೋದ್ಯಮ ಉತ್ತೇಜಿಸಲು ಜಿಲ್ಲಾ ಹೋಟೆಲ್, ರೆಸಾರ್ಟ್‌ ಹಾಗೂ ಹೋಂಸ್ಟೇ ಮಾಲೀಕರು ಪ್ರಚಾರಾಂದೋಲನ ಆರಂಭಿಸಿದ್ದಾರೆ.

‘ಕೊಡಗು ಯಥಾಸ್ಥಿತಿಗೆ ಮರಳಿದ್ದು ಕೊಡಗಿಗೆ ಬನ್ನಿ...’ ಎಂದು ಆಂದೋಲನಾ ಆರಂಭಿಸಿದ್ದಾರೆ. ಈ ರೀತಿಯ ಸಂದೇಶವನ್ನು 30 ಭಾಷೆಗಳಲ್ಲಿ ರೆಕಾರ್ಡ್‌ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಮಾಲೀಕರು ಯೋಜನೆ ರೂಪಿಸಿದ್ದಾರೆ.

ನಗರದಲ್ಲಿ ಶನಿವಾರ ಸಂಘದ ಅಧ್ಯಕ್ಷ ಡಿ.ಆರ್‌. ನಾಗೇಂದ್ರ ಪ್ರಸಾದ್‌ ಮಾತನಾಡಿ, ‘ಭೂಕುಸಿತದ ಬಳಿಕ ಕೊಡಗಿಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಸೆ.9ರ ಬಳಿಕ ನಿರ್ಬಂಧ ತೆರವು ಮಾಡಿದ್ದರೂ ಚೇತರಿಕೆ ಕಂಡಿಲ್ಲ. ಇಡೀ ಕೊಡಗು ಜಿಲ್ಲೆಯೇ ಕೊಚ್ಚಿ ಹೋಗಿದೆ ಎಂದು ಭಾವಿಸಿ, ಪ್ರವಾಸಿಗರು ಹೆದರಿದ್ದಾರೆ. ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ. ಜಿಲ್ಲೆಗೆ ಬಂದರೆ ಯಾವುದೇ ಆತಂಕ ಎದುರಾಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಈ ಕ್ಷೇತ್ರವನ್ನೇ ನಂಬಿ 20 ಸಾವಿರ ಮಂದಿ ಬದುಕು ನಡೆಸುತ್ತಿದ್ದರು. ಯಾರಿಗೂ ಎರಡು ತಿಂಗಳಿಂದ ಕೆಲಸ ಇಲ್ಲ. ಕಾರ್ಮಿಕರು ಗ್ರಾಮಕ್ಕೆ ವಾಪಸ್‌ ಆಗಿದ್ದು, ದಿನಸಿ ಅಂಗಡಿ ಮಾಲೀಕರು, ಜೀಪು ಹಾಗೂ ಆಟೊ ಚಾಲಕರು ನಷ್ಟದಲ್ಲಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಪ್ರವಾಸೋದ್ಯಮದ ರಾಯಭಾರಿಯೂ ಆಗಿರುವ ಮೈಸೂರಿನ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ದಸರಾ ಮುಗಿದ ಬಳಿಕ ಕೊಡಗಿಗೆ ಆಗಮಿಸಿ ಉತ್ತೇಜನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲೆಗೆ ಬರುವ ಪ್ರವಾಸಿಗರು ಹಾನಿಗೀಡಾದ ಪ್ರದೇಶಗಳಿಗೆ ತೆರಳಬಾರದು. ಅಲ್ಲಿ ಅಪಾಯವಿದ್ದು, ಉಳಿದ ತಾಣಗಳು ಪ್ರವಾಸಿಗರಿಗೆ ಕಾದಿವೆ ಎಂದು ಕೋರಿದರು. 

