ಕೊಡಗು ಜಿಲ್ಲೆಯ ಗಡಿಯಲ್ಲಿ ಕಟ್ಟೆಚ್ಚರ

ಭಾನುವಾರ, ಮಾರ್ಚ್ 24, 2019
27 °C
ಕುಟ್ಟ ಠಾಣೆಗೆ ಐಜಿಪಿ ಭೇಟಿ 

ಕೊಡಗು ಜಿಲ್ಲೆಯ ಗಡಿಯಲ್ಲಿ ಕಟ್ಟೆಚ್ಚರ

Published:
Updated:
Prajavani

ಮಡಿಕೇರಿ: ಜಿಲ್ಲೆಯ ಗಡಿಯಲ್ಲಿ ನಕ್ಸಲ್‌ ಶೋಧ ಕಾರ್ಯ ಸೋಮವಾರವೂ ಮುಂದುವರಿಯಿತು. ಕಳೆದ ವಾರ ಕೇರಳ ಜಿಲ್ಲೆಯ ವಯನಾಡು ಪ್ರದೇಶದಲ್ಲಿ ನಡೆದಿದ್ದ ಗುಂಡಿನ ಕಾಳಗದ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಒಂದು ವಾರದಿಂದ ಸತತ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ.

ಗಡಿ ಗ್ರಾಮಗಳಿಗೆ ನಕ್ಸಲರು ನುಸುಳುವ ಸಾಧ್ಯತೆಯಿದ್ದು ನಕ್ಸಲ್‌ ನಿಗ್ರಹ ಪಡೆ (ಎಎನ್ಎಫ್) ಹಾಗೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಈ ಹಿಂದೆ ನಕ್ಸಲರು ಸುಳಿದಾಡಿ ಭಯ ಹುಟ್ಟಿಸಿದ್ದ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಸಿಬ್ಬಂದಿ ನಕ್ಸಲರು ರಾಜ್ಯದ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಜಿಲ್ಲೆಯ ಗಡಿಭಾಗಕ್ಕೆ ಎಎನ್ಎಫ್ ಐಜಿಪಿ ಸೌಮೇಂದು ಮುಖರ್ಜಿ ಅವರು ಸೋಮವಾರ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದರು. ಕುಟ್ಟ ಪೊಲೀಸ್‌ ಠಾಣೆಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಬಳಿಕ ಮಾತನಾಡಿದ ಅವರು, ‘ಜನಸಾಮಾನ್ಯರು ಭಯಪಡುವ ಅಗತ್ಯವಿಲ್ಲ. ನಕ್ಸಲರ ಚಲನವಲನದ ಬಗ್ಗೆ ಮಾಹಿತಿ ಸಿಕ್ಕಿದರೆ ನಮಗೆ ತಿಳಿಸಲು ಮನವಿ ಮಾಡಲಾಗಿದೆ’ ಎಂದು ಹೇಳಿದರು.

‘ನಕ್ಸಲರು ಇದೇ ಭಾಗದಲ್ಲಿ ಬೀಡುಬಿಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಆದರೂ, ಕೊಡಗಿನ ಗಡಿಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಒಟ್ಟು ಐದು ಕಡೆ ಶೋಧ ನಡೆಸಲಾಗುತ್ತಿದೆ’ ಎಂದು ಮುಖರ್ಜಿ ಮಾಹಿತಿ ನೀಡಿದರು.

ಕುಟ್ಟ ಗ್ರಾಮದ ಸುತ್ತಮುತ್ತ 11 ನಕ್ಸಲ್‌ ಪೀಡಿತ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಎಎನ್ಎಫ್ ಪಡೆ ಹಾಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕುಟ್ಟ, ಪೆರುಂಬಾಡಿ, ಮಾಕುಟ್ಟದ ಅಂತರರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ನಡೆಸಿ ಪ್ರವೇಶ ಕಲ್ಪಿಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಕುಟ್ಟ ಸುತ್ತಮುತ್ತ ಪ್ರದೇಶಗಳಾದ ನಾಲಾಡಿ, ಒಡುಂಬೆ, ಕರಿಕೆ, ಮಾಕುಟ್ಟ, ಸಂಪಾಜೆ, ಬಿರುನಾಣಿ ಗ್ರಾಮಗಳಲ್ಲಿ ಎಎನ್ಎಫ್ ಸಿಬ್ಬಂದಿ ಹೈಅಲರ್ಟ್ ಆಗಿದ್ದಾರೆ. ಒಟ್ಟು 70 ಸಿಬ್ಬಂದಿ ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜಿಲ್ಲೆಯ ಗಡಿಪ್ರದೇಶದ ಕೆಲವು ಒಂಟಿ ಮನೆಗಳಿಗೆ ಈ ಹಿಂದೆ ಭೇಟಿ ನೀಡಿದ್ದ ನಕ್ಸಲ್‌ ತಂಡವು ಅಡುಗೆ ಸಾಮಗ್ರಿ ಖರೀದಿಸಿ ಕಣ್ಮರೆಯಾಗಿತ್ತು. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !