ಭಾನುವಾರ, ಡಿಸೆಂಬರ್ 15, 2019
18 °C
ರಾಜಸ್ಥಾನ ಮೂಲದ ನಾಲ್ವರ ಬಂಧನ

ನಕಲಿ ಸಾಧುಗಳು ಪೊಲೀಸರ ಅತಿಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಸಾಧುಗಳ ವೇಷಧರಿಸಿ ರಾಸಾಯನಿಕ ಮಿಶ್ರಿತ ಕೆಂಪು ಬಣ್ಣದ ಪುಡಿಯನ್ನು ಜನರಿಗೆ ನೀಡಿ ಮಂಕು ಕವಿದಂತೆ ಮಾಡಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ನಾಲ್ವರು ಕಳ್ಳರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಕಾಲೂನಾಥ್ (40 ವರ್ಷ), ಶೆರ್ನಾಥ್ (25 ವರ್ಷ), ವಿತ್ರಮಾನಥ್ (45 ವರ್ಷ) ಮತ್ತು ಸುರ್ನಾಥ್ (21 ವರ್ಷ) ಬಂಧಿತರು. ಆರೋಪಿಗಳಿಂದ ಹಿತ್ತಾಳೆ ಲಕ್ಷ್ಮಿ ವಿಗ್ರಹ, ₹ 2,625 ನಗದು, ರುದ್ರಾಕ್ಷಿ ಮತ್ತು ಕುಂಕುಮ ಪುಡಿ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ.24 ರಂದು ಪಟ್ಟಣದ ಐಬಿ ರಸ್ತೆಯ ಜನಶ್ರೀ ಫೈನಾನ್ಸ್‌ಗೆ ಬಂದಿದ್ದ ಸಾಧು ವೇಷಧಾರಿಗಳಿಬ್ಬರು ಫೈನಾನ್ಸ್ ಮಾಲೀಕ ಬಿ.ಎ.ನಾಗೇಗೌಡ ಅವರ ಕೈಗೆ ಕೆಂಪು ಪುಡಿ ನೀಡಿ ಮಂಕು ಕವಿದಂತೆ ಮಾಡಿ ಹಣ ಹಾಗೂ ಬೆಲೆಬಾಳುವ ಮೊಬೈಲ್ ಲಪಟಾಯಿಸಿ ಪರಾರಿಯಾಗಿದ್ದರು. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು ನಾಗೇಗೌಡ ಅವರು ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳ ಬಂಧನ:ಡಿ.02 ರಂದು ಬೆಳಿಗ್ಗೆ 4.30ಕ್ಕೆ ಕೊಪ್ಪ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕುಶಾಲನಗರದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ಪರಿಶೀಲಿಸಿದಾಗ ವಾಹನದಲ್ಲಿ ನಾಲ್ಕು ಜನ ಸಾಧು ವೇಷಧಾರಿಗಳಿದ್ದರು. ಇವರನ್ನು ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡದ ಕಾರಣ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಲಾಯಿತು. ಕುಶಾಲನಗರದಲ್ಲಿ ಮಾಡಿದ ಕೃತ್ಯವನ್ನು ಅವರು ಒಪ್ಪಿಕೊಂಡರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರತಿಕ್ರಿಯಿಸಿ (+)