ಸಂಘದ ಗೌರವ ಸಲಹೆಗಾರ ಚಿದ್ವಿಲಾಸ್‌ ಮಾತನಾಡಿ, ‘ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯಿಂದ ಪರಿಸರ ನಾಶ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ರೆಸಾರ್ಟ್‌ ಹಾಗೂ ಹೋಂಸ್ಟೇ ಸಂಸ್ಕೃತಿಯಿಂದ ಜಿಲ್ಲೆಯ ಪರಿಸರಕ್ಕೆ ಧಕ್ಕೆ ಆಗಿಲ್ಲ’ ಎಂದು ಸ್ಪಷ್ಟನೆ ನೀಡಿದರು. 

‘ಮೈಸೂರು ದಸರಾದಲ್ಲಿ ಕೊಡಗು ಪ್ರವಾಸೋದ್ಯಮ ಉತ್ತೇಜಿಸಲು ಕಾರ್ಯಕ್ರಮ ರೂಪಿಸಬೇಕು. ರಾಜ್ಯದ ಪ್ರವಾಸೋದ್ಯಮ ಏಜೆಂಟ್‌ಗಳೊಂದಿಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಅವರು ಬೆಂಗಳೂರಿನಲ್ಲಿ ಸಭೆ ನಡೆಸಿ, ಕೊಡಗಿನ ನೈಜ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಪ್ರಚಾರ ಮಾಡಬೇಕು’ ಎಂದು ಕೋರಿದರು.

‘ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಪೋಸ್ಟರ್‌ ಅಳವಡಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು’ ಎಂದು ಮನವಿ ಮಾಡಿದರು. 

ಕಾರ್ಯದರ್ಶಿ ನಾಸೀರ್ ಮಾತನಾಡಿ, ‘ಪ್ರವಾಹದ ಬಳಿಕ ಕೇರಳ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಉತ್ತೇಜನಕ್ಕೆ ಸಾಕಷ್ಟು ಯೋಜನೆ ರೂಪಿಸಿದ್ದು, ಕರ್ನಾಟಕ ಸರ್ಕಾರವೂ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನವೀನ್‌, ಜಾಹೀರ್‌ ಅಹ್ಮದ್‌, ಭಾಸ್ಕರ್‌ ಹಾಜರಿದ್ದರು.

**

ಕೊಡಗಿನ ಪ್ರವಾಸೋದ್ಯಮ ಚೇತರಿಕೆ ಕಾಣದಷ್ಟು ಪೆಟ್ಟು ತಿಂದಿದೆ. ಹೋಟೆಲ್‌ ಮಾಲೀಕರ ಬದುಕು ಬೀದಿಗೆ ಬಿದ್ದಿದೆ. ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ.
–ಡಿ.ಆರ್‌. ನಾಗೇಂದ್ರ ಪ್ರಸಾದ್‌, ಅಧ್ಯಕ್ಷ, ಜಿಲ್ಲಾ ಹೋಟೆಲ್‌, ರೆಸಾರ್ಟ್‌ ಮಾಲೀಕರ ಸಂಘ

**

ಹೋಂಸ್ಟೇ ಹಾಗೂ ರೆಸಾರ್ಟ್‌ ಸಂಸ್ಕೃತಿಯಿಂದ ಕೊಡಗಿನಲ್ಲಿ ಕಾಡು ನಾಶವಾಗಿದೆ ಎಂಬ ಪರಿಸರವಾದಿಗಳ ಆರೋಪ ಸುಳ್ಳು. ಯಾರೂ ಕಾಡು ನಾಶ ಮಾಡಿ, ಕಾನೂನು ಚೌಕಟ್ಟು ಮೀರಿ ಹೋಂಸ್ಟೇ, ರೆಸಾರ್ಟ್‌ ನಡೆಸುತ್ತಿಲ್ಲ.
– ಚಿದ್ವಿಲಾಸ್‌, ಸಲಹೆಗಾರ

**

ಆಗಸ್ಟ್‌ನಲ್ಲಿ ಕೊಡಗು ತೊಂದರೆಗೆ ಸಿಲುಕಿತ್ತು. ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಬಹುದು.  
– ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಪ್ರವಾಸೋದ್ಯಮ ರಾಜಭಾರಿ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !