ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಭೂಕುಸಿತಕ್ಕೆ ಕಾಡು ನಾಶ ಕಾರಣ: ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯ

ಇಂದು ಶಾಲಾ, ಕಾಲೇಜು ಆರಂಭ
Last Updated 22 ಆಗಸ್ಟ್ 2018, 19:32 IST
ಅಕ್ಷರ ಗಾತ್ರ

ಮಡಿಕೇರಿ: ಮಹಾಮಳೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಕೊಂಚ ತಗ್ಗಿದ್ದು, ಕಣ್ಮರೆ ಆಗಿರುವವರಿಗೆ ಹುಡುಕಾಟ ಮುಂದುವರೆದಿದೆ. ತಾಲ್ಲೂಕಿನ ಜೋಡುಪಾಲದ ಭೂಕುಸಿತ ಪ್ರದೇಶಕ್ಕೆ ಭೂಗರ್ಭ ಶಾಸ್ತ್ರಜ್ಞರು ಬುಧವಾರ ಭೇಟಿ ನೀಡಿ, ಮೊದಲ ಹಂತದ ಅಧ್ಯಯನ ಆರಂಭಿಸಿದ್ದಾರೆ.

‘ಜೋಡುಪಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ದೀರ್ಘ ಅಧ್ಯಯನ ಮಾಡಬೇಕು. ಎಲ್ಲಿ ಸ್ಥಿರ, ಅಸ್ಥಿರ ಭೂಮಿಯಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಬಳಿಕ ಸ್ಥಿರ ವಲಯ ಪ್ರದೇಶದಲ್ಲಿ ಮಾತ್ರ ಮುಂದೆ ವಾಸಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಈ ಅಧ್ಯಯನ’ ಎಂದು ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ವಿಜ್ಞಾನಿ ಡಾ.ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಡು ಕಡಿದು ಆಧುನಿಕ ವ್ಯವಸ್ಥೆ ಮಾಡಲಾಗಿದೆ. ಮೂಲ ರಚನೆ, ಮೂಲಪದರಕ್ಕೆ ಹಾನಿಯಾಗಿದೆ’ ಎಂದೂ ವಿವರಿಸಿದರು.

‌ಅನೇಕ ಭಾಗಗಳು ವಾಸ ಯೋಗ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಳೆ ನಿಂತರೆ ವಿವರವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭೂಗರ್ಭ ಶಾಸ್ತ್ರಜ್ಞ ಎಚ್.ಎನ್.ಪ್ರಕಾಶ್ ಮಾಹಿತಿ ನೀಡಿದರು.

ಮಕ್ಕಂದೂರು, ಮುಕ್ಕೊಡ್ಲು, ಎಮ್ಮೆತ್ತಾಳ, ತಂತಿಪಾಲದಲ್ಲಿ ಡ್ರೋನ್‌ ಬಳಸಿ, ಕಣ್ಮರೆಯಾದವವರ ಪತ್ತೆಕಾರ್ಯವನ್ನು ರಕ್ಷಣಾ ಸಿಬ್ಬಂದಿ ನಡೆಸಿದರು. ಡ್ರೋನ್‌ನಲ್ಲಿ ಭೂಕುಸಿತ, ಮನೆ ಅವಶೇಷಗಳ ದೃಶ್ಯಗಳು ಸೆರೆಯಾಗಿವೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು.

ಇಬ್ಬರ ಮೃತದೇಹಗಳು ಎಮ್ಮೆತ್ತಾಳ ಗ್ರಾಮದಲ್ಲಿ ಬುಧವಾರ ಪತ್ತೆಯಾಗಿವೆ. ಲೀಲಾವತಿ (66), ಉಮೇಶ್‌ (36) ಮೃತಪಟ್ಟವರು. ಕಾಟಕೇರಿಯಲ್ಲಿ ಭೂಕುಸಿತದಿಂದ ಸಾವನ್ನಪ್ಪಿದ್ದ ಪವನ್‌ (33) ಮೃತದೇಹವೂ ಸಿಕ್ಕಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಶಾಲೆ ಆರಂಭ: ಅಬ್ಬರ ತಗ್ಗಿದ್ದು, ಶಾಲೆ, ಕಾಲೇಜುಗಳು ಗುರುವಾರ ಆರಂಭವಾಗಲಿವೆ. ಸಂಕಷ್ಟಕ್ಕೆ ಒಳಗಾಗಿರುವ ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ 61 ಶಾಲೆಗಳು ಆರಂಭವಾಗುತ್ತಿಲ್ಲ.

ವಿವಿಧೆಡೆ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯ ಮುಂದುವರೆದಿದೆ. ಅಲ್ಲಲ್ಲಿ ಕಾಲುದಾರಿ ನಿರ್ಮಿಸಿ, ಜನರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಸಂತ್ರಸ್ತರು ಮನೆಬಿದ್ದ ಸ್ಥಳಕ್ಕೆ ಬಂದು ವೀಕ್ಷಿಸಿ ಮರುಕಪಟ್ಟರು.

₹5 ಕೋಟಿ ನಷ್ಟ: ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಚುರುಕಾಗಿದ್ದು, ಶೇ 90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್ ತಿಳಿಸಿದ್ದಾರೆ.

ಅತಿವೃಷ್ಟಿಯಿಂದ ಸೆಸ್ಕ್‌ಗೆ ₹ 5 ಕೋಟಿ ನಷ್ಟವಾಗಿದೆ. ಮಡಿಕೇರಿ ತಾಲ್ಲೂಕಿನ ದೇವಸ್ತೂರು, ಬೆಟ್ಟತ್ತೂರು, ಪಾಟಿ, ಹಚ್ಚಿನಾಡು, ದೇವರಕೊಲ್ಲಿ, ಹಮ್ಮಿಯಾಲ, ಬಾಳೆಬೆಳಚು, ಮುಕ್ಕೊಡ್ಲು, ಮಕ್ಕಂದೂರು, ಜೋಡುಪಾಲ, ತಂತಿಪಾಲ, ಮದೆನಾಡು, 2ನೇ ಮೊಣ್ಣಂಗೇರಿ, ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಬೀಡಳ್ಳಿ, ಗರ್ವಾಲೆ, ಸೂರ್ಲಬ್ಬಿ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

3,500 ವಿದ್ಯುತ್ ಕಂಬಗಳು, 300 ವಿದ್ಯುತ್ ಪರಿವರ್ತಕಗಳು, 35ರಿಂದ 40 ಕಿ.ಮೀ.ನಷ್ಟು ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ. ಹೊರ ಜಿಲ್ಲೆಗಳಿಂದ 250 ಹೆಚ್ಚುವರಿ ಸಿಬ್ಬಂದಿ ಬಂದಿದ್ದಾರೆ ಎಂದರು.

ರಿಕ್ಟರ್‌ ಮಾಪನ ಅಳವಡಿಕೆಗೆ ಸಿದ್ಧತೆ

ಕೊಡಗಿನಲ್ಲಿ ಭೂಕಂಪನ ಆಗಲಿದೆ ಎಂಬ ವದಂತಿ ಹಬ್ಬಿದ್ದು, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ನವೋದಯ ಶಾಲೆ ಆವರಣದಲ್ಲಿ ರಿಕ್ಟರ್‌ ಮಾಪನ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ.

ಹೈದರಾಬಾದ್‌ನಿಂದ ಬುಧವಾರ ಬಂದಿರುವ ತಜ್ಞರು, ಬಿಎಸ್‌ಎನ್‌ಎಲ್ ಸಿಬ್ಬಂದಿ ಯಂತ್ರಗಳ ಜೋಡಣೆ, ಲೈನ್‌ ಅಳವಡಿಕೆ ಕೆಲಸ ಮಾಡುತ್ತಿದ್ದಾರೆ.

‘5ಕ್ಕಿಂತ ಹೆಚ್ಚಿನ ತೀವ್ರತೆ ಅಳೆಯುವ ಸಾಧನ ಅಳವಡಿಕೆ ಮಾಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ. ಕುಶಾಲನಗರದ ಹಾರಂಗಿ ಜಲಾಶಯದಲ್ಲಿ ರಿಕ್ಟರ್‌ ಮಾಪನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT