ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿ ಕೊಡಬಹುದಿತ್ತು

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕ ವ್ಯವಸ್ಥೆ ರೂಪಿಸುತ್ತೇವೆ. ಜಾತಿ, ಧರ್ಮದ ಆಧಾರದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದಿಲ್ಲ. ಎಲ್ಲ ಜಾತಿ, ಧರ್ಮಗಳ ಮಹಿಳೆಯರ ರಕ್ಷಣೆ, ಸಮಗ್ರ ಅಭ್ಯುದಯಕ್ಕಾಗಿ ಶ್ರಮಿಸುತ್ತೇವೆ ಎನ್ನುತ್ತಾರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ.

l ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಮತ್ತು ಕಾಂಗ್ರೆಸ್‌ ನೇತೃತ್ವದ ಈಗಿನ ಸರ್ಕಾರ ಮಹಿಳಾ ಕಾರ್ಯಕ್ರಮಗಳಿಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡಿವೆ?

ಬಿಜೆಪಿ ನೇತೃತ್ವದ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಆದ್ಯತೆ ನೀಡಿತ್ತು. ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಸೈಕಲ್‌, ಭಾಗ್ಯಲಕ್ಷ್ಮಿ ಯೋಜನೆ, ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಹೀಗೆ ಹತ್ತಾರು ಯೋಜನೆಗಳನ್ನು ರೂಪಿಸಿತ್ತು. ಚಿಕ್ಕಂದಿನಿಂದಲೇ ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಯೋಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕಾಲಿಡುತ್ತಲೇ ಶಾದಿ ಭಾಗ್ಯ ಕಾರ್ಯಕ್ರಮ ಜಾರಿ ಮಾಡಿತು. ಅದು ಮುಸ್ಲಿಮರ ತುಷ್ಟೀಕರಣಕ್ಕಾಗಿ ಮಾಡಿದ ಯೋಜನೆಯಾಗಿತ್ತು. ಬೇರೆ ಜಾತಿ ಮತ್ತು ಧರ್ಮಗಳಲ್ಲಿ ಬಡ ಹೆಣ್ಣು ಮಕ್ಕಳು ಇರಲಿಲ್ಲವೇ? ಸಿದ್ದರಾಮಯ್ಯ ಅವರ ಕುರುಬ ಸಮುದಾಯದಲ್ಲಿ ಬಡ ಹೆಣ್ಣು ಮಕ್ಕಳು ಇರಲಿಲ್ಲವೇ? ಯಾವುದೇ ಯೋಜನೆ ಜಾರಿ ಮಾಡಿದರೂ ಜಾತಿ, ಧರ್ಮಗಳ ಮುಖ ನೋಡಬಾರದು.

l ನಿಮ್ಮ ಸರ್ಕಾರ ಬಂದರೆ ಮಹಿಳೆಯರ ರಕ್ಷಣೆಗೆ ಏನು ಕ್ರಮಗಳನ್ನು ಕೈಗೊಳ್ಳುತ್ತೀರಿ?

ಮಹಿಳೆಯರ ರಕ್ಷಣೆಗಾಗಿ ವಿಶೇಷ ಪೊಲೀಸ್‌ ತಂಡ ರಚಿಸುತ್ತೇವೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಅಪಾಯ ಎಂಬ ಸ್ಥಿತಿ ಇದೆ. ವ್ಯವಸ್ಥೆ ಸುಧಾರಣೆಗೆ ಕಾನೂನು ಬಲಪಡಿಸಬೇಕು. ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ಅಪರಾಧ ಮಾಡುವವರಿಗೆ ಭಯ ಹುಟ್ಟಿಸುವುದರ ಜೊತೆಗೆ ಶಿಕ್ಷೆಯೂ ಆಗುತ್ತದೆ ಎಂಬ ಸ್ಥಿತಿಯನ್ನೂ ನಿರ್ಮಾಣ ಮಾಡಲಾಗುತ್ತದೆ. ಮಹಿಳೆಯರು ನಿರ್ಭೀತಿಯಿಂದ ಮತ್ತು ಗೌರವದಿಂದ ತಲೆ ಎತ್ತಿ ನಡೆಯುವ ವ್ಯವಸ್ಥೆ ತರುತ್ತೇವೆ.

l ಬಿಜೆಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಿಲ್ಲ. ಇದರಿಂದ ಮಹಿಳೆಯರಿಗೆ ಅನ್ಯಾಯ ಆಗಿಲ್ಲವೇ?

ಹೌದು, ಇದನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೊಡಬಹುದಿತ್ತು. ಎಂಟು ಮಹಿಳೆಯರಿಗೆ ಟಿಕೆಟ್‌ ನೀಡಲಾಗಿದೆ. ಆದರೆ, ಈ ಬಾರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಗುರಿ ಈಡೇರಿಕೆಗಾಗಿ ನಾವು ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಸರ್ಕಾರ ಬಂದಾಗ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಇದ್ದೇ ಇರುತ್ತವೆ.

l ಸಿದ್ದರಾಮಯ್ಯ ಅವರ ಸರ್ಕಾರ ಜನವಿರೋಧಿ ಎಂದು ಟೀಕಿಸುತ್ತಿದ್ದೀರಿ. ಹಾಗಿದ್ದರೆ, ನಿಮ್ಮನ್ನು ಯಾಕೆ ಮತದಾರರು ಗೆಲ್ಲಿಸಬೇಕು?

ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ತೃಪ್ತಿ ಇದೆ ಎಂಬುದನ್ನು ಬಿಂಬಿಸುವ ಪ್ರಯತ್ನ ನಡೆದಿದೆಯೇ ಹೊರತು, ವಾಸ್ತವ ಹಾಗಿಲ್ಲ. ರಾಜ್ಯದಲ್ಲಿ ರೈತರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆ ಹಾಗೂ ಹಿಂದುಳಿದವರಲ್ಲಿ ತೀವ್ರ ಅತೃಪ್ತಿ ಇದೆ. ಕಾಂಗ್ರೆಸ್ ಆಡಳಿತ ಸಾಕು ಎನ್ನುತ್ತಿದ್ದಾರೆ. ಜಾತಿ ತಾರತಮ್ಯವೇ ಈ ಸರ್ಕಾರದ ಹೆಗ್ಗುರುತು. ಅದೇ ಕಾರಣಕ್ಕೆ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ. ರಾತ್ರೋರಾತ್ರಿ ವರ್ಗಾವಣೆ ಮಾಡಲಾಗುತ್ತಿದೆ. ಕಿರುಕುಳದ ಕಾರಣ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಕಿರುಕುಳ, ದರ್ಪ, ಅಹಂಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಜನ ಕಾಯುತ್ತಿದ್ದಾರೆ. ತಳಮಟ್ಟಕ್ಕೆ ಹೋಗಿ ಜನರನ್ನು ಮಾತನಾಡಿಸಿದರೆ ಅವರ ಆಕ್ರೋಶ ಗೊತ್ತಾಗುತ್ತದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಎಲ್ಲ ಜಾತಿ, ಧರ್ಮದ ಜನರನ್ನೂ ಒಂದೇ ರೀತಿ ನೋಡುತ್ತಿದ್ದೆವು. ಅಭಿವೃದ್ಧಿಗೆ ಆದ್ಯತೆ ನೀಡಿದ್ದೆವು.

l ಜಾತಿ ಮತ್ತು ಧರ್ಮಗಳ ವಿಚಾರವನ್ನು ಕೆದಕುತ್ತಿರುವುದು ಬಿಜೆಪಿಯಲ್ಲವೇ?

ವೀರಶೈವ– ಲಿಂಗಾಯತ ಎಂದು ಒಡೆದವರು ಯಾರು? ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ಮಹಾಪಾಪ ಎಂದರೆ, ಧರ್ಮವನ್ನು ಒಡೆದಿದ್ದು. ಗ್ರಾಮಾಂತರ ಪ್ರದೇಶದ ಜನ ಲಿಂಗಾಯತ ಎನ್ನುತ್ತಾರೆ, ನಗರ ಪ್ರದೇಶದ ಜನ ವೀರಶೈವ ಎನ್ನುತ್ತಾರೆ. ಆದರೆ, ಮುಗ್ಧ ಜನರಲ್ಲಿ ತಾರತಮ್ಯದ ಬೀಜ ಬಿತ್ತಿದವರು ಇವರೇ. ವೋಟ್‌ ಬ್ಯಾಂಕ್‌ ಸೃಷ್ಟಿಸುವ ಕಾರಣಕ್ಕೆ ಧರ್ಮವನ್ನು ಒಡೆದರು. ಜನ ಬೀದಿಯಲ್ಲಿ ನಿಂತು ಹೊಡೆದಾಡಿಕೊಳ್ಳುವಂತೆ ಮಾಡಿದರು. ಜಾತಿ ಸಮೀಕ್ಷೆ ನಡೆಸುವ ಉದ್ದೇಶವೇ ಜಾತಿ, ಉಪಜಾತಿಗಳ ನಡುವೆ ಸಂಘರ್ಷ ಹುಟ್ಟಿಸುವುದಾಗಿತ್ತು.
ಎಲ್ಲ ಹಂತದಲ್ಲೂ ಜಾತಿಯ ವಿಷ ಬೀಜ ಬಿತ್ತಿದರು.

l ಶಿಸ್ತಿನ ಪಕ್ಷದಲ್ಲಿ ಟಿಕೆಟ್‌ ಹಂಚಿಕೆಯಲ್ಲೂ ಗೊಂದಲ ಉಂಟಾಗಿದ್ದು ಏಕೆ?

ಟಿಕೆಟ್‌ ಹಂಚಿಕೆಯಲ್ಲಿ ಗೊಂದಲ ಆಗಿರುವುದು ನಿಜ. ಬಿಜೆಪಿ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಇದೇ ಸ್ಥಿತಿ ಇದೆ. ರಾಜಕೀಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಬರುತ್ತಿರುವುದರಿಂದ ಟಿಕೆಟ್‌ಗೆ ಭಾರಿ ಪೈಪೋಟಿ ನಡೆದಿದೆ. ಟಿಕೆಟ್‌ ಸಿಗದೇ ಇರುವವರ ಜತೆ ಮಾತುಕತೆ ನಡೆಸಿ, ಸಮಾಧಾನಪಡಿಸುವ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಟಿಕೆಟ್‌ ಕೊಡಲಿಕ್ಕೆ ಆಗುವುದಿಲ್ಲ. ಪಕ್ಷದ ಆಂತರಿಕ ಸಮೀಕ್ಷೆ ವರದಿ ಪ್ರಕಾರ, ಗೆಲ್ಲುವವರಿಗೆ ಟಿಕೆಟ್‌ ನೀಡಿಕೆಯಲ್ಲಿ ಆದ್ಯತೆ ನೀಡಿದ್ದೇವೆ.

l ಈ ಬಾರಿ ಟಿಕೆಟ್‌ ನೀಡಿಕೆಯಲ್ಲಿ ಕಳಂಕಿತರಿಗೆ, ಜನಾರ್ದನ ರೆಡ್ಡಿ ಸಹೋದರರಿಗೆ ಮಣೆ ಹಾಕಿದ್ದು ಎಷ್ಟರ ಮಟ್ಟಿಗೆ ಸರಿ?

ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿಯವರಿಗೆ ಟಕೆಟ್‌ ನೀಡಿರುವುದು ನಿಜ. ಆದರೆ, ಇವರ ವಿರುದ್ಧ ಯಾವುದೇ ಆರೋಪಗಳು ಅಥವಾ  ಕೇಸ್‌ಗಳು ದಾಖಲಾಗಿಲ್ಲ. ಕಳೆದ ಐದು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಲೇ ಬಂದಿದ್ದಾರೆ.

l ಯಶವಂತಪುರ ಕ್ಷೇತ್ರದಲ್ಲಿ ನಿಮಗೆ ಟಿಕೆಟ್‌ ನಿರಾಕರಿಸಲಾಯಿತೇ?

ಇಲ್ಲಿ ಕಾರ್ಯಕರ್ತರ ಒತ್ತಡ ಇದ್ದದ್ದು ನಿಜ. ಈಗ ಚುನಾವಣೆಗೆ ನಿಂತು ಇನ್ನು ಆರು ತಿಂಗಳಲ್ಲಿ ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಕಾರಣವಾಗುವುದು ಬೇಡ, ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಸೂಕ್ತ ಎಂಬ ಕಾರಣಕ್ಕೆ ಯಶವಂತಪುರದಿಂದ ಸ್ಪರ್ಧಿಸುವುದಿಲ್ಲ ಎಂದು ವರಿಷ್ಠರಿಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT